ಮಂಗಳೂರು ಕೇಂದ್ರ ಕಾರಾಗೃಹಕ್ಕೆ ಪೊಲೀಸ್‌ ದಾಳಿ: ಸೊತ್ತುಗಳ ವಶ

| Published : Jul 26 2024, 01:31 AM IST

ಸಾರಾಂಶ

ಜೈಲಿನ ಎಲ್ಲ ಬ್ಲಾಕ್‌ಗಳನ್ನು ಏಕಕಾಲದಲ್ಲಿ ಶೋಧಿಸಲು ಹಲವು ತಂಡಗಳನ್ನು ರಚಿಸಲಾಗಿತ್ತು. ಕೊನೆಯ ಕ್ಷಣದವರೆಗೂ ದಾಳಿಯ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15 ಪಿಐಗಳು ಮತ್ತು ಸುಮಾರು 150 ಸಿಬ್ಬಂದಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಗುರುವಾರ ನಸುಕಿನ ಜಾವ ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಕಾರ್ಯಾಚರಣೆಯಲ್ಲಿ 25 ಮೊಬೈಲ್ ಫೋನ್‌, 1 ಬ್ಲೂಟೂತ್ ಸಾಧನ, 5 ಇಯರ್‌ಫೋನ್‌, 1 ಪೆನ್‌ಡ್ರೈವ್, 5 ಚಾರ್ಜರ್‌, 1 ಜೊತೆ ಕತ್ತರಿ, 3 ಕೇಬಲ್‌ಗಳು ಮತ್ತು ಗಾಂಜಾ ಹಾಗೂ ಇತರ ಡ್ರಗ್ಸ್​ಗಳ ಪ್ಯಾಕೆಟ್‌ಗಳನ್ನು ಜೈಲಿನಿಂದ ಪೊಲೀಸಲು ವಶಕ್ಕೆ ಪಡೆದಿದ್ದಾರೆ.ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಮಪ್ ಅಗರ್‌ವಾಲ್ ಮಾರ್ಗದರ್ಶನದಲ್ಲಿ ಪೊಲೀಸರು ನಸುಕಿನ ಜಾವ 4 ಗಂಟೆಗೆ ಕಾರ್ಯಾಚರಣೆಗೆ ಇಳಿದಿದ್ದರು. ಜೈಲಿನ ಎಲ್ಲ ಬ್ಲಾಕ್‌ಗಳನ್ನು ಏಕಕಾಲದಲ್ಲಿ ಶೋಧಿಸಲು ಹಲವು ತಂಡಗಳನ್ನು ರಚಿಸಲಾಗಿತ್ತು. ಕೊನೆಯ ಕ್ಷಣದವರೆಗೂ ದಾಳಿಯ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15 ಪಿಐಗಳು ಮತ್ತು ಸುಮಾರು 150 ಸಿಬ್ಬಂದಿ ಪಾಲ್ಗೊಂಡಿದ್ದರು.

ಈ ಬಗ್ಗೆ ಪೊಲೀಸ್ ಕಮೀಷನರ್ ಅನುಪಮ್‌ ಅಗರ್‌ವಾಲ್‌ ಪ್ರತಿಕ್ರಿಯಿಸಿ, ಜೈಲಿನೊಳಗೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಕಾರ್ಯಾಚರಣೆ ಮಾಡಲಾಗಿದೆ. ಈ ವಸ್ತುಗಳನ್ನು ಜೈಲಿಗೆ ಹೇಗೆ ತರಲಾಯಿತು ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.