ಕೊಪ್ಪಳ: ಜಿಲ್ಲೆಯಲ್ಲಿ ೬೮ ರೌಡಿಶೀಟರ್‌ಗಳ ಮನೆಗಳಿಗೆ ಸೋಮವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ನಮ್ಮ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿ, ಐಜಿಪಿ ಮಾರ್ಗದರ್ಶನದ ಪ್ರಕಾರ ಜಿಲ್ಲೆಯಲ್ಲಿ ಡಿವೈಎಸ್ಪಿ, ಸಿಪಿಐ, ಪಿಎಸ್‌ಐ ಸಿಬ್ಬಂದಿ ಒಳಗೊಂಡ ೩೩ ತಂಡ ರಚಿಸಿ ಏಕಕಾಲಕ್ಕೆ ರೌಡಿಶೀಟರ್‌ಗಳ ಮನೆ ತಪಾಸಣೆ ಮಾಡಿದ್ದೇವೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಭಾಗವಾಗಿ ನಾನು ಕೂಡ ತಂಡದ ಭಾಗವಾಗಿ ರೌಡಿಶೀಟರ್ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದೇನೆ. ಈ ಪೈಕಿ ಗಂಗಾವತಿ ನಗರದ ಗುಂಡಮ್ಮ ಕ್ಯಾಂಪ್ ಬಳಿಯಿರುವ ವೆಂಕಟೇಶ ಎಂಬ ರೌಡಿಶೀಟರ್ ಮನೆಯಲ್ಲಿ ಪರಿಶೀಲನೆ ವೇಳೆ ₹೩ ಲಕ್ಷ ದೊರಕಿದೆ. ಈ ಹಣ ಯಾವುದರ ಹಿನ್ನೆಲೆಯಲ್ಲಿ ಮನೆಯಲ್ಲಿ ಇರಿಸಿಕೊಂಡಿದ್ದಾರೆ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.

ಜಿಲ್ಲೆಯಲ್ಲಿ ಒಟ್ಟು ೯೦೦ ರೌಡಿ ಶೀಟರ್‌ಗಳಿದ್ದು, ಎಲ್ಲರ ಮೇಲೆಯೂ ನಿಗಾ ಇಡಲಾಗಿದೆ. ಪ್ರಮುಖವಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಉದ್ದೇಶ ಹೊಂದಿದ ೬೮ ಜನರ ಮನೆಗಳನ್ನು ತಪಾಸಣೆ ಮಾಡಲಾಗಿದ್ದು, ಆಕ್ಷೇಪಾರ್ಹ ವಸ್ತುಗಳು ಕಂಡು ಬಂದಿಲ್ಲ. ಈ ತಪಾಸಣೆ ಮುಂದಿನ ದಿನಗಳಲ್ಲಿ ನಿರಂತರವಾಗಿರಲಿದೆ. ೧೬ ರೌಡಿಶೀಟರ್‌ಗಳ ಗಡೀಪಾರಿಗೆ ಮುಂದಾಗಿದ್ದೇವೆ. ಈ ಪೈಕಿ ಕಳೆದ ತಿಂಗಳು ಮೂವರನ್ನು ಗಡೀಪಾರು ಮಾಡಿದ್ದೇವೆ. ಉಳಿದಂತೆ ನಡವಳಿಕೆ ತಿದ್ದಿಕೊಂಡ ಹಾಗೂ ಅನಾರೋಗ್ಯ ಹಿನ್ನೆಲೆ ೫೫ ಜನರನ್ನು ರೌಡಿಶೀಟರ್ ಪಟ್ಟಿಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.

ಇನ್ನೂ ನಗರದಲ್ಲಿ ಕಳೆದ ವಾರ ಜರುಗಿದ ಎರಡು ಕಳ್ಳತನ ಪ್ರಕರಣದ ಪೈಕಿ ಒಂದು ಪ್ರಕರಣದಲ್ಲಿ ೧೨೦ ಗ್ರಾಂ ಬಂಗಾರ, ೪.೫ ಕೆಜಿ ಬೆಳ್ಳಿ ಕದ್ದ ಆರೋಪಿಯನ್ನು ಈಗಾಗಲೇ ಬಂಧಿಸಿದ್ದೇವೆ. ಇನ್ನೊಂದು ಕಳ್ಳತನದ ಆರೋಪಿಗಳನ್ನು ಪತ್ತೆ ಹಚ್ಚಲು ತಂಡ ರಚಿಸಲಾಗಿದ್ದು, ಶೀಘ್ರದಲ್ಲಿಯೇ ಬಂಧಿಸುವ ಕೆಲಸ ಮಾಡಲಿದ್ದೇವೆ ಎಂದರು.