ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಸಹಕಾರ ಸಂಘದ ಸಭೆಯಲ್ಲಿ ನಡೆದ ತಳ್ಳಾಟದ ಪ್ರಕರಣದಲ್ಲಿ ನಾಲ್ವರಿಗೆ ಕಾನೂನು ಬಾಹಿರವಾಗಿ ಕೈಕೊಳ ತೊಡಿಸಿ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಅಪರಾಧ ಎಸಗಿದ ಪೊಲೀಸ್ ಅಧಿಕಾರಿಯೋರ್ವರಿಗೆ 50 ಸಾವಿರ ರು ದಂಡ ವಿಧಿಸಿ ಆ ಹಣವನ್ನು ಅಪಮಾನಿಸಲ್ಪಟ್ಟ ವ್ಯಕ್ತಿಗಳಿಗೆ ನೀಡುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ.ತಾಲೂಕಿನ ಮುನಿಯೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು 19-12-21 ರಲ್ಲಿ ಕರೆಯಲಾಗಿತ್ತು. ಆ ವೇಳೆ ಸಂಘದ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ವಾಗ್ವಾದ ನಡೆಯಿತು. ಆ ವೇಳೆ ಸದಸ್ಯರಾದ ವೆಂಕಟೇಶ್, ಅಶ್ವಥ್, ಶಿವಕುಮಾರ್, ವಸಂತ್ ಕುಮಾರ್ ಸೇರಿದಂತೆ ಹಲವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಗಿಡ್ಡೇಗೌಡ ಎಂಬುವವರು 22-12-21 ರಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ ಐ ಶಿವಲಿಂಗಪ್ಪ ತಮ್ಮ ಸಿಬ್ಬಂದಿಗಳೊಂದಿಗೆ ಡಿ.22 ರ ರಾತ್ರಿ ಆರೋಪಿಗಳನ್ನು ಮುನಿಯೂರು ಗ್ರಾಮದಿಂದ ವಶಕ್ಕೆ ಪಡೆದಿದ್ದರು. ಮರು ದಿನ ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಮತ್ತು ನ್ಯಾಯಾಲಯದಿಂದ ಕರೆ ತರುವ ವೇಳೆ ಹಾಗೂ ಜೈಲಿಗೆ ಕಳಿಸುವ ವೇಳೆ ಆರೋಪಿಗಳಿಗೆ ಎಎಸ್ಐ ಶಿವಲಿಂಗಪ್ಪ ಕೈ ಕೋಳ ಹಾಕಿದ್ದರು. ನಿಯಮದ ಪ್ರಕಾರ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಪಡುವ ಹಾಗೂ ಒಳಪಟ್ಟವರಿಗೆ ಕೈ ಕೋಳ ತೊಡಿಸುವಂತಿಲ್ಲ ಎಂಬ ನಿಯಮವಿದೆ. ಆದರೆ ಆರೋಪಿಗಳಿಗೆ ಕೈ ಕೋಳ ತೊಡಿಸಲಾಗಿತ್ತು. ಅದನ್ನು ಪ್ರಶ್ನಿಸಿ ಆರೋಪಿಗಳು ಮಾವಿನಕೆರೆ ಸಿದ್ದಲಿಂಗೇಗೌಡ ರವರ ಮಾರ್ಗದರ್ಶನದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಆಯೋಗ ಪೊಲೀಸ್ ಅಧಿಕಾರಿಗಳು ಮಾಡಿರುವುದು ತಪ್ಪು ಎಂದು ತೀರ್ಪು ನೀಡಿ, ಎ ಎಸ್ ಐ ಶಿವಲಿಂಗಯ್ಯನವರಿಗೆ ದೂರುದಾರರಾಗಿರುವ ವೆಂಕಟೇಶ್, ಅಶ್ವಥ್, ಶಿವಕುಮಾರ್, ವಸಂತ್ ಕುಮಾರ್ ಮತ್ತು ಯೋಗಾನಂದ್ ರವರಿಗೆ ತಲಾ 10 ಸಾವಿರ ರುಗಳನ್ನು ಪರಿಹಾರವಾಗಿ ನೀಡಬೇಕೆಂದು ಆದೇಶಿಸಿದೆ. ಅಲ್ಲದೇ ಇಲಾಖಾ ವಿಚಾರಣೆ ಮಾಡಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪರಿಹಾರ ರೂಪದಲ್ಲಿ ನೀಡುವ ಹಣವನ್ನು ಅವರ ವೇತನದಿಂದಲೇ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದೂ ಸಹ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ. ಸದ್ಯ ಶಿವಲಿಂಗಯ್ಯ ಕಿಬ್ಬನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.