ಸಾರಾಂಶ
ಸವದತ್ತಿ: ಸಮಾಜದಲ್ಲಿ ಮಹಿಳೆಯರು ಸಾಕಷ್ಟು ಸಬಲತೆ ಹೊಂದುತ್ತಿದ್ದು, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಇನ್ನೂ ಹೆಚ್ಚು ಸಾಧನೆ ಮಾಡುವ ನಿಟ್ಟಿನಲ್ಲಿ ಮುಂದೆ ಸಾಗಬೇಕಿದೆ ಎಂದು ಬೈಲಹೊಂಗಲದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಜೆ. ರಾಜೇಶ್ವರಿ ಹೇಳಿದರು.
ಕನ್ನಡಪ್ರಭ ವಾರ್ತೆ ಸವದತ್ತಿ
ಸಮಾಜದಲ್ಲಿ ಮಹಿಳೆಯರು ಸಾಕಷ್ಟು ಸಬಲತೆ ಹೊಂದುತ್ತಿದ್ದು, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಇನ್ನೂ ಹೆಚ್ಚು ಸಾಧನೆ ಮಾಡುವ ನಿಟ್ಟಿನಲ್ಲಿ ಮುಂದೆ ಸಾಗಬೇಕಿದೆ ಎಂದು ಬೈಲಹೊಂಗಲದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಜೆ. ರಾಜೇಶ್ವರಿ ಹೇಳಿದರು.ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರು ಸಬಲೀಕರಣಗೊಂಡರೂ ಸಹಿತ ಸಮಾನತೆಯ ಗುರಿ ಸಾಧನೆ ಸಾಧ್ಯವಾಗಿಲ್ಲ. ಪುರುಷ ಮತ್ತು ಮಹಿಳೆಯರು ಸೇರಿ ಸಮಾನತೆಯ ಸಮಾಜ ಕಟ್ಟಬೇಕಿದೆ ಎಂದ ಅವರು, ಮಹಿಳಾ ಶಕ್ತಿಯ ಮೇಲಿನ ಹೂಡಿಕೆ ವೇಗದ ಪ್ರಗತಿಯ ಫಲಿತಾಂಶ ಎಂದು 2024ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷ ವಾಕ್ಯವನ್ನಾಗಿ ಸರ್ಕಾರ ಘೋಷಿಸಿರುವುದು ಸ್ವಾಗತಾರ್ಹ ಎಂದರು.ಪ್ರಾಚಾರ್ಯ ಪ್ರೊ.ಮಾರುತಿ ದೊಂಬರ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು 1975ರಲ್ಲಿ ಮೊದಲ ಬಾರಿಗೆ ಆಚರಿಸಲಾಗಿದ್ದು, ಅಂದು ರಷ್ಯಾದಲ್ಲಿ ಬೇರೂರಿದ್ದ ಶಿಕ್ಷಣ, ಔದ್ಯೋಗಿಕ ಮತ್ತು ಸಾಮಾಜಿಕವಾಗಿ ಅಸಮಾನತೆ ವಿರುದ್ಧ ಹೋರಾಟಕ್ಕೆ ಕಿಚ್ಚು ನೀಡಿತ್ತು. ಇದಕ್ಕೂ ಮುಂಚೆ ಪಾಶ್ಚಾತ್ಯ ದೇಶಗಳಲ್ಲಿ 1909ರಲ್ಲಿ ಮೊದಲ ಬಾರಿಗೆ 15 ಸಾವಿರ ಮಹಿಳೆಯರು ಮತದಾನದ ಹಕ್ಕು, ರಾಜಕೀಯ ಹಕ್ಕಿಗಾಗಿ ಮತ್ತು ಸಮಾನ ವೇತನಕ್ಕಾಗಿ ಹೋರಾಟ ಕೈಗೊಂಡಿದ್ದರು ಎಂದು ಸ್ಮರಿಸಿದರು.
ಮಹಾವಿದ್ಯಾಲಯದ ವತಿಯಿಂದ ಡಾ.ಜೆ.ರಾಜೇಶ್ವರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಹನಾ ತೋರಗಲ್ಲ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎ.ಎ. ಹಳ್ಳೂರ ಸ್ವಾಗತಿಸಿದರು. ಸಪ್ನಾ ಕಲಾಲ್ ನಿರೂಪಿಸಿದರು. ಸುನಂದಾ ಹಟ್ಟಿ ವಂದಿಸಿದರು.