‘ಕುರುಕ್ಷೇತ್ರ’ಕ್ಕಾಗಿ ಬಣ್ಣ ಹಚ್ಚಲಿರುವ ಆರಕ್ಷಕರು

| Published : Aug 22 2025, 12:00 AM IST

‘ಕುರುಕ್ಷೇತ್ರ’ಕ್ಕಾಗಿ ಬಣ್ಣ ಹಚ್ಚಲಿರುವ ಆರಕ್ಷಕರು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಹಾಗೂ ಬಿಗಿ ಬಂದೋಬಸ್ತ್ ಒದಗಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಸದಾ ಒತ್ತಡದಿಂದ ಕಾರ್ಯನಿರ್ವಹಿಸುವ ಜಿಲ್ಲೆಯ ಪೊಲೀಸರು ಬಣ್ಣ ಹಚ್ಚುವ ತಯಾರಿಯಲ್ಲಿ ತೊಡಗಿದ್ದಾರೆ.

ರಾಮನಗರ: ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಹಾಗೂ ಬಿಗಿ ಬಂದೋಬಸ್ತ್ ಒದಗಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಸದಾ ಒತ್ತಡದಿಂದ ಕಾರ್ಯನಿರ್ವಹಿಸುವ ಜಿಲ್ಲೆಯ ಪೊಲೀಸರು ಬಣ್ಣ ಹಚ್ಚುವ ತಯಾರಿಯಲ್ಲಿ ತೊಡಗಿದ್ದಾರೆ.

ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ದಿನನಿತ್ಯದ ಎಲ್ಲ ಜಂಜಾಟಗಳ ನಡುವೆಯೂ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕ ಪ್ರದರ್ಶನಕ್ಕಾಗಿ ತಾಲೀಮು ನಡೆಸುತ್ತಿದ್ದಾರೆ.

ಆಗಸ್ಟ್ 24ರಂದು ಮಧ್ಯಾಹ್ನ 12 ಗಂಟೆಗೆ ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಪಾತ್ರಧಾರಿಗಳಾಗಿರುವುದು ಕುತೂಹಲ ಹೆಚ್ಚಿಸಿದೆ.

ಬಿಡುವಿನ ವೇಳೆಯಲ್ಲಿ ಅಭ್ಯಾಸ:

ರಾಮನಗರದ ಹಳೇ ಬಸ್ ನಿಲ್ದಾಣ ವೃತ್ತದ ಬಳಿಯಿರುವ ಅಮರ ಜ್ಯೋತಿ ಕಲಾ ಬಳಗದ ಕಚೇರಿಯಲ್ಲಿ ಕಳೆದ ಮೂರು ತಿಂಗಳಿಂದ ಪೊಲೀಸರು ಭೇದ ಭಾವ ಇಲ್ಲದೆ ರಿಹರ್ಸಲ್ ನಲ್ಲಿ ತೊಡಗಿದ್ದಾರೆ. ಇಲಾಖೆಯಲ್ಲಿ ರಜೆ ಸಿಗದಿದ್ದರೂ ತಮ್ಮ ಕರ್ತವ್ಯ ಮುಗಿದ ಮೇಲೆ ಬಿಡುವಿನ ವೇಳೆ ಮತ್ತು ರಾತ್ರಿ ಸಮಯಗಳಲ್ಲಿ ರಂಗನಿರ್ದೇಶಕರಾದ ಬೆಳ್ಳಿ ಕಿರೀಟ ಪುರಸ್ಕೃತ ಶಿವಾನಂದ ಮೂರ್ತಿ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವೈಯಕ್ತಿಕವಾಗಿ ಮತ್ತು ಕೆಲವರು ತಂಡಗಳಾಗಿ ಲಭ್ಯವಿರುವವರು ನಾಟಕದ ಕೆಲವು ಭಾಗಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಈ ನಾಟಕದಲ್ಲಿ 20 ಪೊಲೀಸರು ಅಭಿನಯಿಸುತ್ತಿದ್ದು, ಇದರಲ್ಲಿ ಕೆಲವರು ಈ ಮೊದಲೇ ನಾಟಕದಲ್ಲಿ ಅಭಿನಯಿಸಿ ಅನುಭವ ಹೊಂದಿದ್ದರೆ, ಮೊದಲ ಬಾರಿಗೆ ಬಣ್ಣ ಹಚ್ಚಿದವರೂ ಇದ್ದಾರೆ.

ಲಾಠಿ ಹಿಡಿಯುವ ಪಾತ್ರಧಾರಿ ಪೊಲೀಸರ ಕೈಗಳಲ್ಲಿ ಗದೆ, ಬಿಲ್ಲು, ತಂಬೂರಿ ಬಂದಿದೆ. ಏರು ಧ್ವನಿಯಲ್ಲಿ ಮಾತನಾಡುತ್ತ ಸಾರ್ವಜನಿಕರನ್ನು ನಿಯಂತ್ರಿಸುತ್ತಿದ್ದವರು ನಯ ವಿನಯದ ಮಾತುಗಳಾಡುತ್ತಿದ್ದಾರೆ. ಖಾಕಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೊಲೀಸರು ಸೂತ್ರಧಾರಿ, ದುರ್ಯೋಧನ, ಧರ್ಮರಾಯ, ಕೃಷ್ಣ, ಅರ್ಜುನ, ಬಲರಾಮ, ಭೀಷ್ಮ, ದ್ರೋಣ ಸೇರಿ ಇತರೆ ಪಾತ್ರಗಳಲ್ಲಿ ಗಮನ ಸೆಳೆಯಲು ಅಣಿಯಾಗಿದ್ದಾರೆ.

ರಂಗಭೂಮಿ ನಂಟುಳ್ಳವರು :

ಪೊಲೀಸ್ ಅಧಿಕಾರಿಗಳಾದ ಕೆ.ವೆಂಕಟೇಶ್, ಬೋರೇಗೌಡ, ಡಿ.ಸಿ.ಹನುಮಂತೇಗೌಡ, ಪಿ.ವೈ. ಕೇಶವಮೂರ್ತಿ, ಮುಖ್ಯ ಪೇದೆಗಳಾದ ಮುತ್ತುರಾಜು, ಮದ್ದೂರಯ್ಯ ಸೇರಿದಂತೆ ಅನೇಕರು ರಂಗಭೂಮಿ ನಂಟು ಉಳ್ಳವರಾಗಿದ್ದು, ಕೆಲ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಹೊಂದಿದ್ದಾರೆ.

ಈ ಹಿಂದೆ 2016-17ರಲ್ಲಿಯೂ ಪೊಲೀಸರು ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕ ಪ್ರದರ್ಶಿಸಿದಾಗ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸುಮಾರು 9 ವರ್ಷಗಳ ತರುವಾಯ ಮತ್ತೊಮ್ಮೆ ಪೊಲೀಸರು ತಮ್ಮೊಳಗಿನ ಪ್ರತಿಭೆಯನ್ನು ಹೊರ ಹಾಕಲು ಸಜ್ಜಾಗಿದ್ದಾರೆ.

(ಈ ಕೋಟ್‌ನ್ನು ಪ್ಯಾನಲ್ಲಿ ಬಳಸಿ)

ಕೋಟ್ .............

ಪೊಲೀಸ್ ಇಲಾಖೆಯ ಸಾಕಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿಯೂ ಕಲಾಪ್ರತಿಭೆ ಇದೆ. ಕಲೆ, ಸಾಹಿತ್ಯ, ರಂಗಭೂಮಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿದ್ದಾರೆ. ಆದರೆ, ಕೆಲಸದ ಒತ್ತಡದಿಂದಾಗಿ ಅವೆಲ್ಲವನ್ನು ಮರೆಯುತ್ತಿದ್ದಾರೆ. ಈಗ ಪೊಲೀಸರು ಪೌರಾಣಿಕ ನಾಟಕ ಪ್ರದರ್ಶನಕ್ಕೆ ಮುಂದಾಗಿದ್ದು, ಅವರೆಲ್ಲರನ್ನು ನಾವು ಪ್ರೋತ್ಸಾಹಿಸುತ್ತೇವೆ.

- ಶ್ರೀನಿವಾಸಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂ.ದಕ್ಷಿಣ ಜಿಲ್ಲೆ

ಕೋಟ್ ...............

ನಾಟಕಕ್ಕೆ ನಿರ್ದೇಶನ ಮಾಡುವುದಕ್ಕೆ ಮನವಿ ಮಾಡಿದಾಗ ಸಂತೋಷದಿಂದ ಒಪ್ಪಿಕೊಂಡೆ. ಅಭ್ಯಾಸದ ವೇಳೆ ಅವರಲ್ಲಿ ಪೊಲೀಸ್ ಎಂಬ ಭಾವನೆ ಇರಲಿಲ್ಲ. ಸ್ನೇಹಿತರಂತೆ ಇದ್ದರು. ನನ್ನ ವೃತ್ತಿ ಜೀವನದಲ್ಲಿ 2ನೇ ಬಾರಿ ಪೊಲೀಸರಿಗೆ ನಾಟಕ ನಿರ್ದೇಶನ ಮಾಡಿರುವುದು ಹೆಮ್ಮೆ ಎನಿಸುತ್ತದೆ.

-ಶಿವಾನಂದಮೂರ್ತಿ, ನಾಟಕ ನಿರ್ದೇಶಕ

ಬಾಕ್ಸ್................

ಲಾಬೂ ರಾಮ್ ಅವರಿಂದ ಉದ್ಘಾಟನೆ:

ಪೊಲೀಸ್ ಮಹಾ ನಿರೀಕ್ಷಕ ಲಾಬೂ ರಾಮ್ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಅಧ್ಯಕ್ಷತೆ ವಹಿಸುವರು. ಅಪರ ಪೊಲೀಸ್ ಅಧೀಕ್ಷಕರಾದ ರಾಮಚಂದ್ರಪ್ಪ, ಡಿ.ಎಸ್.ರಾಜೇಂದ್ರ, ರಾಮನಗರ ಉಪವಿಭಾಗ ಆರಕ್ಷಕ ಉಪಾಧೀಕ್ಷಕ ಶ್ರೀನಿವಾಸ್ , ಚನ್ನಪಟ್ಟಣ ಉಪ ವಿಭಾಗ ಆರಕ್ಷಕ ಉಪಾಧೀಕ್ಷಕ ಕೆ.ಸಿ.ಗಿರಿ, ಮಾಗಡಿ ಉಪವಿಭಾಗ ಆರಕ್ಷಕ ಉಪಾಧೀಕ್ಷಕ ಎಂ.ಪ್ರವೀಣ್ , ರಾಮನಗರ ಸಿಇಎನ್ ಪೊಲೀಸ್ ಠಾಣೆ ಆರಕ್ಷಕ ಉಪಾಧೀಕ್ಷಕ ಕೆಂಚೇಗೌಡ, ಕೆ.ಆರ್ .ರಘು ಪಾಲ್ಗೊಳ್ಳಲಿದ್ದಾರೆ.

ಬಾಕ್ಸ್ ................

ಯಾರ್ಯಾರಿಗೆ ಯಾವ ಪಾತ್ರ:

ಕಗ್ಗಲೀಪುರ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಕೆ.ವೆಂಕಟೇಶ್ - ಸೂತ್ರಧಾರಿ, ಬಿಡದಿ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪಿ.ವೈ.ಕೇಶವಮೂರ್ತಿ -1ನೇ ದುರ್ಯೋಧನ, ಎಸ್.ಟಿ.ಬೋರೇಗೌಡ - 2ನೇ ಕೃಷ್ಣ, ನರಸಿಂಹಯ್ಯ - ಧರ್ಮರಾಯ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಎಂ.ನಾಗರಾಜು - 1ನೇ ದುರ್ಯೋಧನ, ಡಿ.ಸಿ.ಹನುಮಂತೇಗೌಡ - 2ನೇ ದುರ್ಯೋಧನ, ಗುರು - ಅರ್ಜುನ, ಎಆರ್ ಎಸ್ ಐ ಪ್ರಕಾಶ್ - ಭೀಷ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುಖ್ಯ ಪೇದೆಗಳಾದ ರಾಜಶೇಖರ್ - ದ್ರೋಣ, ಮುತ್ತುರಾಜು - ದುಶ್ಯಾಸನ, ಕೆ.ಪಿ.ರಮೇಶ್ ಗೌಡ , ಮದ್ದೂರಯ್ಯ - 1ನೇ ಶ್ರೀ ಕೃಷ್ಣ, ಎಚ್.ಸಿ.ರಾಜು - ಸೈನ್ಯಾಧಿ, ಎಂ.ಪಿ.ನಾಗೇಶ್ - ಕರ್ಣ, ಕಬ್ಬಾಲು ಲೋಕೇಶ್ - ಶಕುನಿ, ಪಾದರಹಳ್ಳಿ ರಮೇಶ್ - ಬಲರಾಮ, ತಿಪ್ಪೇಸ್ವಾಮಿ - ಸಾತ್ಯಕಿ , ಪೇದೆಗಳಾದ - ಎ.ಆರ್. ಮನುಕುಮಾರ್ - ಭೀಮಸೇನೆ, ಮೋಹನ್ - ಅಭಿಮನ್ಯು, ಎಂ.ಎಸ್. ಕುಮಾರ್ - ವಿದುರನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಕಲಾವಿದರಾದ ಮೈಸೂರಿನ ಶರ್ಮಿಳಾ - 2ನೇ ರುಕ್ಮಿಣಿ, ದೀಪಿಕಾ - ದ್ರೌಪದಿ, ಕುಂತಿ ಹಾಗೂ ಮಂಡ್ಯದ ಪ್ರಿಯಾಂಕ - 2ನೇ ರುಕ್ಮಿಣಿ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

21ಕೆಆರ್ ಎಂಎನ್ 3,4,5,6.ಜೆಪಿಜಿ

3,4.ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನಕ್ಕಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಾಲೀಮು ನಡೆಸುತ್ತಿರುವುದು.

5.ಶ್ರೀನಿವಾಸಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂ.ದಕ್ಷಿಣ ಜಿಲ್ಲೆ.

6.ಶಿವಾನಂದ ಮೂರ್ತಿ, ನಾಟಕ ನಿರ್ದೇಶಕ.