ಸದಾ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಲ್ಲಿ ಧೈರ್ಯ, ಸಾಮರ್ಥ್ಯ, ದೈಹಿಕ ಬಲವಿದ್ದಾಗ ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪುರಸ್ಕೃತ ಕ್ರೀಡಾಪಟು, ಹಿರಿಯ ಪೊಲೀಸ್ ಅಧಿಕಾರಿ ಎನ್.ಎಸ್. ನಾಗರಾಜ ರಾವ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸದಾ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಲ್ಲಿ ಧೈರ್ಯ, ಸಾಮರ್ಥ್ಯ, ದೈಹಿಕ ಬಲವಿದ್ದಾಗ ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪುರಸ್ಕೃತ ಕ್ರೀಡಾಪಟು, ಹಿರಿಯ ಪೊಲೀಸ್ ಅಧಿಕಾರಿ ಎನ್.ಎಸ್. ನಾಗರಾಜ ರಾವ್ ಸಲಹೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2026ನ್ನು ಉದ್ಘಾಟಿಸಿ ಮಾತನಾಡಿ, ಪೊಲೀಸ್ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಹೀಗೆ ಎಲ್ಲರೂ ತಮ್ಮ ಉತ್ತಮ ಆರೋಗ್ಯಕ್ಕಾಗಿ ಕ್ರೀಡಾ, ವಾಕ್, ಯೋಗ, ಧ್ಯಾನದಂತ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಪೊಲೀಸರು ಸದಾ ಕಾನೂನು ಸುವ್ಯವಸ್ಥೆ, ಶಾಂತಿ, ಬಂದೋಬಸ್ತ್, ಚುನಾವಣೆ ಕಾರ್ಯ ಹೀಗೆ ನಿರಂತರ ಕಾರ್ಯ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಲ್ಲದೇ, ಸಾರ್ವಜನಿಕರ ರಕ್ಷಣೆಯ ಜವಾಬ್ಧಾರಿಯನ್ನೂ ಹೊಂದಿರುತ್ತಾರೆ. ತುರ್ತು ಪರಿಸ್ಥಿತಿ, ಅಪರಾಧ ನಿಯಂತ್ರಣ, ಸಾರ್ವಜನಿಕರು ಮತ್ತು ಆಸ್ತಿಪಾಸ್ತಿ ರಕ್ಷಣೆ, ವಿಪತ್ತು ನಿರ್ವಹಣೆ ಅನೇಕ ಜವಾಬ್ದಾರಿಗಳನ್ನು ನಿಭಾಯಿಸುವ ಪೊಲೀಸರಲ್ಲಿ ದೈಹಿಕ ಸಾಮರ್ಥ್ಯ, ಏಕಾಗ್ರತೆ ಅತೀ ಮುಖ್ಯ ಎಂದರು.

ಯಾವುದೇ ದುಶ್ಚಟಗಳಿಗೆ ಈಡಾಗದೇ ನಿಮ್ಮ ಆರೋಗ್ಯ, ನಿಮ್ಮ ಕುಟುಂಬವನ್ನು ಕಾಪಾಡಿಕೊಳ್ಳಿರಿ. ಹಿಂದೆಲ್ಲಾ ಪೊಲೀಸ್ ಅಂದರೆ ಸಾರ್ವಜನಿಕ ವಲಯದಲ್ಲಿ ಹೆದರಿಕೆ ಇತ್ತು. ಈಗ ಹಾಗೆ ಇಲ್ಲ. ಸಾಕಷ್ಟು ಅವಕಾಶಗಳೂ ಇವೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಕೀರ್ತಿ ತಂದಿದ್ದಾರೆ. ಇಂತಹ ಸಾಧನೆ ಎಲ್ಲರಿಂದಲೂ ಆಗಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಎಚ್.ಟಿ.ಶೇಖರ್ ಮಾತನಾಡಿ, ಪ್ರತಿವರ್ಷದಂತೆ ಈ ಸಲವೂ ವಾರ್ಷಿಕ ಕ್ರೀಡಾಕೂಟ ಆಯೋಜಿಸಿದೆ. ಹಿಂದೆಲ್ಲಾ ಅಧಿಕಾರಿಗಳನ್ನು ಕರೆಸಿ, ಕಾರ್ಯಕ್ರಮ ಉದ್ಘಾಟಿಸುತ್ತಿದ್ದೆವು. ಈ ಸಲ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಮ್ಮ ಇಲಾಖೆ ಹಿರಿಯ ಅಧಿಕಾರಿ ನಾಗರಾಜರಾವ್‌ರನ್ನು ಕರೆಸಿ ಉದ್ಘಾಟಿಸಿದ್ದೇವೆ. ಚಿಕ್ಕ ಮಕ್ಕಳಲ್ಲಿ ಹಿಂದೆ ಕಂಡರಿಯದ ರೋಗಗಳನ್ನು ಕಾಣುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು. ಬಹುತೇಕ ಎಲ್ಲರೂ ಡಿಜಿಟಲ್, ಸೋಷಿಯಲ್ ಮೀಡಿಯಾಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಮಕ್ಕಳಿಗೆ, ಯುವಕರಿಗೆ, ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಲಿ ಎಂದು ನಾಗರಾಜ ರಾವ್‌ ರನ್ನು ಕರೆಸಿದ್ದೇವೆ. ಓಟ, ಹೈಜಂಪ್, ಲಾಂಗ್ ಜಂಪ್, ಕಬಡ್ಡಿ, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆ ಆಯೋಜಿಸಿದ್ದೇವೆ. ಇಲ್ಲಿ ಆಯ್ಕೆಯಾದವರಿಗೆ ರಾಜ್ಯಮಟ್ಟದಲ್ಲಿ ನಮ್ಮ ಜಿಲ್ಲೆಯನ್ನು ಪ್ರತಿನಿಧಿಸಲು ಕಳಿಸಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಶ್ರೀಮತಿ ವಿನುತಾ ಶೇಖರ್, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ, ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ, ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ, ಬಂಕಾಳಿ ನಾಗಪ್ಪ, ಇನ್ಸ್ಪೆಕ್ಟರ್ ಗಳಾದ ವಿದ್ಯಾನಗರ ಪೊಲೀಸ್ ಠಾಣೆಯ ವೈ.ಸೀತಾ, ಕೆಟಿಜೆ ನಗರ ಪೊಲೀಸ್ ಠಾಣೆಯ ಮೇಘರಾಜ್, ಬಡಾವಣೆ ಠಾಣೆಯ ರಾಘು ರಾಷ್ಟ್ರಪತಿ, ಬಸವನಗರ ಪೊಲೀಸ್ ಠಾಣೆಯ ನಂಜುಂಡ ಸ್ವಾಮಿ, ಟ್ರಾಫಿಕ್ ಇನ್ಸಪೆಕ್ಟರ್ ಮಂಜುನಾಥ, ಹರಿಹರ ಗ್ರಾಮಾಂತರದ ಸುರೇಶ ಹಗರಿ, ಮಾಯಕೊಂಡ ವೃತ್ತದ ರಾಘವೇಂದ್ರ ಸೇರಿದಂತೆ ನಿವೃತ್ತ ಪೊಲೀಸ್ ಅಧಿಕಾರಿ ವರ್ಗ, ಅಧೀಕ್ಷಕರು, ಉಪಾಧೀಕ್ಷರು, ಇತರೆ ವಿಭಾಗಗಳ ಸಿಬ್ಬಂದಿ ಭಾಗವಹಿಸಿದ್ದರು. ಕಾನ್ಸಟೇಬಲ್ ದೇವರಾಜ ಸಂಗೇನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕಳೆದ ಬಾರಿ ಚಾಂಪಿಯನ್ ಧೃವ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ ತಂಡದ ನಾಯಕ ಆರ್‌ಎಸ್ಐ ನಾಗರಾಜ, ನಗರ ಉಪ ವಿಭಾಗದ ನಾಯಕ ಪಿಎಸ್ಐ ರಮೇಶ(ಆರ್‌ಎಂಸಿ ಯಾರ್ಡ್ ಠಾಣೆ), ದಾವಣಗೆರೆ ಗ್ರಾಮಾಂತರ ನಾಯಕ ಯುವರಾಜ ಕಂಬಳಿ, ಚನ್ನಗಿರಿ ಉಪ ವಿಭಾಗದ ನಾಯಕ ಪಿಎಸ್ಐ ಇಮ್ತಿಯಾಜ್(ಬಸವಾ ಪಟ್ಟಣ ಠಾಣೆ), ಜಿಲ್ಲಾ ಪೊಲೀಸ್ ಮಹಿಳಾ ತಂಡದ ನಾಯಕಿ ಪಿಎಸ್ಐ ಶಕುಂತಲಾ(ದಕ್ಷಿಣ ಸಂಚಾರ ಠಾಣೆ) ಇವರ ತಂಡಗಳು ಮುಖ್ಯ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದವು.