ಸಾರಾಂಶ
ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ನೆಮ್ಮದಿಯ ಜೀವನ ನಡೆಸುವಂತೆ ಮಾಡಲು ಶ್ರಮಿಸುತ್ತಿರುವ ಪೊಲೀಸರು ಆರೋಗ್ಯದ ಕಡೆ ಹೆಚ್ಚು ಗಮನ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ತಿಳಿಸಿದರು
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ನೆಮ್ಮದಿಯ ಜೀವನ ನಡೆಸುವಂತೆ ಮಾಡಲು ಶ್ರಮಿಸುತ್ತಿರುವ ಪೊಲೀಸರು ಆರೋಗ್ಯದ ಕಡೆ ಹೆಚ್ಚು ಗಮನ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ತಿಳಿಸಿದರು. ನಗರದ ಡಾ. ರಾಜಕುಮಾರ್ ಕಲಾ ಮಂದಿರದಲ್ಲಿ ನಾರಾಯಣ ಅಸ್ಪತ್ರೆಯ ಹಾಗೂ ರೋಟರಿ 3181 ವತಿಯಿಂದ ಪೊಲೀಸರು ಹಾಗೂ ಅವರ ಕುಟುಂಬ ವರ್ಗದವರಿಗೆ ಆಯೋಜನೆ ಮಾಡಿದ್ದ ಬೃಹತ್ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸದಾ ಒತ್ತಡದಲ್ಲಿ ದಿನದ 24 ಗಂಟೆಯು ಸಹ ಕಾನೂನು ಸುವ್ಯವಸ್ಥೆಗಾಗಿ ಶ್ರಮಿಸುತ್ತಿರುವ ಪೊಲೀಸರಿಗಾಗಿ ರೋಟರಿ ಸಂಸ್ಥೆ ಮತ್ತು ನಾರಾಯಣ ಅಸ್ಪತ್ರೆ ಆರೋಗ್ಯ ಶಿಬಿರ ಆಯೋಜನೆ ಮಾಡಿರುವುದು ಸಂತಸ ತಂದಿದೆ. ಅದಲ್ಲಿಯೂ ಹೃದಯ ಸಂಬಂಧಿತ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಉಚಿತವಾಗಿ ಹೃದಯ ತಪಾಸಣೆ ಮಾಡುತ್ತಿರುವುದು, ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳಿಗೆ ಪೊಲೀಸ ಸಮುದಾಯಗಳ ಬಗ್ಗೆ ಇರುವ ಪ್ರೀತಿ ವಿಶ್ವಾಸವನ್ನು ತೋರಿಸುತ್ತಿದೆ. ಶಿಬಿರ ಬಹಳ ಯಶಸ್ವಿಯಾಗಲಿ. ಎಲ್ಲರು ಸಹ ಶಿಬಿರದಲ್ಲಿ ಭಾಗವಹಿಸಿ, ತಪಾಸಣೆ ಮಾಡಿಸಿಕೊಳ್ಳುವ ಮೂಲಕ ವೈದ್ಯರ ಸಲಹೆ ಸೂಚನೆಗಳನ್ನು ಪಾಲನೆ ಮಾಡಿ, ಆರೋಗ್ಯವಾಗಿ ನೆಮ್ಮದಿಯ ಜೀವನ ನಡೆಸಿ ಎಂದು ತಿಳಿಸಿದರು. ರೋಟರಿ ಸಂಸ್ಥೆಯ ಸಹಾಯಕ ಗರ‍್ನರ್ ಡಾ. ಎಂ.ಡಿ. ರಾಘವೇಂದ್ರ ಪ್ರಸಾದ್ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಪೊಲೀಸರು ಮತ್ತು ಕುಟುಂಬದವರಿಗೆ ಮೈಸೂರಿನ ನಾರಾಯಣ ಅಸ್ಪತ್ರೆಯ ತಜ್ಞ ವೈದ್ಯರ ತಂಡ ಆರೋಗ್ಯ ತಪಸಣೆ ಶಿಬಿರ ಬಹಳ ಉಪಯುಕ್ತವಾಗಿದೆ. ಅಲ್ಲದೇ ಪ್ರತಿ ದಿನ ಠಾಣೆಯಲ್ಲಿ ಬಿಪಿ ಪರಿಶೀಲನೆ ಮಾಡಿಕೊಳ್ಳಲು ಒಟ್ಟು 20 ಬಿಪಿ ಪರಿಶೀಲನೆ ಮಿಷನ್ ಅನ್ನು ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು. ನಾರಾಯಣ ಅಸ್ಪತ್ರೆಯ ಹೃದಯ ರೋಗ ತಜ್ಞ ಹಾಗೂ ನಿರ್ದೇಶಕ ಡಾ. ವಿ. ಕೇಶವಮೂರ್ತಿ ಮಾತನಾಡಿ, ಹೃದಯಘಾತ ತಡೆಗಟ್ಟುವುದು ಹಾಗೂ ಹೃದಯ ಸಂಬಂಧಿತ ಕಾಯಿಲೆಗಳ ಬಗ್ಗೆ ಜಾಗೃತಿ ಮತ್ತು ಇದರ ಪರಿಣಾಮಗಳು. ಉತ್ತಮ ಆರೋಗ್ಯ ಜೀವನ ಶೈಲಿ ಬಗ್ಗೆ ಸಚಿತ್ರ ಸಹಿತ ವಿವರಣೆ ನೀಡಿದರು. ಬಳಿಕ ನಡೆದ ಶಿಬಿರದಲ್ಲಿ 280ಕ್ಕು ಹೆಚ್ಚು ಮಂದಿ ಪೊಲೀಸರು ಮತ್ತು ಅವರ ಕುಟುಂಬದವರು ತಪಾಸಣೆ ಮಾಡಿಸಿಕೊಂಡರು. ಶಿಬಿರದಲ್ಲಿ ನಾರಾಯಣ ಅಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸಿ.ಆರ್. ಹನುಮಂತು, ರೋಟರಿ ಸಂಸ್ಥೆಯ ಅಧ್ಯಕ್ಷ ಕಾಗಲವಾಡಿ ಚಂದ್ರು, ಕಾರ್ಯದರ್ಶಿ ಸಿದ್ದರಾಜು, ರೋಟರಿ 3181ರ ವ್ಯಾಪ್ತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರಾದ ನೇಮಿರಾಜು, ಭವಾನಿ, ಮಹದೇವಸ್ವಾಮಿ, ಅಂಕಶೆಟ್ಟಿ, ಶ್ರೀನಿವಾಸನ್, ನಾರಾಯಣ, ದೀನಾ, ವಿ. ಶ್ರೀನಿವಾಸನ್ ಇದ್ದರು.