ಜಿಲ್ಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜಕೀಯ ಪಕ್ಷಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ

SIR

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮತಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕವಾಗಿ ಮತಪಟ್ಟಿ ತಯಾರಿಕೆಗೆ ಪ್ರಮುಖ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವೆಂದು ಜಿಲ್ಲಾಧಿಕಾರಿ ಶ್ರೀರೂಪಾ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತಪಟ್ಟಿ ಪರಿಷ್ಕರಣೆ-2026ರ ಸಂಬಂಧ ಗಣತಿ ನಮೂನೆ ವಿತರಣೆ ಹಾಗೂ ಮತದಾರರ ಗಣಕೀಕರಣ ಕೆಲಸ ಕಾರ್ಯಗಳ ಪ್ರಗತಿ ಕುರಿತು ನೋಂದಾಯಿತ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಜಿಲ್ಲೆಯಲ್ಲಿ ಎಸ್‌ಐಆರ್‌ ವೇಗವಾಗಿ ಪ್ರಗತಿ ಕಾಣುತ್ತಿದೆ. ಮತದಾರರಿಗೆ ಗಣತಿ ನಮೂನೆ ವಿತರಣೆ ಹಾಗೂ ಗಣಕೀಕರಣ ಪ್ರಕ್ರಿಯೆಯಲ್ಲಿ ಚಾಮರಾಜನಗರ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಇತರರು ಸೇರಿದಂತೆ ಒಟ್ಟು 8,80,224 ಮತದಾರರಿದ್ದು, ಈಗಾಗಲೇ ಎಲ್ಲ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ ಜು. 22ರ ಬೆಳಿಗ್ಗೆ 8 ಗಂಟೆಯವರೆಗೆ 6,91,988 ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಗಣತಿ ನಮೂನೆ ವಿತರಣೆ ಸಂದರ್ಭದಲ್ಲಿ ಕಂಡುಬಂದಿರುವ ಗೈರು, ಸ್ಥಳಾಂತರ, ನಿಧನ, 2 ಕಡೆ ಹೆಸರು ಇರುವವರು ಹಾಗೂ ಇತರೆ ಕಾರಣಗಳಿರುವ ಒಟ್ಟು 50,099 ಮತದಾರರನ್ನು ಆಯಾ ವಿಧಾನಸಭಾ ಕ್ಷೇತ್ರದ ಮತಗಟ್ಟೆವಾರು ಗುರುತಿಸಲಾಗಿದೆ. ನೋಂದಾಯಿತ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಬಗ್ಗೆ ತಮ್ಮ ಸಲಹೆ, ಅಭಿಪ್ರಾಯ ನೀಡಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಲಾಗುವುದು. ಯಾವುದೇ ಅರ್ಹ ಮತದಾರರು ಪಟ್ಟಿ ಸೇರ್ಪಡೆಯಿಂದ ಬಿಟ್ಟು ಹೋಗದಂತೆ ತಡೆಯುವುದು ಪರಿಷ್ಕರಣೆ ಕಾರ್ಯದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಮತಗಟ್ಟೆವಾರು ಗಣತಿ ನಮೂನೆಗಳ ವಿತರಣೆಯಲ್ಲಿ ವ್ಯತ್ಯಾಸವಾಗಬಾರದು. ಆಯಾ ಮತಗಟ್ಟೆಗಳಿಗೆ ಸ್ಥಳೀಯ ಮತಗಟ್ಟೆ ಅಧಿಕಾರಿಗಳನ್ನೇ ನಿಯೋಜಿಸಬೇಕು. 5ರಿಂದ 10 ವಾರ್ಡ್‌ಗಳಿಗೆ ಸಹಾಯವಾಣಿ ತೆರೆಯಬೇಕು. 2004ರಲ್ಲಿ ಮತದಾನ ಮಾಡಿದ ಕೆಲವರ ಗಣತಿ ನಮೂನೆ ಶೀಘ್ರವಾಗಿ ಜನರೇಟ್ ಆಗಬೇಕು. 18 ವರ್ಷ ತುಂಬಿದ ಹೊಸಬರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಫಾರಂ-6 ಅನ್ನು ಮತಗಟ್ಟೆ ಅಧಿಕಾರಿಗಳು ತ್ವರಿತವಾಗಿ ವಿತರಿಸಬೇಕು. ಜಿಲ್ಲೆಯ ಹನೂರು ಭಾಗದಲ್ಲಿ (2 ಕಡೆ ಹೆಸರು ಇರುವ ಪಟ್ಟಿ) ಡೂಪ್ಲಿಕೇಷನ್ ಆಗುತ್ತಿರುವುದನ್ನು ಪರಿಶೀಲಿಸಿ ಸರಿಪಡಿಸಬೇಕು. ಗಣತಿ ನಮೂನೆಗಳು ಸಂಪೂರ್ಣ ವಿತರಣೆಯಾಗಿದೆ ಎಂದು ಹೇಳಲಾಗುತ್ತಿದೆ. ಕೆಲವೆಡೆ ನಮೂನೆಗಳು ವಿತರಣೆಯಾಗಿಲ್ಲ ಎಂಬುದು ಸೇರಿದಂತೆ ಇತರೆ ಅಭಿಪ್ರಾಯ, ಸಲಹೆಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಮಂಡಿಸಿದರು.

ಸಲಹೆ, ಅಭಿಪ್ರಾಯಗಳನ್ನು ಆಲಿಸಿ ಮಾತನಾಡಿದ ಶ್ರೀರೂಪಾ, ಎಸ್‌ಐಆರ್‌ ಪರಿಷ್ಕೃತ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದ್ದು, ಕರಡು ಮತದಾರರ ಪಟ್ಟಿ ಆ.17ರಂದು ಪ್ರಕಟವಾಗಲಿದೆ. ನಂತರ ಈಗಾಗಲೇ ಗುರುತಿಸಲಾಗಿರುವ ಗೈರು, ಸ್ಥಳಾಂತರ, ನಿಧನ, 2 ಕಡೆ ಹೆಸರು ಇರುವವರು ಬಗ್ಗೆ ಪುನರ್‌ ಪರಿಶೀಲನೆ ನಡೆಸುವಂತೆ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಅಲ್ಲದೇ ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸುವ ಸಂದರ್ಭದಲ್ಲಿ ಫಾರಂ-6 ಅನ್ನು 18 ವರ್ಷ ತುಂಬಿದ ಅರ್ಹರಿಗೆ ವಿತರಿಸುವಂತೆ ಎಲ್ಲಾ ಬಿಎಲ್‌ಒಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅನುಕೂಲವಾಗುವಂತೆ ತೆರೆಯಲಾಗಿರುವ ಸಹಾಯವಾಣಿ ಮಾದರಿಯಲ್ಲಿ ಫೆಸಿಲಿಟಿ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲಾ ತಾಲೂಕುಗಳ ಬಿ.ಎಲ್.ಒ ಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಪ್ರತಿತಿಂಗಳು ಸಭೆ ನಡೆಸಿ ಸಲಹೆ, ಸಹಕಾರ ಪಡೆಯುವಂತೆ ತಿಳಿಸಲಾಗಿದೆ. ಈಗಾಗಲೇ ಗುರುತಿಸಲಾಗಿರುವ ಮತದಾರರ ವಿವರಗಳನ್ನು ಖಚಿತಪಡಿಸಿಕೊಂಡು ಮತಗಟ್ಟೆ ಅಧಿಕಾರಿಗಳಿಗೆ (ಬಿ.ಎಲ್.ಒ) ಮಾಹಿತಿ ನೀಡಲು ತಾವು ನೇಮಕ ಮಾಡಿರುವ ಬಿ.ಎಲ್.ಎ-2 ಗಳಿಗೆ ಅವಶ್ಯ ನಿರ್ದೇಶನ ನೀಡುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

ನಗರಸಭೆ ಪೌರಾಯುಕ್ತರಾದ ಪರಶುರಾಮ ಛಲವಾದಿ, ನೊಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಚ್.ಎಸ್. ತೋಂಟದಾರ್ಯಸ್ವಾಮಿ, ಎನ್. ನಾಗಯ್ಯ, ಎಸ್. ಬಾಲಸುಬ್ರಮಣ್ಯ, ಶಕುಂತಲ, ಆರ್. ಪುರುಷೋತ್ತಮ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

-------------------

22ಸಿಎಚ್‌ಎನ್‌51

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ರ ಸಂಬಂಧ ಗಣತಿ ನಮೂನೆ ವಿತರಣೆ ಹಾಗೂ ಮತದಾರರ ಗಣಕೀಕರಣ ಕೆಲಸ ಕಾರ್ಯಗಳ ಪ್ರಗತಿ ಕುರಿತು ನೊಂದಾಯಿತ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಸಭೆ ನಡೆಸಿದರು.

---------------------