ಕಲ್ಯಾಣ ಕರ್ನಾಟಕ ಪ್ರದೇಶ 79 ವರ್ಷ ಕಳೆದರೂ ಹಿಂದುಳಿದಿದ್ದು, ಸಮಗ್ರ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್‌ ಹೇಳಿದರು.

ಕುಷ್ಟಗಿ: ಕಲ್ಯಾಣ ಕರ್ನಾಟಕ ಪ್ರದೇಶ 79 ವರ್ಷ ಕಳೆದರೂ ಹಿಂದುಳಿದಿದ್ದು, ಸಮಗ್ರ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್‌ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಭಾಗದ ಜನರು ಅನುಭವಿಸಿದ ಶೋಷಣೆ, ದೌರ್ಜನ್ಯ ಹಾಗೂ ಹಿರಿಯರ ತ್ಯಾಗ, ಬಲಿದಾನದ ಇತಿಹಾಸವನ್ನು ಯುವಪೀಳಿಗೆಗೆ ತಿಳಿಸುವ ಕೆಲಸವಾಗಬೇಕು. ಈ ಇತಿಹಾಸವನ್ನು ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಮಾಡಬೇಕು ಎಂದರು.

ವಾಸ್ತವ ಪರಿಸ್ಥಿತಿ ಆಧರಿಸಿ ಸಮೀಕ್ಷೆ ನಡೆಸಿ ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಪರಿಹಾರ ನೀಡಬೇಕು. ಮುಂದಿನ ಬರಪಟ್ಟಿಯಲ್ಲಿ ತಾಲೂಕು ಸೇರ್ಪಡೆಯಾಗುವ ವಿಶ್ವಾಸವಿದೆ ಎಂದರು.

ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ಬರ ಘೋಷಣೆಯ ಜತೆಗೆ ಗೋಶಾಲೆ ಆರಂಭಿಸಿ ಜಾನುವಾರುಗಳನ್ನು ರಕ್ಷಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ಅಶೋಕ ಶಿಗ್ಗಾಂವಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರದೇಶದ ಹಿಂದುಳಿದಿರುವಿಕೆ ನಿವಾರಣೆಗೆ ಸಂವಿಧಾನದ 371(ಜೆ) ಅಡಿಯಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತಾಪಂ ಇಒ ಅಮರೇಶ್ ಯಾದವ್ ಮಾತನಾಡಿ, 371(ಜೆ) ಅಡಿಯಲ್ಲಿ ದೊರೆಯುವ ಮೀಸಲಾತಿ ಹಾಗೂ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ಸಿಪಿಐ ವಿಶ್ವನಾಥ ಹಿರೇಗೌಡರ್, ಪ್ರಭಾರಿ ಬಿಇಒ ಯಮನಪ್ಪ ಚೂರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ತುಗ್ಗಪ್ಪ ದೇಸಾಯಿ, ನಜೀರ್‌ಸಾಬ್ ಮೂಲಿಮನಿ, ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ್‌ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿವಿಧೆಡೆ ಆಚರಣೆ: ಪಟ್ಟಣದ ತಾಪಂ, ಪುರಸಭೆ, ಶಾಸಕರ ಕಾರ್ಯಾಲಯ, ದೋಟಿಹಾಳ ಗ್ರಾಪಂ, ಕೇಸೂರು ಗ್ರಾಪಂ, ಬಿಜಕಲ್‌ ಗ್ರಾಪಂ ಹಾಗೂ ಶಾಲಾ, ಕಾಲೇಜುಗಳಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿದರು.