ಹೊಸಪೇಟೆ: ಯೋಗ, ಧ್ಯಾನ, ಮನಸ್ಸು, ಶರೀರಕ್ಕೆ ಬಹಳ ಅಗತ್ಯವಾಗಿದೆ. ನಿತ್ಯ ಒತ್ತಡದಲ್ಲೇ ಕರ್ತವ್ಯ ನಿರ್ವಹಿಸುವ ಪೊಲೀಸರಿಗೂ ಯೋಗ, ಧ್ಯಾನ ಬೇಕೇ ಬೇಕು. ಪತಂಜಲಿ ಯೋಗ ಸಮಿತಿಯವರು ಪೊಲೀಸರಿಗೆ ವಿಶೇಷ ಯೋಗ ಶಿಬಿರ ನಡೆಸುವ ಮೂಲಕ ಸಮಾಜದ ರಕ್ಷಕರ ಆರೋಗ್ಯ ಸುಧಾರಣೆಗೆ ನೆರವಾಗಬೇಕು ಎಂದು ಎಸ್ಪಿ ಎಸ್.ಜಾಹ್ನವಿ ಹೇಳಿದರು.

ಇಲ್ಲಿನ ಕೊಟ್ಟೂರುಸ್ವಾಮಿ ಮಠದ ಆವರಣದಲ್ಲಿ ಮಹಿಳಾ ಪತಂಜಲಿ ಯೋಗ ಸಮಿತಿ, ಪತಂಜಲಿ ಯೋಗ ಸಮಿತಿಗಳ ಆಶ್ರಯದಲ್ಲಿ ಭಾನುವಾರ ಸಂಜೆ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮ್ಮ ದೈನಂದಿನ ಕೆಲಸ ಮಾಡುತ್ತಲೇ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ಮಹಿಳೆಯರು ಪತಂಜಲಿ ಸಮಿತಿಯಲ್ಲಿ ಇದ್ದು, ಅವರು ಸಮಾಜಕ್ಕೆ ಆದರ್ಶರಾಗಿದ್ದಾರೆ. ಪೊಲೀಸರಿಗೆ ಸಹ ಇವರ ಸೇವೆ ಲಭಿಸಬೇಕಾಗಿದೆ ಎಂದರು.

ಮಹಿಳೆಯರು ಮನೆಯಿಂದ ಹೊರಬಂದು ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿಸಿಕೊಂಡರೆ ಅದು ಪರಿಪೂರ್ಣ ಎನಿಸುವ ರೀತಿಯಲ್ಲೇ ತೊಡಗಿಕೊಂಡಿದ್ದಾರೆ. ಅವರ ಕೆಲಸ ಹೃದಯ ಮತ್ತು ಮನಸ್ಸಿಗೆ ತಟ್ಟುವಂತೆಯೂ ಇರುತ್ತದೆ. ‍‍ಪತಂಜಲಿ ಸಮಿತಿಯಲ್ಲಿ ತೊಡಗಿಸಿಕೊಂಡವರ ಸಾಧನೆ ಇದನ್ನು ಬಿಂಬಿಸುತ್ತದೆ ಎಂದರು.

ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರ ಭವರ್‌ಲಾಲ್ ಆರ್ಯ ಮಾತನಾಡಿ, ಸದ್ಯದ ಜಾಗತಿಕ ಕ್ಷೋಭೆಗೆ ಯೋಗ ಉತ್ತಮ ಪರಿಹಾರ ಎಂದರು.


ಮಹಿಳಾ ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಶ್ರೀದೇವಿ ಅಶೋಕ್‌ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಭಾರ ಗೌರಮ್ಮ ಬ್ಯಾಳಿ ಅವರು ಯೋಗದಿಂದ ತಮ್ಮ ಅನಾರೋಗ್ಯ ಮೆಟ್ಟಿನಿಂತಿದ್ದನ್ನು ಹಾಗೂ ತಮ್ಮ ಪಿಂಚಣಿ ದುಡ್ಡನ್ನು ಸಂಪೂರ್ಣ ಯೋಗ ಸಂಬಂಧಿತ ಕೆಲಸಗಳಿಗೇ ಮೀಸಲಿಟ್ಟಿದ್ದನ್ನು ಅವರು ಸಭೆಯಲ್ಲಿ ತಿಳಿಸಿದರು.

ಪತಂಜಲಿ ಯೋಗ ಸಮಿತಿಯ ಆಜೀವ ಸದಸ್ಯರು, ಯೋಗ ಸಾಧಕರಾದ ಕಿರಣಕುಮಾರ್, ಬಾಲಚಂದ್ರ ಶರ್ಮಾ, ರಾಜೇಶ್ ಕಾರ್ವಾ, ವಿಠೋಬಣ್ಣ, ವೀರೇಶ್‌ ಇದ್ದರು.

ಸನ್ಮಾನ:

ಇದೇ ಸಂಧರ್ಭದಲ್ಲಿ ಹಲವು ವರ್ಷಗಳಿಂದ ಯೋಗವನ್ನು ಬೋಧಿಸುತ್ತಾ, ಸಾವಿರಾರು ಮಂದಿಗೆ ಯೋಗದ ಗುಟ್ಟು ಹೇಳಿಕೊಟ್ಟ ಮಹಿಳಾ ಯೋಗ ಸಾಧಕರಾದ ಉಮಾ ವಿಶ್ವನಾಥ್‌, ದಾಕ್ಷಾಯಿಣಿ ಶಿವಕುಮಾರ್‌, ರೇಣುಕಾ ಪಾಟೀಲ್, ರೇಣುಕಾ ಪರಗಿ, ಗೌರಮ್ಮ ಬ್ಯಾಳಿ ಮತ್ತು ಮಂಗಳಮ್ಮ ಅವರನ್ನು ಸನ್ಮಾನಿಸಲಾಯಿತು.

ಜತೆಗೆ ಹಲವು ಯೋಗ ಕೇಂದ್ರಗಳಲ್ಲಿ ಸಕ್ರಿಯರಾಗಿರುವ ಮಹಿಳೆಯರನ್ನು ಗೌರವಿಸಲಾಯಿತು.

ಯೋಗ ನೃತ್ಯ ಸಹಿತ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು.

ಪತ್ರಕರ್ತ ಅನಂತ ಜೋಶಿ ಸ್ವಾಗತಿಸಿದರು. ಹಂಪಿ ವಿವಿಯ ಪ್ರಾಧ್ಯಾಪಕ ಪ್ರೊ.ಎಫ್‌.ಟಿ. ಹಳ್ಳಿಕೇರಿ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಜಮಖಂಡಿಕರ್‌ ವಂದಿಸಿದರು. ಶೈಲಜಾ ಕಳಕಪ್ಪ ನಿರೂಪಿಸಿದರು.