ಪೋಲಿಯೋ ಒಂದು ಅಪಾಯಕಾರಿ ಕಾಯಿಲೆಯಾಗಿದ್ದು, ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯ ಉಂಟು ಮಾಡುವ ಸಾಧ್ಯತೆ ಇದೆ

ಕುಷ್ಟಗಿ: ಪೋಲಿಯೋವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವುದು ಅತ್ಯಂತ ಅಗತ್ಯವಾಗಿದೆ. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಪೋಷಕರು ಜಾಗೃತಿ ವಹಿಸಬೇಕು ಎಂದು ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎನ್‌.ಆರ್‌.ಪವಾರ್ ಹೇಳಿದರು.

ತಾಲೂಕಿನ ದೋಟಿಹಾಳ ಗ್ರಾಮದ ಕೈಮಗ್ಗ‌ ನೇಕಾರ ಉತ್ಪಾದಕ ಮತ್ತು ಮಾರಾಟ ಸಹಕಾರ ಸಂಘದಲ್ಲಿ ಸ್ಥಾಪಿಸಲಾದ ಪೋಲಿಯೋ ಬೂತಿನಲ್ಲಿ ನಡೆದ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

ಪೋಲಿಯೋ ಒಂದು ಅಪಾಯಕಾರಿ ಕಾಯಿಲೆಯಾಗಿದ್ದು, ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯ ಉಂಟು ಮಾಡುವ ಸಾಧ್ಯತೆ ಇದೆ. ಆದರೆ ನಿಯಮಿತವಾಗಿ ಪೋಲಿಯೋ ಲಸಿಕೆ ನೀಡುವುದರಿಂದ ಈ ರೋಗ ಸಂಪೂರ್ಣವಾಗಿ ತಡೆಗಟ್ಟಬಹುದು. ದೇಶವು ಪೋಲಿಯೋ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆ ಉಳಿಸಿಕೊಳ್ಳಲು ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಪ್ರತಿಯೊಂದು ಲಸಿಕಾ ಅಭಿಯಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.

ಪೋಷಕರು ಯಾವುದೇ ತಪ್ಪು ಕಲ್ಪನೆಗಳಿಗೆ ಒಳಗಾಗದೆ ತಮ್ಮ ಮಕ್ಕಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಂದು ಸುತ್ತಿನಲ್ಲೂ ಪೋಲಿಯೋ ಹನಿ ಹಾಕಿಸಬೇಕು. ಒಂದು ಮಗುವೂ ಲಸಿಕೆಯಿಂದ ವಂಚಿತವಾಗಬಾರದು ಎಂಬುದು ಆರೋಗ್ಯ ಇಲಾಖೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ವಿಪಿಕೆ ಫೌಂಡೇಷನ್‌ ಮುಖ್ಯಸ್ಥ ಶ್ರೀನಿವಾಸ ಕಂಟ್ಲಿ, ಮಕ್ಕಳ ಆರೋಗ್ಯ ರಕ್ಷಣೆ ಪ್ರತಿಯೊಬ್ಬ ಪೋಷಕರ ಮೊದಲ ಆದ್ಯತೆಯಾಗಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಹಾಗೂ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಪೋಲಿಯೋ ಹನಿ ನೀಡುತ್ತಿದ್ದಾರೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಪೋಲಿಯೋ ನಿರ್ಮೂಲನೆಗಾಗಿ ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಕರ ಪಾತ್ರ ಮಹತ್ವದ್ದಾಗಿದೆ. ಅವರ ಪರಿಶ್ರಮದಿಂದಲೇ ದೇಶದಲ್ಲಿ ಪೋಲಿಯೋ ನಿಯಂತ್ರಣ ಸಾಧ್ಯವಾಗಿದೆ. ಈ ಯಶಸ್ಸನ್ನು ಮುಂದುವರಿಸಲು ಪ್ರತಿಯೊಬ್ಬ ನಾಗರಿಕನ ಸಹಕಾರ ಅಗತ್ಯ ಎಂದು ಹೇಳಿದರು.

ಈ ಅಭಿಯಾನದಲ್ಲಿ ಆರೋಗ್ಯ ಮೇಲ್ವಿಚಾರಕ ರವೀಂದ್ರ ನಂದಿಹಾಳ, ಬಸವರಾಜ ಚೋಕಾವಿ, ಮಾಜಿ ಗ್ರಾಪಂ ಸದಸ್ಯ ರಾಜೇಸಾಬ ಯಲಬುರ್ಗಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಜಾಲಿಹಾಳದಲ್ಲಿ ಪಲ್ಸ್‌ ಪೋಲಿಯೊ ಕಾರ್ಯಕ್ರಮವನ್ನು ಪಾರ್ವತೆಮ್ಮ ಸಜ್ಜನ, ಮಂಜುನಾಥ ಸಜ್ಜನ, ಯಲ್ಲಮ್ಮ ಪೂಜಾರಿ ಅವರಿಂದ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ನಿರೀಕ್ಷಣಾಧಿಕಾರಿ ವೆಂಕಟೇಶ್ ರೆಡ್ಡಿ, ಆಶಾ ಕಾರ್ಯಕರ್ತೆ ಈರಮ್ಮ ಖಾನಾಪುರ, ಅಂಗನವಾಡಿ ಕಾರ್ಯಕರ್ತೆ ಪ್ರೇಮಾ ಬಿಜ್ಜಲ, ಸಹಾಯಕಿ ನಿಂಬಮ್ಮ ಹಾಗೂ ಮಕ್ಕಳು ತಾಯಂದಿರು ಇದ್ದರು.