ಶಿವರಾಂಗೆ ಅಡ್ಡಿಯಾದ ರಾಜಕೀಯ ತಂತ್ರಗಾರಿಕೆ

| Published : Mar 25 2024, 12:51 AM IST

ಸಾರಾಂಶ

ರಾಮನಗರ: ಬಡವರು, ರೈತರು ಹಾಗೂ ದೀನ ದಲಿತರ ಏಳಿಗೆಗಾಗಿ ದುಡಿಯುವ ಮನಸ್ಸಿದ್ದ ಕೆ.ಶಿವರಾಂ ಅವರು ರಾಜಕೀಯ ತಂತ್ರಗಾರಿಕೆಯಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಾಗಲಿಲ್ಲ ಎಂದು ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ರಾಮನಗರ: ಬಡವರು, ರೈತರು ಹಾಗೂ ದೀನ ದಲಿತರ ಏಳಿಗೆಗಾಗಿ ದುಡಿಯುವ ಮನಸ್ಸಿದ್ದ ಕೆ.ಶಿವರಾಂ ಅವರು ರಾಜಕೀಯ ತಂತ್ರಗಾರಿಕೆಯಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಾಗಲಿಲ್ಲ ಎಂದು ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಛಲವಾದಿ ಮಹಾಸಭಾ, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಕೆ.ಶಿವರಾಂ ಅಭಿಮಾನಿ ಬಳಗ ಆಯೋಜಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾಭಿಮಾನಿಯಾಗಿ ಬದುಕಿದವರು ಶಿವರಾಮು, ಸ್ವಾರ್ಥ ಎಂದೂ ಅವರಲ್ಲಿರಲಿಲ್ಲ. ಶಿವರಾಂ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಹೊಸ ದಿಕ್ಕು ತೋರಿಸಿದವರು. ಹಾಗಾಗಿ ಇಲಾಖೆಯ ವಸತಿ ನಿಲಯಗಳಿಗೆ ಸರ್ಕಾರ ಅವರ ಹೆಸರು ನಾಮಕರಣ ಮಾಡಬೇಕು. ಶಿವರಾಮು ಹೆಸರಿನಲ್ಲಿ ಏನು ಮಾಡಬೇಕು ಎಂದು ಮುಂದೆ ತೀರ್ಮಾನಿಸಲಾಗುವುದು. ರಾಮನಗರದಲ್ಲಿ ಶಿವರಾಂ ಅವರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಶಾಸಕರು ಜಾಗ ನೀಡಬೇಕು ಎಂದು ಹೇಳಿದರು.

ಕೆ.ಶಿವರಾಂ ಪತ್ನಿ ವಾಣಿಶಿವರಾಂ ಮಾತನಾಡಿ, ಗುಡಿಸಲಿನಿಂದ ಬಂದಿರುವ ನಾನು ಬಡವರಿಗಾಗಿ ಕೆಲಸ ಮಾಡುತ್ತೇನೆ ಎನ್ನುತ್ತಿದ್ದರು. ಮೊದಲ ಸಲ ಅವರು ಯಾದಗಿರಿಗೆ ಸಹಾಯಕ ಆಯುಕ್ತರಾಗಿದ್ದಾಗ ಒಳ್ಳೆಯ ಕೆಲಸಗಳನ್ನು ಮಾಡಿದರು. ಬೆಂಗಳೂರು, ಕೊಪ್ಪಳ, ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಜನರು ಮನೆಗೆ ಹುಡುಕಿಕೊಂಡು ಬಂದು ಸಮಸ್ಯೆ ಹೇಳಿಕೊಳ್ಳುತ್ತಿದ್ದರು. ಬಡವರ ಪರ ಕೆಲಸ ಮಾಡಿ ಜನಪ್ರಿಯತೆ ಗಳಿಸಿದ್ದರು ಎಂದರು.

ನಿವೃತ್ತಿ ಬಳಿಕ ರಾಜಕೀಯಕ್ಕೆ ಜನಸೇವೆ ಮಾಡಲು ಬಂದಿದ್ದರು. ಹಲವು ರಾಜಕಾರಣಿಗಳಿಗೆ ಸಹಾಯ ಮಾಡಿದ್ದರು. ಅದರ ಹಿಂದೆ ಸಮುದಾಯದ ಹಿತಾಸಕ್ತಿ ಇತ್ತು. ಅಧಿಕಾರಿಯಾಗಿದ್ದಾಗ ಸಾರ್ಥಕ ಸೇವೆ ಮಾಡಿದ್ದ ಶಿವರಾಮು ಅವರಿಗೆ ನಿವೃತ್ತಿ ಬಳಿಕ ರಾಜಕೀಯವಾಗಿ ಅನ್ಯಾಯ ಮತ್ತು ಮೋಸ ಆಯಿತು ಎಂದು ನೊಂದು ನುಡಿದ ಅವರು, 2019ರಲ್ಲಿ ಚಾಮರಾಜನಗರ ಲೋಕಸಭೆ, 2023ರ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಸಿಗಲಿಲ್ಲ. ತಮ್ಮ ಸ್ನೇಹಿತರು ಹಾಗೂ ಅಭಿಮಾನಿಗಳನ್ನು ನನ್ನ ರಕ್ತ ಸಂಬಂಧಿಗಳು ಎನ್ನುತ್ತಿದ್ದರು. ನಾನೊಬ್ಬ ಮಾತ್ರ ಅಲ್ಲದೆ ಎಲ್ಲರೂ ಚೆನ್ನಾಗಿರಬೇಕು ಎಂದು ಬಯಸುತ್ತಿದ್ದರು ಎಂದು ಹೇಳಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಬಡ ಕುಟುಂಬದಲ್ಲಿ ಹುಟ್ಟಿ, ದಕ್ಷ ಅಧಿಕಾರಿಯಾಗಿ ಜನಪರ ಆಡಳಿತ ನಡೆಸಿದ ಕೆ.ಶಿವರಾಂರವರು ಇತರೆ ಅಧಿಕಾರಿಗಳಿಗೆ ಆದರ್ಶ ವಾಗಿದ್ದರು. ಅವರು ಶೋಷಿತ ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರವಾಗಿವೆ. ಅಲ್ಲದೆ ಶೋಷಿತರ ಧ್ವನಿಯಾಗಿ ಕೆಲಸ ಮಾಡುತ್ತಾ ಸಮುದಾಯದ ಪ್ರಗತಿಗಾಗಿ ಶ್ರಮಿಸಿದ್ದ ಮಹಾನ್ ಚೇತನ. ಅವರು ನಮ್ಮನ್ನು ಅಗಲಿರಬಹುದು. ಆದರೆ, ಅವರು ಕೊಟ್ಟ ಕೊಡುಗೆಗಳು ಸಮಾಜದಲ್ಲಿ ನಮ್ಮ ಜೊತೆ ಇವೆ ಎಂದು ಹೇಳಿದರು.

ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ಕೆ.ಶಿವರಾಂ ಹೆಸರಿನಲ್ಲಿ ಬಡಾವಣೆ ನಿರ್ಮಾಣ ಮಾಡಬೇಕು. ಅವರಿಗೆ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ, ನಟ ಚೇತನ್, ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಹಿರಿಯ ಅಧಿಕಾರಿ ಸಿದ್ದರಾಜು, ರೂಪೇಶ್ ರಾಜಣ್ಣ, ಪಿ.ಮೂರ್ತಿ, ಶಂಕರ್ ರಾಮಲಿಂಗಯ್ಯ,ಮೈಕೋ ನಾಗರಾಜ್, ಮಾಜಿ ಶಾಸಕ ಕೆ.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಜಯಚಂದ್ರ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಶೇಖರ್, ಅಂಬೇಡ್ಕರ್ ಭೀಮ್ ಆರ್ಮಿ ಅಧ್ಯಕ್ಷ ದಿನೇಶ್, ವಾಲ್ಮೀಖಿ ಸಂಘದ ಜಿಲ್ಲಾಧ್ಯಕ್ಷ ಅಂಜನಾಪುರ ವಾಸು, ಸಮತಾ ಸೈನಿಕ ದಳ ಜಿ. ಗೋವಿಂದಯ್ಯ, ಧಮ್ಮ ದೀವಿಗೆ ಮಲ್ಲಿಕಾರ್ಜುನ್ ಮುಖಂಡರಾದ ಶೇಷಯ್ಯ, ಕೊತ್ತೀಪುರ ಗೋವಿಂದರಾಜು, ಪುನೀತ್, ವಕೀಲ ಶಿವಣ್ಣ, ಕಿರಣ್ ಸಾಗರ್, ಬಾನಂದೂರು ಕುಮಾರ್, ಶ್ರೀಧರ್, ಕೋಟೆ ಕುಮಾರ್, ರಾಮಚಂದ್ರಯ್ಯ, ಶಿವಶಂಕರ್, ಅಶೋಕ್ ಉಪಸ್ಥಿತರಿದ್ದರು.

24ಕೆಆರ್ ಎಂಎನ್ 8.ಜೆಪಿಜಿ

ರಾಮನಗರದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಗಣ್ಯರು ಕೆ.ಶಿವರಾಂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.