ರಾಜಕೀಯ ಪಕ್ಷಗಳಿಂದ ರೈತ ಸಮುದಾಯಕ್ಕೆ ನ್ಯಾಯ ದೊರೆತ್ತಿಲ್ಲ

| Published : Nov 06 2024, 11:45 PM IST

ರಾಜಕೀಯ ಪಕ್ಷಗಳಿಂದ ರೈತ ಸಮುದಾಯಕ್ಕೆ ನ್ಯಾಯ ದೊರೆತ್ತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ರೈತಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ಪ್ರತಿಭಟನೆ ನೆಡಸಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ದೇಶದ ಇತಿಹಾಸದಲ್ಲಿ ರಾಜಕೀಯ ಪಕ್ಷಗಳಿಂದ ರೈತ ಸಮುದಾಯಕ್ಕೆ ಸೂಕ್ತ ನ್ಯಾಯ ದೊರೆತ್ತಿಲ್ಲ. ರಾಜ್ಯದಲ್ಲಿ ಉಪಚುನಾವಣೆ ಹಿನ್ನಲೆ ಎಲ್ಲಾ ಪಕ್ಷಗಳು ವಕ್ಪ್ ಆಸ್ತಿ ಕುರಿತು ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿವೆ. ಆದರೆ ರೈತರ ಹಿತಕ್ಕಾಗಿ ಹೋರಾಡುವುದು ರೈತಪರ ಸಂಘಟನೆಗಳು ಮಾತ್ರ ಎಂದು ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪಗೌಡ ಹೇಳಿದರು.

ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಗಳು ರೈತರ ಜಮೀನಗಳ ಪಹಣೆಯಲ್ಲಿ ವಕ್ಪ್ ಆಸ್ತಿ ಎಂದು ದಾಖಲಾಗಿರುವುದನ್ನು ಖಂಡಿಸಿ ಬುಧವಾರ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಅಮಾಯಕ ರೈತರ ಜಮೀನುಗಳ ಪಹಣೆಗಳಲ್ಲಿ ವಕ್ಪ್ ಆಸ್ತಿ ಎಂದು ನಮೂದಾಗುತ್ತಿರುವುದು ಈಗಿನ ಸಮಸ್ಯೆಯಲ್ಲ. 2020-21 ರಿಂದಲೂ ಗುಪ್ತವಾಗಿ ನಡೆಯುತ್ತ ಬರುತ್ತಿದೆ. ಇದೀಗ ರಾಜ್ಯದಲ್ಲಿ ರೈತರ ಮಾಲೀಕತ್ವದ ಜಮೀನುಗಳ ಪಹಣೆಯಲ್ಲಿ ವಕ್ಫ್ ಎಂದು ದಾಖಲಾಗಿರುವುದು ಬೆಳಕಿಗೆ ಬಂದಿದ್ದು, ರೈತರು ಇದರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.

ಸರ್ಕಾರ ರೈತರಿಗೆ ನೀಡಿರುವ ನೋಟೀಸ್ ವಾಪಾಸ್ ಪಡೆದರೆ ಸಾಲದು, ಜಮೀನಿನ ಪಹಣಿಯಲ್ಲಿ ಈಗಾಗಲೇ ದಾಖಲಾಗಿರುವ ವಕ್ಪ್ ಆಸ್ತಿ ಎನ್ನುವುದನ್ನು ರದ್ದುಪಡಿಸಬೇಕು ಎಂದು ಅಗ್ರಹಿಸಿದರು.

ರೈತರ ಜಮೀನುಗಳ ದಾಖಲೆಗಳಲ್ಲಿ ವಕ್ಪ್ ಆಸ್ತಿ ಎಂದು ನಮೂದಾಗಿರುವುದನ್ನು ನೋಡಿದರೆ. ರಾಜ್ಯದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಳ ನಡುವೆ ಯಾವುದೇ ಸಹಮತ, ಸಮನ್ವಯತೆ ಇಲ್ಲದಂತೆ ಭಾಸವಾಗುತ್ತಿದೆ ಎಂದು ದೂರಿದರು.

ಹಿರಿಯ ರೈತ ಮುಖಂಡ ಕುರುವ ಗಣೇಶಪ್ಪ ಮಾತನಾಡಿ, ರೈತರು ತಮ್ಮ ಜಮೀನುಗಳಿಗೆ ಸಂಬಂದಿಸಿದ ದಾಖಲೆಗಳ ಕುರಿತು ಪರಿಶೀಲಿಸಲು ಕಂದಾಯ ಇಲಾಖೆಗೆ ಹೋದರೆ ಅಧಿಕಾರಿಗಳು ಹಲವು ಕಾನೂನುಗಳನ್ನು ಹೇಳುತ್ತಾರೆ. ಆದರೆ ಇದೀಗ ರೈತರ ಜಮೀನುಗಳ ಪಹಣೆಯಲ್ಲಿ ಏಕಾಏಕಿಯಾಗಿ ವಕ್ಪ್ಆಸ್ತಿ ಎಂದು ದಾಖಲಾಗಿರಲು ಏನು ಕಾರಣ ಎಂಬುದನ್ನು ಯಾವ ಆಧಿಕಾರಿಯೂ ಕೂಡ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ನ್ಯಾಮತಿ ತಾಲೂಕು ಹಸಿರು ಸೇನೆ ಮುಖಂಡ ಬೆಳಗುತ್ತಿ ಉಮೇಶಪ್ಪ ಮಾತನಾಡಿ, ಕೇವಲ ಅಲ್ಪಸಂಖ್ಯಾತರನ್ನು ಓಲೈಸುವ ನಿಟ್ಟಿನಲ್ಲಿ ಪ್ರಸ್ತತ ಸರ್ಕಾರ ರೈತರ ಜಮೀನುಗಳು, ಸ್ಮಶಾನ ಹಾಗೂ ಬೆಲೆ ಬಾಳುವ ಕಮರ್ಷಿಯಲ್ ಜಾಗಗಳನ್ನು ವಕ್ಪ್ ಮಂಡಳಿ ಪಾಲಾಗುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.

ಈ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ.ಬಸಪ್ಪ ಮಾತನಾಡಿದರು. ಹಿರೇಮಠದ ಬಸವರಾಜಪ್ಪ, ದೊಡ್ಡೇರಿ ಬಸವರಾಜಪ್ಪ, ನ್ಯಾಮತಿ ಗೋಪಾಲ ನಾಯ್ಕ, ಶಿವಲಿಂಗಪ್ಪ, ಮಂಜಣ್ಣ, ಚನ್ನೇಶಣ್ಣ ಸೇರಿ ನೂರಾರು ರೈತರು ಭಾಗವಹಿಸಿದ್ದರು.

ಬಾಕ್ಸ:

ಸಮಸ್ಯೆ ಕುರಿತು ಡಿಸಿ ಕಚೇರಿಯಲ್ಲಿ ನ.20ಕ್ಕೆ ಸಭೆ

ರೈತರ ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ವಿ.ಅಭಿಷೇಕ್, ವಕ್ಫ್‌ ಸಮಸ್ಯೆ ಇದು ರಾಜ್ಯವ್ಯಾಪಿ ಸಮಸ್ಯೆಯಾಗಿದ್ದು, ನ.20ರಂದು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಮಟ್ಟದ ಸಭೆ ನಡೆಯಲಿದ್ದು, ಸಭೆಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ವ್ಯಾಪ್ತಿಯಲ್ಲಿ ಎಷ್ಟು ಜನ ರೈತರ ಮತ್ತು ಎಷ್ಟು ಎಕರೆ ಜಮೀನುಗಳ ದಾಖಲೆಗಳಲ್ಲಿ ಈ ರೀತಿ ವಕ್ಪ್ ಆಸ್ತಿ ಎಂದು ನಮೂದಾಗಿರುವ ಬಗ್ಗೆ ಸಮಗ್ರ ವರದಿ ಸಂಗ್ರಹಿಸಿಕೊಂಡು ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಂಡಿಸಲಿದ್ದಾರೆ. ಸಭೆಯಲ್ಲಿ ಪರಿಹಾರ ದೊರೆಯುವ ಸಾಧ್ಯತೆಗಳಿದ್ದು, ಈ ಹಿನ್ನಲೆಯಲ್ಲಿ ರೈತರು ಆತಂಕ ಪಡುವ ಆಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.