ಸಾರಾಂಶ
ಬಳ್ಳಾರಿ: ನಿತ್ಯ ಕಾನೂನು ಸುವ್ಯವಸ್ಥೆ ಕೆಲಸದಲ್ಲಿ ಬಿಡುವಿಲ್ಲದೇ ತೊಡಗಿಸಿಕೊಳ್ಳುತ್ತಿದ್ದ ಪೊಲೀಸರು, ಕರ್ತವ್ಯದ ಒತ್ತಡ ಬದಿಗೊತ್ತಿ ಮೈದಾನಕ್ಕಿಳಿದಿದ್ದರು. ಮೇಲಧಿಕಾರಿಗಳು, ಕಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಸಮನಾಗಿ ಪಾಲ್ಗೊಂಡು ಕ್ರೀಡಾಸಕ್ತಿ ಪ್ರದರ್ಶಿಸಿದರು.
ಹೌದು, ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದ ಗುರುವಾರ ಶುರುವಾದ ಜಿಲ್ಲಾ ಪೊಲೀಸ್ ಕ್ರೀಡಾಕೂಟದಲ್ಲಿ ಜಿಲ್ಲೆಯ ನಾನಾ ಠಾಣೆಗಳಿಂದ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಪೇದೆಗಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಒತ್ತಡ ಬದುಕಿನಿಂದ ರಿಲ್ಯಾಕ್ಸ್ ಆದರು. ವಾಲಿಬಾಲ್, ಕಬಡ್ಡಿ, ಟೇಬಲ್ ಟೆನ್ನಿಸ್, ಕ್ರಿಕೆಟ್, ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಹಗ್ಗ ಜಗ್ಗಾಟ, ಫೈರಿಂಗ್ ಹೀಗೆ ನಾನಾ ಕ್ರೀಡೆಗಳಲ್ಲಿ ಉತ್ಸಾಹದಿಂದ ಪೊಲೀಸರು ಭಾಗವಹಿಸಿದ್ದರು.ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಅನೇಕರು ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಪೊಲೀಸರಿಗೆ ಉತ್ತೇಜನ ನೀಡಿದರು.
ಮೂರು ದಿನಗಳ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ದೈನಂದಿನ ಜೀವನದಲ್ಲಿ ಕ್ರೀಡೆ ಮತ್ತಿತರ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದಾಗುವ ಆರೋಗ್ಯಕರ ಅನುಕೂಲಗಳ ಕುರಿತು ತಿಳಿಸಿದರು.ಕ್ರೀಡೆ ಎಂಬುದು ಕೇವಲ ಆಟವಲ್ಲ. ತಂಡ ನಿರ್ವಹಣೆ, ಪರಿಶ್ರಮ ಹಾಗೂ ಶಿಸ್ತಿನ ಕ್ರಮವಾಗಿದೆ. ಪ್ರತಿನಿತ್ಯ 30 ರಿಂದ 40 ನಿಮಿಷಗಳ ಕಾಲ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವಿಕೆಯು ಉತ್ತಮ ಆರೋಗ್ಯ ರೂಪಿಸಿಕೊಳ್ಳುವ ಪ್ರಮುಖ ಆಯಾಮವಾಗಿದೆ ಎಂದು ಹೇಳಿದರು.
ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮಾಜದಲ್ಲಿ ಕಾನೂನು, ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ಹಗಲು-ಇರುಳು ಎನ್ನದೇ ಕರ್ತವ್ಯ ನಿರತರಾಗಿರುತ್ತಾರೆ. ತಮ್ಮ ಕೆಲಸಗಳ ಒತ್ತಡವನ್ನು ನಿಗ್ರಹಿಸಿಕೊಳ್ಳಲು ಕ್ರೀಡಾಕೂಟಗಳು ಸಹಕಾರಿಯಾಗುತ್ತದೆ ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಪೊಲೀಸ್ ಕ್ರೀಡಾಕೂಟದ ಮಹತ್ವ ಕುರಿತು ತಿಳಿಸಿದರು.
ಪೊಲೀಸ್ ವಾರ್ಷಿಕ ಕ್ರೀಡಾಕೂಟ-2024ರಲ್ಲಿ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕವಾಗಿ ಕ್ರಿಕೆಟ್, ವಾಲಿಬಾಲ್, ಕಬಡ್ಡಿ, ಟೇಬಲ್ ಟೆನ್ನಿಸ್, ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಹಗ್ಗ ಜಗ್ಗಾಟ ಹಾಗೂ ಗುಂಡು ಹಾರಿಸುವ (ಫೈರಿಂಗ್) ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಜಿಲ್ಲೆಯ ಒಟ್ಟು ಆರು ತಂಡಗಳಿಂದ 120ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.ಜಿಲ್ಲಾ ಪೊಲೀಸ್ ವಾರ್ಷಿಕ-2024 ಕ್ರೀಡಾಕೂಟದಲ್ಲಿ ಆರು ತಂಡಗಳ ಬಾವುಟಗಳೊಂದಿಗೆ ಕ್ರೀಡಾಪಟುಗಳ ಆಕರ್ಷಕ ಪಥ ಸಂಚಲನ ನಡೆಯಿತು.
ಪಥ ಸಂಚಲನವು ಕ್ರೀಡಾಜ್ಯೋತಿಯೊಂದಿಗೆ ಮೈದಾನದಲ್ಲಿ ಸಂಚರಿಸಿ, ವೇದಿಕೆಯ ಮುಂಭಾಗ ತಲುಪಿ ನಿರ್ಗಮನಗೊಂಡಿತು. ಇದೇ ವೇಳೆ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ನವೀನಕುಮಾರ್ ಎನ್., ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು. ಬಳ್ಳಾರಿ ಜಿಲ್ಲೆ ವಿಭಜನೆಗೊಂಡ ಹಿನ್ನೆಲೆಯಲ್ಲಿ ಈ ಹಿಂದಿನ ವರ್ಷಗಳ ಹೋಲಿಸಿದರೆ ಕ್ರೀಡಾಪಟುಗಳ ಸಂಖ್ಯೆ ಇಳಿಮುಖವಿತ್ತು.
ಬಳ್ಳಾರಿಯ ಡಿಎಆರ್ ಮೈದಾನದಲ್ಲಿ ಗುರುವಾರ ಆರಂಭವಾದ ಮೂರು ದಿನಗಳ ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಚಾಲನೆ ನೀಡಿದರು.