1 ಲಕ್ಷ ಮೌಲ್ಯದ ಅಕ್ರಮ ಮದ್ಯ ಸಾಗಿಸುತ್ತಿದ್ದ ಪೊಲೀಸ್ ಸಿಬ್ಬಂದಿ ವಶಕ್ಕೆ!

| Published : Jun 13 2024, 12:55 AM IST / Updated: Jun 13 2024, 01:17 PM IST

1 ಲಕ್ಷ ಮೌಲ್ಯದ ಅಕ್ರಮ ಮದ್ಯ ಸಾಗಿಸುತ್ತಿದ್ದ ಪೊಲೀಸ್ ಸಿಬ್ಬಂದಿ ವಶಕ್ಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರದ ಕದ್ರಾ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ ಲಮಾಣಿ ಹಾಗೂ ಕಾರವಾರ ನಿವಾಸಿ ನಿಜಾಮುದ್ದೀನ್ ಎಂಬವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಗೋಕರ್ಣ: ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಕಾರಿನಲ್ಲಿ ಅಕ್ರಮವಾಗಿ 1 ಲಕ್ಷ ಮೌಲ್ಯದ ಗೋವಾ ಮದ್ಯ ಸಾಗಿಸುತ್ತಿದ್ದ ವೇಳೆ ಮಾಲು ಸಮೇತ ಸಿಕ್ಕಿಬಿದ್ದ ಘಟನೆ ಬುಧವಾರ ಇಲ್ಲಿನ ಓಂ ಬೀಚ್ ರಸ್ತೆಯಲ್ಲಿ ನಡೆದಿದೆ.ಇಲ್ಲಿನ ರೆಸಾರ್ಟ್‌, ಹೋಟೆಲ್, ಹೋಮ್ ಸ್ಟೇಗಳಿಗೆ ಪೂರೈಕೆ ಮಾಡಲು ಮದ್ಯವನ್ನು ಸಾಗಿಸುತ್ತಿದ್ದರು ಎನ್ನಲಾಗಿದ್ದು, ಖಚಿತ ಮಾಹಿತಿ ಆಧರಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕಾರನ್ನು ತಡೆಯಲು ಹೋದ ಸಮಯದಲ್ಲಿ ಪೊಲೀಸರ ಮೇಲೆ ಹಾಯಿಸಲು ಯತ್ನಿಸಿದ್ದು, ಆದರೂ ಪೊಲೀಸರು ಹರಸಾಹಸ ಮಾಡಿ ಆರೋಪಿಯನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ.

ಕಾರವಾರದ ಕದ್ರಾ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ ಲಮಾಣಿ ಹಾಗೂ ಕಾರವಾರ ನಿವಾಸಿ ನಿಜಾಮುದ್ದೀನ್ ಎಂಬವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರಂತರ ಪೂರೈಕೆ?: ಕಾರವಾರ ಕದ್ರಾ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಈ ಪೊಲೀಸ್ ಸಿಬ್ಬಂದಿ ಖಡಕ್ ಎಸ್‌ಪಿ ಸುಮನ್ ಪೆನ್ನೇಕರ ಅವರ ಅಧಿಕಾರಾವಧಿಯಲ್ಲಿ ಜೋಯಿಡಾಕ್ಕೆ ಶಿಕ್ಷಾ ವರ್ಗಾವಣೆಗೊಂಡಿದ್ದರು ಎನ್ನಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬದಲಾವಣೆ ನಂತರ ಪುನಃ ಕಾರವಾರಕ್ಕೆ ವರ್ಗಾವಣೆ ಮಾಡಿಸಿಕೊಂಡು ಅಕ್ರಮ ಮದ್ಯ ಸಾಗಾಟ ದಂಧೆ ನಡೆಸುತ್ತಿದ್ದ ಎಂಬ ಮಾತು ಕೇಳಿ ಬಂದಿದೆ. ಪ್ರವಾಸಿ ತಾಣದ ಹಲವು ಕಡೆ ನಿರಂತರವಾಗಿ ಮದ್ಯ ಸರಬರಾಜು ನಡೆಯುತ್ತಿದ್ದ ಬಗ್ಗೆ ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಅಲ್ಲದೇ ಈ ಸಿಬ್ಬಂದಿ ಹಿರಿಯ ಅಧಿಕಾರಿಗಳು, ರಾಜಕಾರಣಿಗಳ ಪ್ರಭಾವ ಬಳಸಿಕೊಂಡು ಬಿಂದಾಸ್ ಆಗಿ ದಂಧೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನು ಈ ಅಕ್ರಮ ಮದ್ಯವು ಇಲ್ಲಿನ ಯಾವ ರೆಸಾರ್ಟ್‌ಗೆ ತಲುಪುತ್ತಿತ್ತು, ಪಡೆದುಕೊಳ್ಳುವವರು ಯಾರು ಎಂಬುದನ್ನು ತನಿಖೆಯಿಂದ ಬೆಳಕಿಗೆ ಬರಬೇಕಿದೆ.

ಕಠಿಣ ಕ್ರಮವಾಗಲಿ: ಕೇವಲ ಪರವಾನಗಿ ಹೊಂದಿದ ಮದ್ಯದ ಅಂಗಡಿ ಪರಿಶೀಲನೆ ಮಾಡುವುದರ ಜತೆ ಅಕ್ರಮ ಮದ್ಯ ಮಾರಾಟ ತಡೆಗೂ ಅಬಕಾರಿ ಇಲಾಖೆಯವರು ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಇತ್ತೀಚಿನ ದಿನದಲ್ಲಿ ಈ ರೀತಿ ದಾಳಿ, ಪರಿಶೀಲನೆ ನಡೆಯುತ್ತಿಲ್ಲ. ಬುಧವಾರ ಕಾರ್ಯಾಚರಣೆ ನಡೆಸಿ ಅಕ್ರಮ ವಹಿವಾಟುದಾರರಿಗೆ ಹೆಡೆಮುರಿ ಕಟ್ಟಿರುವ ಗೋಕರ್ಣ ಪೊಲೀಸರನ್ನು ಅಭಿನಂದಿಸುತ್ತೇನೆ ಎಂದು ಜಿಲ್ಲಾ ಕರಾವಳಿ ಸನ್ನದ್ದುದಾರರ ಮದ್ಯ ಮಾರಾಟ ಸಂಘದ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ ತಿಳಿಸಿದರು.