ಸಾರಾಂಶ
ಹಾವೇರಿ: ಯಾವುದೇ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಕನ್ನಡಪರ ಕಾಳಜಿಯನ್ನು ಪ್ರಸ್ತಾಪಿಸದಿರುವುದು ಅವರ ಕನ್ನಡ ಪ್ರೀತಿಯನ್ನು ತೋರಿಸುತ್ತದೆ ಎಂದು ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಹೇಳಿದರು.ಇಲ್ಲಿನ ಸಿಂದಗಿಮಠದಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಏಕೀಕರಣದ ಯೋಧರ ಯಶೋಗಾಥೆ ೩೧ರ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರನ್ನು ನಮ್ಮ ಯುವಕರು ಅರಿಯಬೇಕು. ಕನ್ನಡದ ಕಟ್ಟಾಳು ಪಾಟೀಲ್ ಪುಟ್ಟಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತಿತ್ತು. ಆದರೆ ಇಂದು ನಡುಗಿಸುವವರು ಇಲ್ಲ, ನಡುಗುವವರು ಇಲ್ಲ. ಗಳಗನಾಥರು ತಮ್ಮ ಕಾದಂಬರಿಗಳಲ್ಲಿ ಪ್ರಿಯ ವಾಚಕರೇ ಎಂದು ಆರಂಭವಾಗುತ್ತಿತ್ತು. ಅವರ ಈ ಶೈಲಿಯನ್ನು ಲಂಕೇಶ್ ಅವರು ಅಳವಡಿಸಿಕೊಂಡಿದ್ದರು ಎಂದು ಹೇಳಿದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಕರ್ನಾಟಕದಲ್ಲಿ ಶುದ್ಧ ಕನ್ನಡ ಅಪರೂಪವಾಗಿದೆ. ರಾಜಧಾನಿ ಬೆಂಗಳೂರಲ್ಲಿ ಎನ್ನಡ ಎಕ್ಕಡದವರು ಮಧ್ಯ ಕೆಲವೆಡೆ ಕನ್ನಡ ಸಿಗುತ್ತಿದೆ. ಕನ್ನಡದ ಇಂದಿನ ಇಂತಹ ಸ್ಥಿತಿಗತಿಯನ್ನು ಗಳಗನಾಥರು ಅಂದೇ ಮನಗಂಡಿದ್ದರು ಎಂದು ಭಾಸವಾಗುತ್ತದೆ ಎಂದರು. ಬೈರನ ಹಟ್ಟಿಯ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಉತ್ತರದ ಕನ್ನಡ ಪ್ರದೇಶಗಳಲ್ಲಿ ಮರಾಠಿ ಭಾಷೆಯ ಪ್ರಭಾವ, ಆಂಗ್ಲ ಭಾಷೆ ಹಾಗೂ ಆಡಳಿತದ ಪ್ರಭಾವದಿಂದಾಗಿ ಕನ್ನಡದ ಪರಿಸ್ಥಿತಿ ಶೋಚನೀಯವಾಗಿದ್ದ ಕಾಲದಲ್ಲಿ ನಾಡು-ನುಡಿಗಾಗಿ ದುಡಿದ ಸಾಹಿತಿ ಗಳಗನಾಥರು ಅತ್ಯಂತ ಪ್ರಮುಖರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಗಬೇಕೆಂದು ಗದುಗಿನ ತೋಂಟದ ಜಗದ್ಗುರುಗಳು ಪಾದಯಾತ್ರೆಯ ನೇತೃತ್ವವನ್ನು ವಹಿಸಿದ್ದರು ಎಂದು ಹೇಳಿದರು.ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಗಳಗನಾಥರ ಬದುಕು ಮತ್ತು ಹೋರಾಟ ಕುರಿತು ಮಾತನಾಡಿ, ಬಂಗಾಲಿ ಸಾಹಿತ್ಯಕ್ಕೆ ಬಕಿಂ ಚಂದ್ರ ಬಟರ್ಜಿ, ಮರಾಠಿ ಸಾಹಿತ್ಯಕ್ಕೆ ಹರಿನಾರಾಯಣ ಅಪ್ಟೆ ಯಾವ ಬಗೆಯ ಸೇವೆಯನ್ನು ಸಲ್ಲಿಸಿದರೋ ಅದೇ ಸೇವೆಯನ್ನು ಕನ್ನಡ ಭಾಷೆ, ಸಾಹಿತ್ಯಕ್ಕೆ ಗಳಗನಾಥರು ಸಲ್ಲಿಸಿದರು. ಆರೋಗ್ಯವಂತ ಸಮಾಜಕ್ಕೆ ಹಾಗೂ ದೇಶಾಭಿಮಾನ ಗಟ್ಟಿಗೊಳಿಸುವಲ್ಲಿ ಅವರ ಕಾದಂಬರಿಗಳು, ಅವರ ವಿಚಾರಗಳು ನಿತ್ಯ ನೂತನ, ಅವರು ಕನ್ನಡದ ಕಣಜವನ್ನು ತುಂಬಿದವರು. ನಡೆದಾಡುವ ಗ್ರಂಥಾಲಯ, ಆಧುನಿಕ ಕನ್ನಡ ಗದ್ಯದ ಆದ್ಯ ಕರ್ತೃ ಎಂದು ಹೇಳಿದರು.ಸಿಂದಗಿಮಠದ ಸಂಚಾಲಕ ಶಿವಬಸಯ್ಯ ಆರಾಧ್ಯಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಳಗನಾಥ ಪ್ರತಿಷ್ಠಾನದ ಸದಸ್ಯ ವೆಂಕಟೇಶ ಗಳಗನಾಥ, ಚಂದ್ರಶೇಖರ್ ಮಾಳಗಿ, ಸಾಹಿತಿ ಜಿ.ಎಂ. ಓಂಕಾರಣ್ಣನವರ, ಮಂಜುನಾಥ ಸಣ್ಣನಿಂಗಣ್ಣವರ್, ಬಸವರಾಜ್ ಮುಳಗುಂದ ಇದ್ದರು. ವಿ.ಎಚ್.ಹಿರೇಮಠ ಸ್ವಾಗತಿಸಿದರು. ಉಪನ್ಯಾಸಕ ಜಿ.ಎಸ್. ಭಟ್ ನಿರೂಪಿಸಿದರು. ಆರ್.ಬಿ. ಚಿನಿವಾಲರ ವಂದಿಸಿದರು.