ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ತೆರೆದ ಮನೆ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಪೊಲೀಸ್ ಠಾಣೆ ಮತ್ತು ಪೊಲೀಸ್ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡುವುದರ ಮೂಲಕ ಎಲ್ಲ ಠಾಣೆಗಳು ಮಕ್ಕಳ ಸ್ನೇಹಿಯಾಗಿ ರೂಪಾಂತರಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ಜಿಲ್ಲೆಯ ಎಸ್.ಜೆಪಿಯು ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಕಾಯ್ದೆಗಳು ಹಾಗೂ ಅಧಿಕಾರಿಗಳ ಪಾತ್ರ ಮತ್ತು ಕರ್ತವ್ಯಗಳ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತೆರೆದ ಮನೆ ಕಾರ್ಯಕ್ರಮ ಪೊಲೀಸ್ ಠಾಣೆ ಹಾಗೂ ಶಾಲೆಗಳಲ್ಲಿ ನಿರಂತರವಾಗಿ ಎಸ್‍ಜೆಪಿ ಘಟಕದ ಅಧಿಕಾರಿಗಳು ನಡೆಸುವುದರಿಂದ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳ ಬಗ್ಗೆ ವಿಶ್ವಾಸ, ಪ್ರೀತಿ ಸಂಬಂಧ ಸೇತುವೆಯಾಗಿರುತ್ತದೆ. ತೆರೆದ ಮನೆ ಕಾರ್ಯಕ್ರಮ ಪೊಲೀಸ್ ಮತ್ತು ಮಕ್ಕಳ ನಡುವೆ ಉತ್ತಮ ಭಾಂದವ್ಯ ವೃದ್ಧಿಯಾಗಲಿದೆ. ಜತೆಗೆ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳೂ ಕಡಿಮೆಯಾಗಲಿದೆ ಎಂದರು.ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ತೆರೆದ ಮನೆ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ. ಪೋಷಕರು ಚಿಕ್ಕಂದಿನಿಂದಲೇ ತಮ್ಮ ಮಕ್ಕಳಿಗೆ ಪೊಲೀಸರ ಕುರಿತು ಭಯದ ವಾತಾವರಣ ಸೃಷ್ಠಿ ಮಾಡುತ್ತಿದ್ದಾರೆ. ಹಾಗಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಬೇಕು. ಪೊಲೀಸರು ನಮ್ಮ ಸಹಾಯಕ್ಕೆ ಇದ್ದಾರೆ ಎಂಬ ಭಾವನೆ ಮೂಡಿಸಬೇಕು ಎಂದು ಹೇಳಿದರು.ತೆರೆದ ಮನೆ ಕಾರ್ಯಕ್ರಮದ ಮೂಲಕ ಪೊಲೀಸ್ ವ್ಯವಸ್ಥೆ ಕುರಿತು ಹಾಗೂ ಪೊಲೀಸ್ ಇಲಾಖೆ ಕಾರ್ಯವೈಖರಿಯ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸುವ ಮೂಲಕ ಜನಸ್ನೇಹಿ ಪೊಲೀಸ್ ಆಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳು, ಮಿಷನ್ ವಾತ್ಸಲ್ಯ ಯೋಜನೆ ಹಾಗೂ ಮಕ್ಕಳ ನ್ಯಾಯ ಕಾಯ್ದೆ 2015 ತಿದ್ದುಪಡಿ 2021 ಬಾಲ್ಯವಿವಾಹ ನಿಷೇಧ ಕಾಯ್ದೆ 2006 ಕರ್ನಾಟಕ ತಿದ್ದುಪಡಿ ನಿಯಾವಳಿ 2016 ಕುರಿತು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಪ್ರಾದೇಶಿಕ ಸಂಯೋಜಕ ಡಾ.ಕೆ.ರಾಘವೇಂದ್ರ ಭಟ್ ಉಪನ್ಯಾಸ ನೀಡಿದರು.ಎಸ್‍ಜೆಪಿಯು ಅಧಿಕಾರಿಗಳ ಪಾತ್ರ ಮತ್ತು ಕರ್ತವ್ಯ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಅಧಿನಿಯಮ 2012ರ ಕುರಿತು ಪೊಲೀಸ್ ಮಹಾನಿರ್ದೇಶಕರ ತರಬೇತಿ ಕಚೇರಿಯ ಪೊಲೀಸ್ ತರಬೇತಿದಾರ ಸಿ.ಬಿ.ರೋಹಿತ್ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಜಿ.ಟಿ ಬಸವರಾಜ್, ಬಾಲನ್ಯಾಯ ಮಂಡಳಿ ಸದಸ್ಯೆ ಸುಮನ್ ಎಸ್ ಅಂಗಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್. ಪವಿತ್ರ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.