ಪೋಲಿಯೋ ಹನಿ ಹಾಕಿಸಿಕೊಳ್ಳುವುದರಿಂದ ಯಾವುದೇ ಸಮಸ್ಯೆಯಾಗದು, ಆರೋಗ್ಯ ಭಾರತ ನಿರ್ಮಾಣಕ್ಕಾಗಿ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ಭಾಗವಹಿಸಿ, ಯಾವುದೇ ಮಗು ಲಸಿಕೆಯಿಂದ ದೂರ ಉಳಿಯದಂತೆ ಕ್ರಮವಹಿಸಿ. ಈ ಲಸಿಕಾ ಕಾರ್ಯಕ್ರಮದಲ್ಲಿ ಮಕ್ಕಳ ಭಾಗವಹಿಸುವಿಕೆ ಬಹಳ ಮುಖ್ಯ.
ಕನ್ನಡಪ್ರಭ ವಾರ್ತೆ ಕೋಲಾರಭಾರತ ಪೋಲಿಯೋ ಮುಕ್ತವಾಗಿ ಸದಾ ಮುಂದುವರೆಯಲು ಮತ್ತು ದೇಶದ ಆಸ್ತಿಯಾದ ಮಕ್ಕಳು ಆರೋಗ್ಯದಿಂದರಲು ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ ಎಂದು ಸಂಸದ ಎಂ.ಮಲ್ಲೇಶಬಾಬು ಕರೆ ನೀಡಿದರು.ನಗರದ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಚಾಲನೆ ನೀಡಿ ಮಾತನಾಡಿ, ಪೋಲಿಯೋ ಹನಿ ಹಾಕಿಸಿಕೊಳ್ಳುವುದರಿಂದ ಯಾವುದೇ ಸಮಸ್ಯೆಯಾಗದು, ಆರೋಗ್ಯ ಭಾರತ ನಿರ್ಮಾಣಕ್ಕಾಗಿ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ಭಾಗವಹಿಸಿ, ಯಾವುದೇ ಮಗು ಲಸಿಕೆಯಿಂದ ದೂರ ಉಳಿಯದಂತೆ ಕ್ರಮವಹಿಸಿ ಎಂದು ಕಿವಿಮಾತು ಹೇಳಿದರು.ಮಕ್ಕಳಿಗೆ ಲಸಿಕೆ ಹಾಕಿಸಿ:
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಈ ಲಸಿಕಾ ಕಾರ್ಯಕ್ರಮದಲ್ಲಿ ಮಕ್ಕಳ ಭಾಗವಹಿಸುವಿಕೆ ಬಹಳ ಮುಖ್ಯವಾಗಿರುವುದರಿಂದ ಎಲ್ಲಾ ಸಾರ್ವಜನಿಕರು ೦-೫ವರ್ಷದೊಳಗಿನ ತಮ್ಮ ಮಕ್ಕಳಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ೨೦೨೫ನೇ ಸಾಲಿನಲ್ಲಿ ೦-೫ವರ್ಷದೊಳಗಿನ ೧,೬೪,೯೯೧ ಮಕ್ಕಳಿದ್ದು, ಇವರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿಯೆ ಜಿಲ್ಲೆಯಲ್ಲಿ ೭೪೯ ಬೂತ್‌ಗಳು, ೩೭ ಟ್ರಾನ್ಸಿಟ್ ಕೇಂದ್ರಗಳಿದ್ದು, ೩೦೬೪ ಲಸಿಕೆದಾರರನ್ನು ಹಾಗೂ ೧೬೪ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ, ಯಾವುದೇ ಮಗು ಪೋಲಿಯೋ ಹನಿ ಹಾಕಿಸಿಕೊಳ್ಳುವುದು ತಪ್ಪದಂತೆ ಅಗತ್ಯ ಕ್ರಮವಹಿಸಲಾಗಿದೆ ಎಂದರು.
ಜಿಪಂ ಸಿಇಓ ಪ್ರವೀಣ್ ಪಿ.ಬಾಗೇವಾಡಿ, ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ ಡಾ.ರಂಗನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್, ನಗರಸಭೆ ಆಯುಕ್ತ ನವೀನ್ ಚಂದ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಸಿಡಿಪಿಒ ರವಿಕುಮಾರ್, ವಿಕಲಚೇತನ ಕಲ್ಯಾಣಾಧಿಕಾರಿ ನಾಗರತ್ನಮ್ಮ ಇದ್ದರು.