ರೈಲ್ವೆ ನಿಲ್ದಾಣಗಳಲ್ಲಿ ಏರ್‌ಪೋರ್ಟ್‌ಮಾದರಿ ಭದ್ರತೆಗೆ ಪೊಲೀಸ್‌ ಸರ್ವೆ

| Published : Feb 04 2024, 01:35 AM IST

ಸಾರಾಂಶ

ನೈಋತ್ಯ ರೈಲ್ವೆ ವಿಭಾಗದ ರೈಲು ನಿಲ್ದಾಣಗಳಲ್ಲಿ ವಿಮಾನ ನಿಲ್ಧಾಣ ಮಾದರಿ ಭದ್ರತೆ ನೀಡಲು ಪೊಲೀಸರು ಸರ್ವೆ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜನದಟ್ಟಣೆ ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲು ಇನ್ನಷ್ಟು ಸಿಸಿ ಕ್ಯಾಮೆರಾ ಸೇರಿ ವಿಮಾನ ನಿಲ್ದಾಣ ಮಾದರಿ ಭದ್ರತೆ ಕೈಗೊಳ್ಳಲು ನೈಋತ್ಯ ರೈಲ್ವೆ ವಲಯ ಮುಂದಾಗಿದ್ದು, ಇದಕ್ಕಾಗಿ ರೈಲ್ವೆ ರಕ್ಷಣಾ ದಳ ಹಾಗೂ ರಾಜ್ಯ ರೈಲ್ವೆ ಪೊಲೀಸ್‌ ಜಂಟಿಯಾಗಿ ಸರ್ವೆ ಕೈಗೊಂಡಿವೆ.

ಈಚೆಗೆ ರೈಲ್ವೆ ನಿಲ್ದಾಣಗಳ ಭದ್ರತೆ ಕುರಿತು ನಡೆದ ಸಭೆಯಲ್ಲಿ ಹೆಚ್ಚಿನ ಸಿ.ಸಿ. ಕ್ಯಾಮೆರಾ, ಪ್ರವೇಶ ದ್ವಾರದಲ್ಲಿ ಮೆಟಲ್‌ ಡಿಟೆಕ್ಟರ್‌, ಬ್ಯಾಗೇಜ್‌ ಸ್ಕ್ಯಾನರ್‌ ಅಳವಡಿಕೆ ಬಗ್ಗೆ ರಾಜ್ಯ ರೈಲ್ವೆ ಪೊಲೀಸರು ಪ್ರಸ್ತಾಪಿಸಿದ್ದಾರೆ. ವಿಶೇಷವಾಗಿ ನವೀಕರಣಗೊಂಡಿರುವ ನಿಲ್ದಾಣಗಳಲ್ಲಿ ಅಳವಡಿಸುವಂತೆ ಆಗ್ರಹ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಜಂಟಿ ಸರ್ವೆ ಕೈಗೊಂಡು ಎಲ್ಲೆಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಕೆ ಅಗತ್ಯವಿದೆ ಎಂದು ಗುರುತಿಸಿ ತಿಳಿಸುವಂತೆ ನೈಋತ್ಯ ರೈಲ್ವೆ ಆರ್‌ಪಿಎಫ್ ಹಾಗೂ ಜಿಆರ್‌ಪಿಗೆ ಕೋರಿದೆ.

ನಗರದ ಕೆಎಸ್‌ಆರ್‌ ನಿಲ್ದಾಣದಲ್ಲಿ ಪ್ರವೇಶ ದ್ವಾರ, ನಿರ್ಗಮನ, ಹತ್ತು ಪ್ಲಾಟ್‌ಫಾರ್ಮ್‌ಗಳು ಸೇರಿ 83 ಸಿಸಿ ಕ್ಯಾಮೆರಾಗಳಿವೆ. ಯಶವಂತಪುರ ನಿಲ್ದಾಣದ 6 ಪ್ಲಾಟ್‌ಫಾರಂ ಸೇರಿದಂತೆ 48 ಸಿಸಿ ಕ್ಯಾಮೆರಾಗಳಿದ್ದು, ಉಳಿದಂತೆ ಬೆಂಗಳೂರು ದಂಡು ನಿಲ್ದಾಣದಲ್ಲಿ 29, ಬಂಗಾರಪೇಟೆ 35, ಕೆ.ಆರ್‌.ಪುರ ನಿಲ್ದಾಣದಲ್ಲಿ 30, ಸತ್ಯಸಾಯಿ ಪ್ರಶಾಂತಿ ನಿಲಯ ನಿಲ್ದಾಣದಲ್ಲಿ 28, ಬಾಣಸವಾಡಿಯಲ್ಲಿ 25, ಸರ್‌.ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ 63 ಸಿಸಿ ಕ್ಯಾಮೆರಾಗಳಿವೆ. ಆದರೆ ಇವುಗಳಲ್ಲಿ ಹಲವು ದುರಸ್ತಿಯಲ್ಲಿವೆ.

ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ವಿಮಾನ ನಿಲ್ದಾಣ ಮಾದರಿ ಭದ್ರತೆ ಕೈಗೊಳ್ಳುವ ಬಗ್ಗೆ ಚರ್ಚೆಯಾಗಿದೆ. ಈ ಕುರಿತು ಆರ್‌ಪಿಎಫ್ ಹಾಗೂ ಜಿಆರ್‌ಪಿ ಸರ್ವೆ ನಡೆಸುತ್ತಿದ್ದು, ಶೀಘ್ರವೇ ವರದಿ ನೀಡಲಿವೆ. ವರದಿ ಆಧರಿಸಿ ತೀರ್ಮಾನ ಮಾಡಲಾಗುವುದು. ರೈಲ್ವೆ ನಿಲ್ದಾಣಗಳಲ್ಲಿ ಕಳ್ಳತನ, ಮಹಿಳೆಯರ ಮೇಲಿನ ದೌರ್ಜನ್ಯ, ಚಲನವಲನದ ಮೇಲೆ ನಿಗಾ ಇಡಲು ಎಲ್ಲ ಪ್ರವೇಶ ದ್ವಾರ, ಪ್ಲಾಟ್‌ಫಾರ್ಮ್‌ನಲ್ಲಿ ಭದ್ರತೆ ಹೆಚ್ಚಿಸಿಕೊಳ್ಳಲು ಮುಂದಾಗಲಿದ್ದೇವೆ. ಜೊತೆಗೆ ದಂಡು ರೈಲ್ವೆ ನಿಲ್ದಾಣ ಸೇರಿ ಇತರೆಡೆ ಹೊಸ ಪ್ಲಾಟ್‌ಫಾರ್ಮ್‌ಗಳು ನಿರ್ಮಾಣವಾಗಿವೆ. ಇಲ್ಲಿಯೂ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧಾರವಾಗಿದೆ ಎಂದು ತಿಳಿಸಿದರು.