ಸಾರಾಂಶ
ಹೊಸವರ್ಷಾಚರಣೆ ವೇಳೆ ಸಾರ್ವಜನಿಕರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಬೆಂಗಳೂರು : ನಗರದಲ್ಲಿ ಹೊಸವರ್ಷಾಚರಣೆ ವೇಳೆ ಸಾರ್ವಜನಿಕರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಬಿಎಂಪಿ, ಆರೋಗ್ಯ ಇಲಾಖೆ, ಅಬಕಾರಿ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಬೆಸ್ಕಾಂ, ಬಿಎಂಆರ್‌ಸಿಎಲ್ ಹಾಗೂ ಇತರೆ ಇಲಾಖೆಗಳು ಮತ್ತು ಸಂಘ-ಸಂಸ್ಥೆಗಳೊಂದಿಗೆ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ನಗರದಲ್ಲಿ ಪ್ರಮುಖವಾಗಿ ಹೊಸ ವರ್ಷಾಚರಣೆ ಮಾಡಲಾಗುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ ಸರ್ಕಲ್, ಕೋರಮಂಗಲ, ಫಿನಿಕ್ಸ್ ಮಾಲ್, ಇಂದಿರಾನಗರ 100 ಅಡಿ ರಸ್ತೆ, ಪ್ರಮುಖ ಸ್ಟಾರ್ ಹೋಟೆಲ್‌ಗಳು, ಪಬ್-ಕ್ಲಬ್‌ಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಜನದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಬಂದೋಬಸ್ತ್ ಪಿಕೇಟಿಂಗ್ ಪಾಯಿಂಟ್‌ಗಳನ್ನು ನೇಮಕ ಮಾಡುವುದಾಗಿ ಹೇಳಿದರು.
2,572 ಅಧಿಕಾರಿಗಳು ಸೇರಿ 11,830 ಮಂದಿ ನಿಯೋಜನೆ:
ವಿಶೇಷವಾಗಿ ಕೇಂದ್ರ ವಿಭಾಗದ ಬ್ರಿಗೇಡ್ ರಸ್ತೆ-ಎಂಜಿ ರಸ್ತೆ, ಒಪೆರಾ ಜಂಕ್ಷನ್, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ 5 ಡಿಸಿಪಿ, 18 ಎಸಿಪಿ, 41 ಮಂದಿ ಇನ್ಸ್‌ಪೆಕ್ಟರ್‌ಗಳು ಸೇರಿ ಒಟ್ಟು 2,572 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಇರುವ ‘ಮಹಿಳಾ ಸುರಕ್ಷಾ ಸ್ಥಳ’ಗಳನ್ನು ತೆರೆಯಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ನಗರದಲ್ಲಿ ಬಂದೋಬಸ್ತ್‌ಗೆ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತ, 15 ಡಿಸಿಪಿ, 44 ಎಸಿಪಿ, 135 ಇನ್ಸ್‌ಪೆಕ್ಟರ್, 530 ಪಿಎಸ್‌ಐ, 655 ಎಎಸ್‌ಐ, 4,833 ಎಚ್‌ಸಿ/ಪಿಸಿ, 1,048 ಮಹಿಳಾ ಸಿಬ್ಬಂದಿ, 597 ಮಫ್ತಿ ಸಿಬ್ಬಂದಿ, 3,170 ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ 800 ಸಿವಿಲ್ ಡಿಫೆನ್ಸ್ ಸಿಬ್ಬಂದಿ ಸೇರಿ ಒಟ್ಟು 11,830 ಪೊಲೀಸ್ ಅಧಿಕಾರಿಗಳು/ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲದೆ ಜತೆಗೆ 72 ಕೆಎಸ್‌ಆರ್‌ಪಿ ತುಕಡಿ ಹಾಗೂ 21 ಎಸಿಆರ್ ತುಕಡಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಕಿಯೋಸ್ಕ್, ವೀಕ್ಷಣಾ ಗೋಪುರ:
ಆಯಾಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಕಿಯೋಸ್ಕ್‌ಗಳನ್ನು ತೆರೆದಿದ್ದು, ಮಕ್ಕಳು ಕಾಣೆಯಾದಲ್ಲಿ ಯಾವುದೇ ರೀತಿಯ ಕಳವು ಸಂಬಂಧ ದೂರುಗಳಿಗೆ ಅಥವಾ ಯಾವುದೇ ತುರ್ತು ಸಂದರ್ಭಗಳಲ್ಲಿ ಅವಶ್ಯ ಸೇವೆ ಪಡೆಯಬಹುದಾಗಿದೆ. ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದ್ದು, ಇದರಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಬೈನಾಕ್ಯುಲರ್ ಉಪಕರಣಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಎಂಜಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ನಿರ್ಬಂಧ:
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರ ರಾತ್ರಿ 11 ಗಂಟೆಯಿಂದ ಮುಂಜಾನೆ 2 ಗಂಟೆವರೆಗೆ ಸಾರ್ವಜನಿಕರಿಗೆ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣ ಪ್ರವೇಶ ನಿರ್ಬಂಧಿಸಲಾಗಿದೆ. ಮನೆಗೆ ತೆರಳುವ ಸಾರ್ವಜನಿಕರು ಟ್ರಿನಿಟ್ ಸರ್ಕಲ್ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಮೆಟ್ರೋ ರೈಲು ಹಿಡಿದು ತಮ್ಮ ಸ್ಥಳಗಳಿಗೆ ಪ್ರಯಾಣಿಸಬಹುದಾಗಿದೆ.
ಡ್ರೋನ್ ಕ್ಯಾಮರಾ ಸೇರಿ 817 ಸಿಸಿಟಿವಿ ಕಣ್ಗಾವಲು:
ಹೊಸ ವರ್ಷಾಚರಣೆ ನಡೆಯುವ ಪ್ರಮುಖ ಸ್ಥಳಗಳಲ್ಲಿ ಡಿ.31ರ ರಾತ್ರಿ ಡ್ರೋನ್ ಕ್ಯಾಮರಾಗಳ ಮೂಲಕ ನಿಗಾವಹಿಸಲಾಗುವುದು. ಹೆಚ್ಚುವರಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಜತೆಗೆ ಶ್ವಾನದಳ ಹಾಗೂ 16 ವಿಶೇಷ ತಂಡಗಳಿಂದ ತಪಾಸಣೆ ನಡೆಸಲಾಗುವುದು. ಹೆಚ್ಚಿನ ಜನದಟ್ಟಣೆ ಸೇರುವ ಪ್ರದೇಶಗಳಲ್ಲಿ 817 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. 63 ವಾಚ್ ಟವರ್, 114 ವುಮೆನ್ ಸೇಫ್ಟಿ ಐಸ್‌ಲ್ಯಾಂಡ್, 48 ಪೊಲೀಸ್ ಕಿಯೋಸ್ಕ್ ಹಾಗೂ 54 ಹೆಲ್ತ್ ಸೆಂಟರ್ ತೆರೆಯುವುದಾಗಿ ಮಾಹಿತಿ ನೀಡಿದರು.
ಮಧ್ಯರಾತ್ರಿ 1 ಗಂಟೆವರೆಗೆ ಆಚರಣೆಗೆ ಅನುಮತಿ:
ರಾಜ್ಯ ಸರ್ಕಾರ ಮಧ್ಯರಾತ್ರಿ 1 ಗಂಟೆ ವರೆಗೆ ನಗರದಲ್ಲಿ ಸಾರ್ವಜನಿಕರು ಹೊಸ ವರ್ಷಾಚರಣೆಗೆ ಅನುಮತಿ ನೀಡಿದೆ. ಹೀಗಾಗಿ ಕ್ಲಬ್‌ಗಳು, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಹೊಸ ವರ್ಷಾಚರಣೆ ನಿಮಿತ್ತ ಸದಸ್ಯರಗಳು ಹಾಗೂ ಅತಿಥಿಗಳಿಗೆ ಔತಣ ಕೂಟ/ ಇವೆಂಟ್‌ಗಳಿಗೆ ಅನುಮತಿ ನೀಡುವಾಗ ನಿಗದಿತ ಸಮಯದ ಮಿತಿ ಮೀರದಂತೆ ಪಾಸ್‌ಗಳನ್ನು ವಿತರಿಸಲು ಮಾಲೀಕರಿಗೆ ಸೂಚಿಸಲಾಗಿದೆ.
ರೇವ್-ಡ್ರಗ್ಸ್ ಪಾರ್ಟಿಗಳ ಮೇಲೆ ನಿಗಾ:
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮದ್ಯದ ಪತ್ತೆಗೆ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ. ನಗರದ ಹೊರವಲಯದಲ್ಲಿ ಅನಧಿಕೃತವಾಗಿ ರೇವ್ ಪಾರ್ಟಿ ಆಯೋಜನೆ, ಮಾದಕವಸ್ತು ಸೇವನೆ ಅವಕಾಶ ನೀಡುವುದರ ಬಗ್ಗೆಯೂ ನಿಗಾವಹಿಸಲಾಗಿದೆ. ಒಂದು ವೇಳೆ ಸಿಕ್ಕಿಬಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ಬಾಹಿರ ಚಟುವಟಿಕೆಗಳು, ಡ್ರಗ್ಸ್ ಪೂರೈಕೆ, ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡು ಬಂದಲ್ಲಿ ಪೊಲೀಸರು ಅಥವಾ 112 ಸಹಾಯವಾಣಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.