ರಾಜಕೀಯ ಪಕ್ಷಗಳಿಂದ ರೈತರ ಒಡೆದಾಳುವ ನೀತಿ: ಮಲ್ಲಿಕಾರ್ಜುನ ಬಳ್ಳಾರಿ ಆರೋಪ

| Published : Jan 16 2024, 01:45 AM IST

ರಾಜಕೀಯ ಪಕ್ಷಗಳಿಂದ ರೈತರ ಒಡೆದಾಳುವ ನೀತಿ: ಮಲ್ಲಿಕಾರ್ಜುನ ಬಳ್ಳಾರಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರೈತರನ್ನು ಒಡೆದಾಡುವ ನೀತಿಯನ್ನು ಬಹುತೇಕ ರಾಜಕೀಯ ಪಕ್ಷಗಳು ಅನುಸರಿಸುತ್ತಿವೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ರೈತರನ್ನು ಒಡೆದಾಡುವ ನೀತಿಯನ್ನು ಬಹುತೇಕ ರಾಜಕೀಯ ಪಕ್ಷಗಳು ಅನುಸರಿಸುತ್ತಿವೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದರು.

ಚಿಕ್ಕಬಾಸೂರಿನಲ್ಲಿ ನಡೆಯುತ್ತಿರುವ ಸಿದ್ಧರಾಮೇಶ್ವರ 851ನೇ ಜಯಂತಿ ಹಾಗೂ ನೊಳಂಬ ಸಮಾವೇಶದ ಎರಡನೇ ದಿನವಾದ ಸೋಮವಾರ ನಡೆದ ಕೃಷಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸರ್ಕಾರದ ಕೃಷಿ ನೀತಿಗಳಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ. ಇಂತಹ ಪ್ರಯತ್ನದಲ್ಲಿ ಕೆಲವು ದಿನಗಳ ಮಟ್ಟಿಗೆ ನೀವು ಮೇಲುಗೈ ಸಾಧಿಸಿದಂತೆ ಅನ್ನಿಸಬಹುದು. ಆದರೆ ಶಾಶ್ವತ ಪರಿಹಾರಕ್ಕಾಗಿ ಮುಂದೊಂದು ದಿವಸ ಇಡೀ ದೇಶವೇ ಪ್ರಾಯಶ್ಚಿತ್ತಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾನು ಬದುಕಿ ತನ್ನನ್ನು ನೆಚ್ಚಿದಂತಹ ಕುಟುಂಬ ಸೇರಿದಂತೆ ಭ್ರಷ್ಟ ಸರ್ಕಾರಗಳನ್ನು ಸಾಕಿ ಸಲಹುವ ಮೂಲಕ ರಾಜಧರ್ಮವನ್ನು ಪಾಲಿಸಿದ್ದು ಸಾಕು. ಇನ್ಮುಂದೆ ಆತ್ಮಹತ್ಯೆ ಮಾಡಿಕೊಂಡು ಬೆನ್ನು ತೋರಿಸುವುದಕ್ಕಿಂತ ಕೃಷಿಕಧರ್ಮವನ್ನು ಪಾಲಿಸೋಣ. ಯಾರಿಗಾಗಿ ಕೃಷಿ ಮಾಡೋದು ಬೇಡ, ನಮ್ಮ ಕುಟುಂಬಕ್ಕೆ ಸೀಮಿತವಾಗಿ ಕೃಷಿಯನ್ನು ನಡೆಸೋಣ ಎಂದರು.

ಬದಲಾವಣೆ ಮಾಡಿಕೊಳ್ಳದಿದ್ದರೆ ಸಾಧ್ಯವಿಲ್ಲ:

ರಾಮಣ್ಣ ಕೆಂಚಳ್ಳೇರ ಮಾತನಾಡಿ, ಲಕ್ಷಗಟ್ಟಲೆ ಹಣ ವ್ಯಯಸಿ ಹೈಬ್ರಿಡ್‌ ಬೀಜ ಮತ್ತು ರಾಸಾಯನಿಕ ಗೊಬ್ಬರ ಬಳಸಿ ಕೃಷಿ ನಡೆಸುತ್ತಿರುವುದು ಸಾಮಾನ್ಯ. ಇದರಿಂದ ಕೃಷಿ ಮೇಲಿನ ವೆಚ್ಚಗಳು ಹೆಚ್ಚಾಗುತ್ತಿವೆ. ಎಷ್ಟು ಬೆಳೆದರೂ ಕೃಷಿ ಲಾಭದಾಯಕ ಎನಿಸುತ್ತಿಲ್ಲ. ರಸಗೊಬ್ಬರಕ್ಕಾಗಿ ಮುಗಿಬಿದ್ದು ಜೀವ ಕಳೆದುಕೊಳ್ಳಬೇಡಿ. ರೈತ ಸಮುದಾಯಕ್ಕೆ ದೇವರು ಕೊಟ್ಟ ಕೃಷಿಯನ್ನು ನಾವೆಲ್ಲ ಪಾಲಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಯು.ಬಿ. ಬಣಕಾರ ಮಾತನಾಡಿ, ಮಿಶ್ರತಳಿ ಬೇಸಾಯ ಪದ್ಧತಿ ವೈಶಿಷ್ಟ್ಯ ಇತರರಿಗಿಂತ ಬಹಳ ವಿಭಿನ್ನ. ಸಾವಯವ ಕೃಷಿ ಪದ್ಧತಿ ಪೂರ್ವಿಕರಿಂದ ಬಂದ ವರದಾನ. ತಂದೆಯವರ ಕಾಲದಿಂದ ಸಾವಯವ ಪದ್ಧತಿಯಲ್ಲೇ ಕೃಷಿ ನಡೆಸಿಕೊಂಡು ಬಂದಿದ್ದು, ಈಗಲೂ ಮುಂದುವರಿದಿದೆ. ಸಾವಯವ ಕೃಷಿ ಪದ್ಧತಿಯಲ್ಲಿ ಭೂಮಿಯಲ್ಲಿ ತೇವಾಂಶ ಕಾಯ್ದುಕೊಳ್ಳುವ ಶಕ್ತಿ ಹೆಚ್ಚಾಗಿರುತ್ತದೆ. ಇದರಿಂದ ಸಮಯಕ್ಕೆ ಸರಿಯಾಗಿ ಮಳೆಯಾಗದಿದ್ದರೂ ಬೆಳೆಗೆ ಯಾವುದೇ ತೊಂದರೆಯಿಲ್ಲ ಎಂದರು.

ಸಾನ್ನಿಧ್ಯ ವಹಿಸಿದ್ದ ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀ ಮಾತನಾಡಿ, ದಿಢೀರ್ ಶ್ರೀಮಂತರಾಗಬೇಕೆಂಬ ಮನಸ್ಥಿತಿಯಿಂದ ರೈತ ಮೊದಲು ಹೊರಬರಬೇಕು. ತಂತ್ರಜ್ಞಾನದಿಂದ ಎಂದಿಗೂ ಹೊಟ್ಟೆ ತುಂಬಲು ಸಾಧ್ಯವಿಲ್ಲ. ಇಂದೇ ಸಂಕಲ್ಪ ಮಾಡಿಕೊಳ್ಳಿ. ರೈತರಿಲ್ಲದಿದ್ದರೆ ಭೂಮಿ ಮೇಲೆ ಯಾರೊಬ್ಬರ ಆಟವೂ ನಡೆಯುವುದಿಲ್ಲ. ವಾಸ್ತವ ಕೃಷಿ ನಡೆಸಲು ಮುಂದಾಗಬೇಕು. ಯಾವುದೇ ಕಾರಣಕ್ಕೂ ಹಣದಾಸೆಗಾಗಿ ಭೂಮಿಯನ್ನು ಒತ್ತೆ ಇಡುವುದಿಲ್ಲ ಎಂದು ಪ್ರಮಾಣ ಮಾಡಬೇಕು ಎಂದರು.

ಅರಸೀಕೆರೆ ಯಳನೋಡು ಮಹಾಸಂಸ್ಥಾನ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರಶ್ರೀಗಳು, ಕರಡಗವಿ ಮಠಾಧ್ಯಕ್ಷ ಶಿವಶಂಕರ ಶಿವಯೋಗಿ ಶ್ರೀಗಳು, ಎಪಿಎಂಸಿ ಕಾರ‍್ಯದರ್ಶಿ ಎಚ್.ವೈ. ಸತೀಶ್, ಎಂ.ಪಿ. ಮಲ್ಲಿಗಾರ, ಲಿಂಗಾಯತ ನೊಳಂಬ ಸಮಾಜದ ರಾಜ್ಯಾಧ್ಯಕ್ಷ ಎಸ್.ಆರ್. ಪಾಟೀಲ, ವೀರಭದ್ರಪ್ಪ ಗೊಡಚಿ ಇನ್ನಿತರರಿದ್ದರು.