ಬಹುತೇಕ ಜನರು ಒಳ್ಳೆಯ ಕಾರ್ಯಕ್ಕೆ ಸಹಾಯ ಮಾಡುತ್ತಾರೆ. ಆದರೆ, ಸಾರ್ಥಕವಾದ ನೆರವು ನೀಡುವುದು ಮುಖ್ಯ. ಹಾಗಾಗಿ ಶ್ರೀಯೋಗಿ ನಾರಾಯಣ ಸಮುದಾಯ ಭವನ ಅಭಿವೃದ್ಧಿ ಹೊಂದಿದರೆ, ಇದರಿಂದ ಬರುವ ವರಮಾನದಿಂದ ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ಹೆಚ್ಚು ಸೌಲಭ್ಯ ದೊರಕಿಸಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜಕೀಯ ಶಕ್ತಿ ಇಲ್ಲದೆ ಸಣ್ಣ ಸಣ್ಣ ಸಮುದಾಯಗಳು ಅಭಿವೃದ್ಧಿ ಸಾಧಿಸಲು ಸಾಧ್ಯವಾಗದು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಶಕ್ತಿ ರಾಜಕೀಯ ಸ್ಥಾನ-ಮಾನ ಗಳಿಸುವುದು ಅತ್ಯಗತ್ಯ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಡಾ.ಎಂ.ಎಸ್.ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಆರ್.ಸೀತಾರಾಮ್ ಪ್ರತಿಪಾದಿಸಿದರು.

ನಗರದ ಶ್ರೀಯೋಗಿ ನಾರಾಯಣ ಸಮುದಾಯ ಭವನದಲ್ಲಿ ಸರ್ವ ಬಣಜಿಗ (ಬಲಿಜ)ರ ಸಂಘದಿಂದ ಏರ್ಪಡಿಸಿದ್ದ ೨೦೨೪ -೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಸಣ್ಣ ಸಮುದಾಯದವರು ರಾಜಕಾರಣದಲ್ಲಿ ಮೇಲೆ ಬರುವುದು ಬಹಳ ಕಷ್ಟವಾಗಿದೆ. ಈ ಹಿಂದೆ ರಾಜ್ಯದಲ್ಲಿ ಬಲಿಜ ಸಮುದಾಯದ ೬-೭ ಮಂದಿ ಶಾಸಕರಿದ್ದರು. ಆದರೆ, ಈಗ ಒಂದಿಬ್ಬರು ಮಾತ್ರ ಶಾಸಕರಾಗಿದ್ದಾರೆ ಎಂದು ಪ್ರಸ್ತುತ ಸನ್ನಿವೇಶದ ಕುರಿತು ವಿಶ್ಲೇಷಿಸಿದರು.

ರಾಜಕಾರಣದಲ್ಲಿ ನಾವು ಬೆಳೆಯುವುದು ಕಷ್ಟ ಎಂಬ ಕಾರಣದಿಂದಲೋ ಅಥವಾ ಆಯಾ ಪಕ್ಷಗಳ ನಾಯಕರು ನಮ್ಮನ್ನು ಗುರುತಿಸಲಿಲ್ಲ ಎಂಬ ಕಾರಣಕ್ಕೋ ಬಲಿಜ ನಾಯಕರು ರಾಜಕಾರಣದಿಂದ ಹಿಂದುಳಿಯುತ್ತಿದ್ದಾರೆ. ಸಮುದಾಯದ ನಾಯಕರು ತಮ್ಮ ಶಕ್ತಿ-ಸಾಮರ್ಥ್ಯಗಳಿಂದ ಮುನ್ನುಗ್ಗುವಂತೆ ಪ್ರೇರೇಪಿಸಿದರು.

ನಾವು ಈ ಸಮುದಾಯದಲ್ಲಿ ಹುಟ್ಟಿದ್ದೇವೆ. ನಿಸ್ವಾರ್ಥವಾಗಿ ಸೇವೆ ಮಾಡಬೇಕೆಂಬ ನಿಟ್ಟಿನಲ್ಲಿ ಎಲ್ಲರೂ ಸಮುದಾಯದ ಏಳಿಗೆಗೆ ಶ್ರಮಿಸಬೇಕು. ಬಹುತೇಕ ಜನರು ಒಳ್ಳೆಯ ಕಾರ್ಯಕ್ಕೆ ಸಹಾಯ ಮಾಡುತ್ತಾರೆ. ಆದರೆ, ಸಾರ್ಥಕವಾದ ನೆರವು ನೀಡುವುದು ಮುಖ್ಯ. ಹಾಗಾಗಿ ಶ್ರೀಯೋಗಿ ನಾರಾಯಣ ಸಮುದಾಯ ಭವನ ಅಭಿವೃದ್ಧಿ ಹೊಂದಿದರೆ, ಇದರಿಂದ ಬರುವ ವರಮಾನದಿಂದ ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ಹೆಚ್ಚು ಸೌಲಭ್ಯ ದೊರಕಿಸಬಹುದು ಎಂದರು.

ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಮಾತನಾಡಿ, ಮಂಡ್ಯದ ಸರ್ವಬಣಜಿಗ ಸಂಘದ ವಿದ್ಯಾರ್ಥಿ ನಿಲಯದಲ್ಲಿ ಪ್ರತಿಭಾನ್ವಿತ ಸುಮಾರು ೩೨ ಹೆಣ್ಣುಮಕ್ಕಳು ಓದುತ್ತಿದ್ದಾರೆ. ಸೀತಾರಾಮ್ ಅವರು ಹಾಸ್ಟೆಲ್‌ನ ಅಭಿವೃದ್ಧಿಗೆ ಅಗತ್ಯವಿರುವ ನೆರವು ನೀಡುವುದಾಗಿ ತಿಳಿಸಿದ್ದು, ನಾವೆಲ್ಲರೂ ಸಮುದಾಯದ ಅಭಿವೃದ್ಧಿಗೆ ಕೈಜೋಡಿಸೋಣ. ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಎಂ.ಆರ್.ಸೀತಾರಾಮ್ ಅವರಿಗೆ ಮತ್ತೆ ಸಚಿವ ಸ್ಥಾನ ದೊರಕಲಿ, ಆ ಮೂಲಕ ಅವರಿಂದ ಸಮಾಜಕ್ಕೆ ಇನ್ನಷ್ಟು ಅನುಕೂಲವಾಗಲೆಂದು ಆಶಿಸಿದರು.

ಮಂಡ್ಯ ಮಿಮ್ಸ್‌ನ ವೈದ್ಯ ಡಾ.ಡಿ.ರವಿ ಹಾಗೂ ಕೆ.ಆರ್.ಪೇಟೆ ತಾಲೂಕು ಬೂಕನಕೆರೆ ಗ್ರಾಪಂ ಅಧ್ಯಕ್ಷ ಬಿ. ಆರ್.ಶ್ಯಾಮ್‌ಪ್ರಸಾದ್ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ವೇಳೆ ಅಭಿನಂದಿಸಲಾಯಿತು.

ಬಣಜಿಗರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಬಲಿಜ ಸಂಘದ ಎಂ. ನಾರಾಯಣ, ಕೆ.ನಾಗಾನಂದ, ಎಂ.ಎಸ್.ಪ್ರಶಾಂತ್, ಕೆ.ಎನ್.ಮೋಹನ್‌ಕುಮಾರ್, ಕೆ.ನಾಗಾನಂದ, ಎಂ.ಕೆ.ಜಗದೀಶ್, ಎಂ.ಎಸ್.ಪ್ರಶಾಂತ್, ಪಿ.ರವೀಂದ್ರ, ಎಚ್.ಪಿ.ಮೋಹನ್, ಎಂ.ವಿ.ಸ್ವರ್ಣಕುಮಾರ್, ಚಿಕ್ಕನರಸಿಂಹಯ್ಯ, ರಮೇಶ, ನಂದಿನಿ, ಅನ್ನಪೂರ್ಣ, ಆರ್. ಶೈಲಜಾ, ಡಿ.ನಂದಾ, ಅಂಬುಜಮ್ಮ, ಬೋರೇಗೌಡ ಮತ್ತಿತರರು ಉಪಸ್ಥಿತರಿದ್ದರು.