ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ಅಡ್ಡೆಗಳ ಮೇಲೆ ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಏಕಕಾಲದಲ್ಲಿ ದಾಳಿ ನಡೆಸಿ ಮದ್ಯೆ ಸೇರಿದಂತೆ ಏಳು ಜನರನ್ನು ವಶಕ್ಕೆ ಪಡೆದು 5 ಪ್ರಕರಣಗಳನ್ನು ಪ್ರತ್ಯೇಕವಾಗಿ ದಾಖಲು ಮಾಡಿದ್ದಾರೆ.ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ ಕವಿತಾ ಹಾಗೂ ಅಬಕಾರಿ ಡಿಸಿ ನಾಗಶಯನ ವಿಶೇಷ ಪೊಲೀಸ್ ತಂಡ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ ದಂಧೆ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ.ಟಿ ಕವಿತಾ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಇಸ್ಪೀಟ್ ದಂದೆ ಕಡಿವಾಣ ಹಾಕಲು ಏಕಕಾಲದಲ್ಲಿ ದಾಳಿ ನಡೆಸಿ ತಡರಾತ್ರಿ ಶೋಧನೆ ನಡೆಸಿ ಅಕ್ರಮಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ರಸ್ತೆಯಲ್ಲಿ ಬರುವ ವೆಂಕಟಲಕ್ಷ್ಮಿ ಎಂಬವರ ಮನೆಯಲ್ಲಿ ಸಿದ್ದಪ್ಪ, ರಾಚಪ್ಪ ಎಂಬವರು ವಿವಿಧ ಕಂಪನಿಯ ಅಕ್ರಮ ಮದ್ಯ 13 ಬಾಕ್ಸ್ 20 ಸಾವಿರ ನಗದು ಸೇರಿದಂತೆ ಒಂದು ಲಕ್ಷದ 6 ಸಾವಿರ ಬೆಲೆ ಬಾಳುವ ಮದ್ಯ ವಶಕ್ಕೆ ಪಡೆಯಲಾಗಿದೆ. ಪುದೂರು ಗ್ರಾಮದ ಕುಮಾರ್ ಮನೆಯಲ್ಲಿ 1 ಬಾಕ್ಸ್ 30 ಪೌಚ್ ರು.3,000 ನಗದು ವಶಕ್ಕೆ ಪಡೆಯಲಾಗಿದೆ.ಮೂರನೇ ಪ್ರಕರಣ ಜನತಾ ಕಾಲೋನಿಯ ಚಂದ್ರು ಮತ್ತು ಸಂಗಡಿಗರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಹೇಶ್, ಬಾಬು ಪೂಜಾರಿ ಅಕ್ರಮ ಮದ್ಯ ದಾಸ್ತಾನು ಮಾಡಿದ್ದ 2 ಬಾಕ್ಸ್ 20 ಪೌಚ್, ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಲ್ಕನೇ ಪ್ರಕರಣದಲ್ಲಿ ತಂಬಡಗೇರಿ ಮಹಾದೇವಿ ಮನೆಯಲ್ಲಿ ದಾಸ್ತಾನಿ ಇಟ್ಟಿದ್ದ ಒಂದು ಬಾಕ್ಸ್ 20 ಪೌಚ್, 5ನೇ ಪ್ರಕರಣದಲ್ಲಿ ಪುಟ್ಟಮ್ಮ ಹುಲಿಗೂಡು ಮನೆಯಲ್ಲಿಟ್ಟಿದ್ದ ಒಂದು ಬಾಕ್ಸ್ 20 ಪೌಚ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿ ಪುಟ್ಟಮ್ಮ ತಲೆಮರೆಸಿಕೊಂಡಿದ್ದು ಇವರ ಪತ್ತೆಗೆ ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ವಿಶೇಷ ಪ್ರಕರಣವೆಂದು ಗಂಭೀರವಾಗಿ ಪರಿಗಣಿಸಿ ಮಲೆ ಮಹದೇಶ್ವರ ಬೆಟ್ಟದ ಠಾಣಾ ವ್ಯಾಪ್ತಿಯಲ್ಲಿ ಹನೂರು ಇನ್ಸ್‌ಪೆಕ್ಟರ್ ಶಶಿಕುಮಾರ್, ಪಿಎಸ್ಐ ಮಂಜುನಾಥ್ ರಾಮಪುರ ಪಿಎಸ್ಐ ಈಶ್ವರ ಸೇರಿ ಒಟ್ಟು ಐದು ಪ್ರಕರಣಗಳನ್ನು ಪ್ರತ್ಯೇಕವಾಗಿ ಪ್ರಕರಣ ದಾಖಲು ಮಾಡಲಾಗಿದೆ. 8 ಜನರ ಮೇಲೆ ಎಸ್ಪಿ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಸ್ಥಳೀಯ ಪೊಲೀಸರು ವಿಫಲ?:
ಮಾದೇಶ್ವರ ಬೆಟ್ಟದಲ್ಲಿ ಕಳೆದ ಹಲವಾರು ವರ್ಷಗಳಿಂದ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆಯುತ್ತಲೇ ಇದೆ. ಈ ಬಗ್ಗೆ 2023ರಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯನವರು ಅಬಕಾರಿ ಡಿಸಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟ ಹಾಗೂ ತಾಳ ಬೆಟ್ಟಗಳಲ್ಲಿ ಅಬಕಾರಿ ಸಿಬ್ಬಂದಿ ನೇಮಕ ಮಾಡಿ ಮಹದೇಶ್ವರ ಬೆಟ್ಟಕ್ಕೆ ಹೋಗುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಇದು ಕೇವಲ ಒಂದು ತಿಂಗಳಗಷ್ಟೇ ಸೀಮಿತವಾಗಿ ನಂತರ ಸ್ಥಗಿತವಾಯಿತು. ನಂತರ ಶ್ರೀ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ಎಗ್ಗಿಲ್ಲದೆ ನಡೆಯುತ್ತಿತ್ತು. ಚಾಮರಾಜನಗರ ಎಸ್ಪಿ ಆಗಿ ಬಂದ ಕವಿತಾ ಅವರು ಅಕ್ರಮ ಮದ್ಯ ಮಾರಾಟದ ಬಗ್ಗೆ ವಿಶೇಷ ತಂಡ ರಚನೆ ಮಾಡಿ ಮಾದೇಶ್ವರ ಬೆಟ್ಟಕ್ಕೆ ಪ್ರತ್ಯೇಕ ವಾಹನದಲ್ಲಿ ಪೊಲೀಸ್ ತಂಡದ ಜೊತೆ ಎಸ್ಪಿ, ಅಬಕಾರಿ ಡಿಸಿ ಕಾರ್ಯಾಚರಣೆ ನಡೆಸಿ ಅಕ್ರಮ ಅಡ್ಡೆಗಳ ದಾಸ್ತಾನು ಮಾಡಲಾಗಿದ್ದ ಲಕ್ಷಾಂತರ ರು. ಬೆಲೆ ಬಾಳುವ ಮದ್ಯದ ಬಾಕ್ಸ್‌ಗಳನ್ನು ವಶಪಡಿಸಿಕೊಂಡು ಕ್ರಮವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಶಶಿಕುಮಾರ್, ಸಬ್ ಇನ್ಸ್ಪೆಪೆಕ್ಟರಾದ ಮಂಜುನಾಥ್ ಪ್ರಸಾದ್, ಈಶ್ವರ್ , ಪೇದೆಗಳಾದ ಸಿಂಗಂ ನಾಗರಾಜು, ಜೈ ಶಂಕರ್ ಪಾಲ್ಗೊಂಡಿದ್ದರು.