ಸಾರಾಂಶ
ನಾರಾಯಣ ಹೆಗಡೆ
ಹಾವೇರಿ: ಜಿಲ್ಲೆಯ ನೀರಿನ ಬರ ನೀಗಿಸುವ ಪ್ರಸ್ತಾಪಿತ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಜಾರಿಯಾಗಲು ಜಿಲ್ಲೆಯ ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಯೋಜನೆ ವಿರೋಧಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಜಿಲ್ಲೆಯ ರೈತರ ಹಿತಾಸಕ್ತಿಯನ್ನು ಮನದಲ್ಲಿಟ್ಟುಕೊಂಡು ಪ್ರಯತ್ನಿಸಿದರೆ ಇಂದಲ್ಲ ನಾಳೆ ಯೋಜನೆ ಜಾರಿಯಾಗುವುದರಲ್ಲಿ ಅನುಮಾನವಿಲ್ಲ.ಬೇಡ್ತಿ- ವರದಾ ಲಿಂಕ್ ಯೋಜನೆ ಪ್ರಸ್ತಾವಗೊಂಡು 30 ವರ್ಷಗಳೇ ಕಳೆದರೂ ಇದುವರೆಗೆ ಪ್ರಗತಿ ಶೂನ್ಯ ಎಂದೇ ಹೇಳಬಹುದು. ಆದರೆ, ಈ ಹಿಂದಿನಿಂದಲೂ ಯೋಜನೆಯ ಬಗ್ಗೆ ದೊಡ್ಡ ಕನಸು ಕಂಡವರೆಂದರೆ ಮಾಜಿ ಸಂಸದ ಮಂಜುನಾಥ ಕುನ್ನೂರ. ಎರಡು ದಶಕಗಳ ಹಿಂದಿನಿಂದಲೂ ಯೋಜನೆ ಜಾರಿಯ ಬಗ್ಗೆ ಹೇಳುತ್ತಲೇ ಬಂದಿದ್ದಾರೆ.
ಆದರೆ, ಅವರ ಧ್ವನಿಗೆ ಜಿಲ್ಲೆಯ ಜನಪ್ರತಿನಿಧಿಗಳಾಗಲಿ, ರೈತರಿಂದಾಗಲಿ ಬೆಂಬಲ ಸಿಗದ್ದರಿಂದ ಯೋಜನೆ ಕೇವಲ ಬಾಯಿಮಾತಿಗೆ ಸೀಮಿತವಾಗಿತ್ತು. ಮಂಜುನಾಥ ಕುನ್ನೂರ ಒಬ್ಬರೇ ಹೋದಲ್ಲೆಲ್ಲ ತಮ್ಮ ಕನಸಿನ ಯೋಜನೆ ಬಗ್ಗೆ ಹೇಳುತ್ತ ಹೊರಟರೇ ಹೊರತು ಯಾರಿಂದಲೂ ತಕ್ಕ ಸಾಥ್ ಸಿಕ್ಕಿರಲಿಲ್ಲ. ಆದರೆ, ಈಗ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಜ್ಞಾನ, ಅನುಭವ ಹೊಂದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರೇ ಯೋಜನೆ ಜಾರಿಗೆ ಆಸಕ್ತಿ ತೋರಿರುವುದು ಯೋಜನೆ ಜಾರಿಯ ನಿರೀಕ್ಷೆ ಹುಟ್ಟುಹಾಕಿದೆ.ಜನಪ್ರತಿನಿಧಿಗಳ ಮೌನ:
ಬೇಡ್ತಿ- ವರದಾ ನದಿ ಜೋಡಣೆ ಯೋಜನೆಯ ಮುಖ್ಯ ಉದ್ದೇಶ ಬರಪೀಡಿತ ದೂರದ ರಾಯಚೂರು ಜಿಲ್ಲೆಗೆ ನೀರು ಒಯ್ಯುವುದಾಗಿದೆ. ಆದರೆ, ಯೋಜನೆಯ ಮೊದಲ ಫಲಾನುಭವಿಯಾಗುವುದು ಹಾವೇರಿ ಎಂಬುದು ವಿಶೇಷ. ಯಾಕೆಂದರೆ ಎರಡು ಲಿಂಕೇಜ್‌ಗಳ ಮೂಲಕ ಬೇಡ್ತಿ ನದಿಯಿಂದ ನೀರು ಬಂದು ತಲುಪುವುದು ಹಾವೇರಿ ಜಿಲ್ಲೆಗೆ. ಬೇಡ್ತಿಯಿಂದ ನೇರವಾಗಿ ವರದಾ ನದಿಗೆ ನೀರು ತರುವುದು ಒಂದು ಮಾರ್ಗವಾದರೆ, ಬೇಡ್ತಿಯಿಂದ ನೀರು ಲಿಫ್ಟ್ ಮಾಡಿ ಧರ್ಮಾ ಜಲಾಶಯಕ್ಕೆ ತಂದು ಅಲ್ಲಿಂದ ವರದಾ ನದಿಗೆ ನೀರು ತರುವುದು ಇನ್ನೊಂದು ಮಾರ್ಗವಾಗಿದೆ.ಯೋಜನೆಯ ಎರಡು ಲಿಂಕ್‌ಗಳಲ್ಲಿ ಬರುವ ನೀರು ಜಿಲ್ಲೆಯಿಂದಲೇ ಆರಂಭವಾಗಿ ಮುಂದಕ್ಕೆ ಹೋಗುತ್ತದೆ. ಆದ್ದರಿಂದ ಜಿಲ್ಲೆಯ ಕೃಷಿ, ಕುಡಿಯುವ ನೀರಿನ ಯೋಜನೆಗಳಿಗೆ ನೀರು ಲಭ್ಯವಾಗಲಿದೆ. ಸದ್ಯ ಹಲವು ನೀರಾವರಿ ಯೋಜನೆಗಳು ಜಿಲ್ಲೆಯಲ್ಲಿದ್ದರೂ ನೀರಿನ ಕೊರತೆಯಿಂದ ಕೆಲವು ನನೆಗುದಿಗೆ ಬಿದ್ದಿವೆ. ಅದರಲ್ಲೂ ವರದಾ ನದಿ ಜಲಮೂಲದ ಯೋಜನೆಗಳೆಲ್ಲವೂ ಬೇಸಿಗೆಯಲ್ಲಿ ಸ್ಥಗಿತಗೊಳ್ಳುತ್ತವೆ.
ಆದ್ದರಿಂದ ಜಿಲ್ಲೆಯ ಪಾಲಿಗೆ ಈ ಯೋಜನೆಯಿಂದ ಸಾಕಷ್ಟು ಪ್ರಯೋಜನವಾಗಲಿದೆ. ಅದರಲ್ಲೂ ಹಾನಗಲ್ಲ, ಹಾವೇರಿ, ಸವಣೂರು, ಶಿಗ್ಗಾಂವಿ ತಾಲೂಕಿಗೆ ಹೆಚ್ಚಿನ ಅನುಕೂಲವಿದೆ. ಆದರೂ ಈ ತಾಲೂಕುಗಳನ್ನು ಪ್ರತಿನಿಧಿಸುವವರು ಯೋಜನೆ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.ಕೇಂದ್ರ ಸರ್ಕಾರದ ಯೋಜನೆ ಎಂಬ ಕಾರಣಕ್ಕೋ ಏನೋ, ಜಿಲ್ಲೆಯ ಶಾಸಕರು ಇದುವರೆಗೆ ಯೋಜನೆಗಾಗಿ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಈಗಿನವರಷ್ಟೇ ಅಲ್ಲದೇ ಜಿಲ್ಲೆಯ ಈ ಹಿಂದಿನ ಜನಪ್ರತಿನಿಧಿಗಳೂ ಯೋಜನೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಇದರಿಂದ ಜನಸಾಮಾನ್ಯರಲ್ಲಿ, ರೈತರಲ್ಲಿ ಯೋಜನೆ ಬಗ್ಗೆ ಸಾಕಷ್ಟು ಅರಿವಿಲ್ಲ. ಯೋಜನೆ ಜಾರಿಯಿಂದ ಆಗುವ ಲಾಭಗಳನ್ನು ನಮ್ಮ ರೈತರಿಗೆ ತಿಳಿಸುವ, ಆ ಮೂಲಕ ಜನಾಭಿಪ್ರಾಯ ರೂಪಿಸುವ ಕಾರ್ಯವನ್ನು ಜನಪ್ರತಿನಿಧಿಗಳು ಮಾಡಬೇಕಿದೆ. ಯೋಜನೆಯಿಂದ ಪ್ರಯೋಜನಬೇಡ್ತಿ- ವರದಾ ಲಿಂಕ್ ಯೋಜನೆ ಅನುಷ್ಠಾನವಾದಲ್ಲಿ ಹಾವೇರಿ ಜಿಲ್ಲೆಯ ಕೃಷಿ, ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಅದರಲ್ಲೂ ಬೇಸಿಗೆಯಲ್ಲಿ ಬತ್ತಿ ಬರಡಾಗುತ್ತಿದ್ದ ವರದಾ ನದಿಗೆ ಜೀವಕಳೆ ಬರಲಿದೆ. ಇದರಿಂದ ನದಿ ತೀರದ ಪ್ರದೇಶದಲ್ಲಿ ಅಡಕೆ, ಬಾಳೆ, ಕಬ್ಬು ಇತ್ಯಾದಿ ಬೆಳೆಯಲು ಅನುಕೂಲವಾಗಲಿದೆ. ಜತೆಗೆ, ಅಂತರ್ಜಲ ಮಟ್ಟ ಹೆಚ್ಚಿ ಹೊಲಗಳಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಲಿದೆ. ನೀರಾವರಿ ಸೌಲಭ್ಯಗಳು ಅಭಿವೃದ್ಧಿಗೊಂಡ ನಂತರ ಕೃಷಿ ಆಧರಿತ ಕೈಗಾರಿಕೆಗಳು, ಪಶು ಸಾಕಾಣಿಕೆ, ಹಾಲಿನ ಉತ್ಪಾದನೆ ಹೆಚ್ಚಲಿದೆ. ಇದರಿಂದ ರೈತರ ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ.
ಭಗೀರಥ ಆಗಬೇಕಿದೆ ಬೊಮ್ಮಾಯಿಶಿಗ್ಗಾಂವಿ ಕ್ಷೇತ್ರದಲ್ಲಿ ನೀರಾವರಿ ಕ್ರಾಂತಿ ಮಾಡಿರುವ ಬಸವರಾಜ ಬೊಮ್ಮಾಯಿ ಈ ಯೋಜನೆ ಬಗ್ಗೆ ಆಸಕ್ತಿ ವಹಿಸಿರುವುದು ಜಿಲ್ಲೆಯ ಜನರಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದೆ. ಜಲಸಂಪನ್ಮೂಲ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಅನುಭವ ಹೊಂದಿರುವ ಅವರಿಗೆ ದೇಶದ, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಪರಿಪೂರ್ಣ ಜ್ಞಾನವಿದೆ. ಇಲ್ಲಿಂದ ದೆಹಲಿವರೆಗೂ ಕೆಲಸ ಮಾಡಿಸಿಕೊಂಡು ಬರುವ ಛಾತಿ ಅವರಲ್ಲಿದೆ. ಅವರಿಗೆ ಜಿಲ್ಲೆಯ ಶಾಸಕರು, ರೈತ ವರ್ಗ ಬೆನ್ನೆಲುಬಾಗಿ ನಿಂತರೆ ಯೋಜನೆ ಅನುಷ್ಠಾನ ಕಷ್ಟಸಾಧ್ಯವೇನಲ್ಲ.