ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಹೃದಯ ಭಾಗವಾದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ಬಿದ್ದಾಗಲೆಲ್ಲ ಮಳೆಯ ನೀರು ನಿಂತು ಚಿಕ್ಕ ಕೆರೆಯಂತಾದ ಬಳಿಕ ಕೆಸರು ಮಯವಾಗಿ ಸಾರ್ವಜನಿಕರು, ವಾಹನಗಳ ಸವಾರರ ಪರದಾಟ ತಪ್ಪಿಸಲು ಇಲ್ಲಿನ ಪೊಲೀಸರೇ ಅಡ್ಡಿಯಾಗಿದ್ದಾರೆ.!ಮೈಸೂರು-ಊಟಿ ಹೆದ್ದಾರಿಗೆ ಹೊಂದಿಕೊಂಡಿರುವ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ಬಂದಾಗಲೆಲ್ಲ ನೀರು ನಿಲ್ಲುವುದನ್ನು ತಪ್ಪಿಸಲು ಸ್ಥಳೀಯ ಪೊಲೀಸರು ಮುಂದಾಗುತ್ತಿಲ್ಲ.
ಕಾರಣವೇನು?: ಮಡಹಳ್ಳಿ ಸರ್ಕಲ್ ಹೇಳಿ ಕೇಳಿ ತಗ್ಗು ಪ್ರದೇಶದಲ್ಲಿದೆ. ಮಳೆ ಬಿದ್ದಾಗ ಕಾಗೇ ಹಳ್ಳದಲ್ಲಿ ನೀರು ಹರಿದು ಹೋಗುತ್ತಿಲ್ಲ. ಕಾರಣ ಕಾಗೇ ಹಳ್ಳವನ್ನೇ ಪೊಲೀಸರು ಒತ್ತುವರಿ ಮಾಡಿಕೊಂಡು ಸೀಜ್ ಆದ ವಾಹನಗಳ ನಿಲ್ಲಿಸಲು ಬಳಕೆ ಮಾಡಿದ್ದಾರೆ. ಕಾಗೇ ಹಳ್ಳವನ್ನು ಸ್ಥಳೀಯ ಪೊಲೀಸರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸುವ ತನಕ ಮಡಹಳ್ಳಿ ಸರ್ಕಲ್‌ನಲ್ಲಿ ನೀರು ನಿಲ್ಲೋದು ತಪ್ಪುವುದಿಲ್ಲ ಎಂದು ಕನ್ನಡಪ್ರಭ ಹಲವು ಬಾರಿ ವರದಿ ಪ್ರಕಟಿಸಿ ತಾಲೂಕು ಆಡಳಿತದ ಗಮನ ಸೆಳೆದಿತ್ತು.80 ಲಕ್ಷ ಡೆಕ್ ಸ್ಲ್ಯಾಬ್: ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಂತು ಚಿಕ್ಕ ಕೆರೆಯಂತಾಗುತ್ತದೆ ಎಂಬುದನ್ನು ಅರಿತ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅವರು 80 ಲಕ್ಷ ರು.ವೆಚ್ಚದಲ್ಲಿ ಕಾಗೇ ಹಳ್ಳಕ್ಕೆ ಆರ್‌ಸಿಸಿ ಡೆಕ್ ಸ್ಲ್ಯಾಬ್ ನಿರ್ಮಾಣಕ್ಕೆ ಕಾರಣರಾದರು. ಆದರೆ 80 ಲಕ್ಷ ವೆಚ್ಚದ ಆರ್‌ಸಿಸಿ ಡೆಕ್ ಸ್ಲ್ಯಾಬ್ ಕೆಲಸ 2023 ರ ಅಗಸ್ಟ್ ತಿಂಗಳಲ್ಲೇ ಮುಗಿದಿದೆ. ಡೆಕ್ ಸ್ಲ್ಯಾಬ್‌ನ ಹಿಂದೆ ಒತ್ತುವರಿಯಾದ ಕಾಗೇ ಹಳ್ಳ ಬಿಡದೆ ಪೊಲೀಸರು ಸತಾಯಿಸುತ್ತಿದ್ದಾರೆ. ಇದು ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಲ್ಲಲು ಕಾರಣವಾಗಿದೆ.
ಹಲವು ನೋಟಿಸ್: ಒತ್ತುವರಿ ಮಾಡಿಕೊಂಡ ಕಾಗೇ ಹಳ್ಳವನ್ನು ಬಿಡಬೇಕು ಎಂದು ತಹಸೀಲ್ದಾರ್ ಟಿ. ರಮೇಶ್ ಬಾಬು ಸ್ಥಳೀಯ ಪೊಲೀಸರಿಗೆ ಹಲವು ಬಾರಿ ನೋಟೀಸ್ ನೀಡಿದ್ದರೂ ಪೊಲೀಸರು ಒತ್ತುವರಿ ಮಾಡಿಕೊಂಡ ಕಾಗೇ ಹಳ್ಳ ಒತ್ತುವರಿ ಬಿಡಲು ಮನಸ್ಸು ಮಾಡುತ್ತಿಲ್ಲ. ಪೊಲೀಸರ ಈ ನಡೆಯಿಂದ ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ಬಂದಾಗಲೆಲ್ಲ ಪಟ್ಟಣದ ಹಾಗೂ ಗ್ರಾಮಾಂತರ ಪ್ರದೇಶದ ಜನರು ಪರದಾಟ ತಪ್ಪುತ್ತಿಲ್ಲ. ಈ ಪರದಾಟ ತಪ್ಪೋದು ಯಾವಾಗ ಎಂದು ಸಾರ್ವಜನಿಕರು ಹಾಗೂ ಸವಾರರು ಪ್ರಶ್ನಿಸುತ್ತಿದ್ದಾರೆ.ಜನಸಂದಣಿ ರಸ್ತೆ, ಸರ್ಕಲ್: ಪಟ್ಟಣದ ಮಡಹಳ್ಳಿ ಸರ್ಕಲ್ ಪಟ್ಟಣದ ಯಾವುದೋ ಮೂಲೆಯಲ್ಲಿ ಇಲ್ಲ. ಈ ಮಡಹಳ್ಳಿ ರಸ್ತೆಯಲ್ಲಿ ಶಾಲಾ ಕಾಲೇಜು, ಪೊಲೀಸ್ ಠಾಣೆ, ಅರಣ್ಯ ಇಲಾಖೆ ಕಚೇರಿ, ನ್ಯಾಯಾಲಯ, ಕಂದಾಯ ಇಲಾಖೆ ವಸತಿ ಗೃಹ, ಚರ್ಚ್, ಚೌಟ್ರಿಗಳು ಜೊತೆಗೆ ಮಡಹಳ್ಳಿ, ಮೂಖಹಳ್ಳಿ, ಹೊನ್ನಶೆಟ್ಟರಹುಂಡಿ, ಹೊಂಗಳ್ಳಿ, ಬರಗಿ, ತೆಂಕಲಹುಂಡಿಗೆ ತೆರಳುವ ರಸ್ತೆಯಾಗಿದೆ. ಪ್ರತಿ ದಿನ ಬೆಳಗ್ಗೆ ಜನಸಂದಣಿ ಇರುವ ಮಡಹಳ್ಳಿ ರಸ್ತೆ ಕೂಡ ಒಂದು ಕಿಮೀನಷ್ಟು ಗಬ್ಬೆದ್ದು ಹೋಗಿದೆ. ಜೊತೆಗೆ ಮಡಹಳ್ಳಿ ಸರ್ಕಲ್ ಮಳೆ ನೀರು ನಿಲ್ಲುವ ತಾಣವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್ (ಶೈಲೇಶ್) ಬೇಸರ ವ್ಯಕ್ತಪಡಿಸಿದ್ದಾರೆ.
ಕಾಗೇಹಳ್ಳ ತೆರವುಗೊಳಿಸುವ ಸಂಬಂಧ ಮೊದಲಿಗೆ ನೋಟಿಸ್ ನೀಡಲಾಗಿತ್ತು. ನಂತರ ಒತ್ತುವರಿ ತೆರವುಗೊಳಿಸಬೇಕು ಎಂದು ಆದೇಶ ಕೂಡ ಮಾಡಿದ್ದೇನೆ. ಆದರೂ ತೆರವುಗೊಳಿಸದ ಕಾರಣ ಕಂದಾಯ ಇಲಾಖೆಯೇ 4-5 ದಿನಗಳಲ್ಲಿ ಕಾಗೇಹಳ್ಳ ಒತ್ತುವರಿ ತೆರವುಗೊಳಿಸಲು ಕ್ರಮ ವಹಿಸುವೆ.
-ಟಿ.ರಮೇಶ್ ಬಾಬು, ತಹಸೀಲ್ದಾರ್ಮಡಹಳ್ಳಿ ಸರ್ಕಲ್‌ನಲ್ಲಿ ನೀರು ನಿಲ್ಲಲು ಕಾರಣವಾದ ಪೊಲೀಸರು ಒತ್ತುವರಿ ಮಾಡಿಕೊಂಡ ಕಾಗೇಹಳ್ಳ ಬಿಡಿಸದ ಕಾರಣ ಮಳೆ ಬಂದಾಗಲೆಲ್ಲ ಸಾರ್ವಜನಿಕರು ಪರದಾಡುತ್ತಿದ್ದಾರೆ. ಕೂಡಲೇ ತಾಲೂಕು ಆಡಳಿತ ಕಾಗೇ ಹಳ್ಳ ಒತ್ತುವರಿ ಬಿಡಿಸದಿದ್ದಲ್ಲಿ ಪ್ರತಿಭಟನೆ ಅನಿವಾರ್ಯ.-ಎಂ.ಶೈಲಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ