ಯಾದಗಿರಿ : ರಾಜಕಾರಣಿಗಳಿಗೆ ಪ್ರವೇಶ ನಿಷಿದ್ಧ ಮತದಾನ ಬಹಿಷ್ಕಾರ!

| Published : Apr 29 2024, 01:39 AM IST / Updated: Apr 29 2024, 12:06 PM IST

ಯಾದಗಿರಿ : ರಾಜಕಾರಣಿಗಳಿಗೆ ಪ್ರವೇಶ ನಿಷಿದ್ಧ ಮತದಾನ ಬಹಿಷ್ಕಾರ!
Share this Article
  • FB
  • TW
  • Linkdin
  • Email

ಸಾರಾಂಶ

ಮೂಲಸೌಕರ್ಯಗಳ ಕೊರತೆಗೆ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವಡಗೇರಾ ತಾಲೂಕಿನ ಕೊಂಗಂಡಿ ಸೂಗೂರು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಗ್ರಾಮದ ಹೊರವಲಯದಲ್ಲಿ ಬ್ಯಾನರ್ ಹಾಕಿರುವ ಗ್ರಾಮಸ್ಥರು

  ಯಾದಗಿರಿ :  ಮೂಲಸೌಕರ್ಯ ಕೊರತೆ ಹಾಗೂ ರೈತರ ಸಮಸ್ಯೆಗಳಿಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳು ಸ್ಪಂದಿಸಿಲ್ಲ ಎಂದು ಆರೋಪಿಸಿ, ಜಿಲ್ಲೆಯ ವಡಗೇರಾ ತಾಲೂಕಿನ ಕೊಂಗಂಡಿ-ಸೂಗೂರು ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.

ಯಾದಗಿರಿ ಮತಕ್ಷೇತ್ರ ವ್ಯಾಪ್ತಿಗೆ ಬರುವ, ಸುಮಾರು 700 ಜನಸಂಖ್ಯೆ ಹೊಂದಿರುವ ಕೊಂಗಂಡಿ-ಸೂಗೂರು ಗ್ರಾಮಗಳಲ್ಲಿ 400 ಮತದಾರರಿದ್ದಾರೆ. ಈ ಗ್ರಾಮಗಳಲ್ಲಿ ರಸ್ತೆ, ಸಾರಿಗೆ, ಜನತಾ ಕಾಲೋನಿಗಳಲ್ಲಿ ವಿದ್ಯುತ್‌ ಸಂಪರ್ಕ ಮುಂತಾದ ಕೊರತೆಗಳ ಬಗ್ಗೆ ಅನೇಕ ಬಾರಿ ಗಮನಕ್ಕೆ ತಂದಿದ್ದರೂ, ಬಗೆಹರಿಸಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಈ ಬಾರಿ ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.

"ರಾಜಕೀಯ ಜನಪ್ರತಿನಿಧಿಗಳಿಗೆ ತಮ್ಮ ಗ್ರಾಮದೊಳಗೆ ಪ್ರವೇಶವಿಲ್ಲ, ಕೊಂಗಂಡಿ ಹಾಗೂ ಸೂಗೂರು ಗ್ರಾಮದ ಜನತೆಯಿಂದ ಚುನಾವಣೆ ಮತ ಬಹಿಷ್ಕಾರ " ಎಂಬುದಾಗಿ ಬ್ಯಾನರ್‌ ಇಲ್ಲೀಗ ಕಾಣಿಸುತ್ತಿದೆ.

ಈ ಹಿಂದೆಯೂ ಕೂಡ, ವಿಧಾನಸಭೆ ಚುನಾವಣೆ ವೇಳೆ ಅನೇಕ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದೆವು. ಆದರೆ, ಆಗ ಮೂಗಿಗೆ ತುಪ್ಪ ಸವರಲಾಗಿತ್ತು . ಬಸ್‌ ಬಿಡುವಂತೆ ಕೇಳಿದರೂ ಯಾರೂ ಸ್ಪಂದಿಸಲಿಲ್ಲ, ವಿದ್ಯುತ್‌ ಪೂರೈಕೆ ಅಸ್ತವ್ಯಸ್ತವಾಗಿದೆ. ಸ್ಮಶಾನಕ್ಕೆ ಜಮೀನು ನೀಡುವಂತೆ ಕೇಳುತ್ತಿದ್ದರೂ ಯಾರೂ ಗಮನಿಸುತ್ತಿಲ್ಲ, ಇತ್ತೀಚೆಗೆ ರೈತರ ಬೆಳೆಗಳಿಗೆ ಕಾಲುವೆ ಮುಖೇನ ನೀರು ಕೇಳಿದಾಗ ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ನೂರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದಿದ್ದ ಭತ್ತದ ಬೆಳೆ ಹಾಳಾಯಿತು ಎಂದು "ಕನ್ನಡಪ್ರಭ "ಕ್ಕೆ ತಿಳಿಸಿದ ಕೊಂಗಂಡಿ ಗ್ರಾಮದ ಸೂಗಪ್ಪಗೌಡ ಮಾಲಿಪಾಟೀಲ್‌, ಈ ಎಲ್ಲ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದೇವೆ ಎಂದರು.

ಮತದಾನದ ಹಕ್ಕು ಅಮೂಲ್ಯ. ಆದರೆ, ಆಡಳಿತ ಹಾಗೂ ರಾಜಕೀಯ ನಿರ್ಲಕ್ಷ್ಯಗಳಿಂದಾಗಿ ಗ್ರಾಮಗಳ ಜ್ವಲಂತ ಸಮಸ್ಯೆಗಳು ಬಗೆಹರಿಯದಿದ್ದಾಗ ಮತದಾನಕ್ಕೆ ಕಾರಣವಾಗುತ್ತದೆ. ಜಿಲ್ಲಾಡಳಿತ ಅಥವಾ ಸಂಬಂಧಿತರು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಮತದಾನ ಹಾಗೂ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.