ಸಾರಾಂಶ
ಸಚಿನ ಪಂಚಾಳ ಸಾವಿನ ಸುತ್ತ ಈಗ ರಾಜಕೀಯ ಕೆಸರೆರಚಾಟ ನಡೆಯುತ್ತಿದ್ದು, ಇದು ಸತ್ತ ವ್ಯಕ್ತಿಗೆ ಮಾಡುವ ಅವಮಾನ ಎಂದು ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ ಪತ್ತಾರ ಅಸಮಧಾನ ವ್ಯಕ್ತಪಡಿಸಿದರು.
ಬೀದರ್ : ಸಚಿನ ಪಂಚಾಳ ಸಾವಿನ ಸುತ್ತ ಈಗ ರಾಜಕೀಯ ಕೆಸರೆರಚಾಟ ನಡೆಯುತ್ತಿದ್ದು, ಇದು ಸತ್ತ ವ್ಯಕ್ತಿಗೆ ಮಾಡುವ ಅವಮಾನ ಎಂದು ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ ಪತ್ತಾರ ಅಸಮಧಾನ ವ್ಯಕ್ತಪಡಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ಸಮುದಾಯದಿಂದ ಬಂದ ಸಚಿನ ಪಂಚಾಳ ತನ್ನ ಶ್ರಮದಿಂದ ಮೇಲೆ ಬಂದ ವ್ಯಕ್ತಿಯ ಬದುಕು ಸಾವಿನಲ್ಲಿ ಕೊನೆಗೊಳ್ಳುವಂತಾಗಿದೆ. ಇಂತಹ ಸಂದರ್ಭದಲ್ಲಿ ಕುಟುಂಬದ ಜೊತೆಗೆ ನಿಲ್ಲಬೇಕಾದ ಪಕ್ಷಗಳು ರಾಜಕೀಯ ಮಾಡುತ್ತಿವೆ. ಬಿಜೆಪಿಯವರು ಬಂದು ಪರಿಹಾರ ತೆಗೆದುಕೊಳ್ಳಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಸಹ ಸರ್ಕಾರದಿಂದ ಪರಿಹಾರ ಒದಗಿಸುತ್ತೇನೆ ಎಂದರು.
ಆದರೆ, ಇವುಗಳಿಗೆ ಆಸ್ಪದ ನೀಡದೆ ನಿಷ್ಪಕ್ಷಪಾತ ತನಿಖೆ ನಡೆಸಿ ಸಚಿನ ಕುಟುಂಬಕ್ಕೆ ನ್ಯಾಯ ಒದಗಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದೇವೆ ಎಂದರು.
ಕರ್ತವ್ಯ ಲೋಪವೆಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ.
ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್ ನೋಟ್ ಸಚಿನ ಪಂಚಾಳ ಅವರೇ ಬರೆದಿದ್ದು ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯ ದೃಢಪಡಿಸಿದೆ. ಹೀಗಾಗಿ ಪತ್ರದಲ್ಲಿ ಹೆಸರಿಸಿರುವ ಆರೋಪಿಗಳ ವಿರುದ್ಧ ಹಾಗೂ ಈ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕುಟುಂಬಕ್ಕೆ ಪರಿಹಾರ ಕೊಡಿ:
ಹಣಕ್ಕಾಗಿ ಒತ್ತಡ ಹಾಕಿದ ರಾಜು ಕಪನೂರ ಯಾರು, ಅವರು ಯಾವ ಕಾರಣಕ್ಕಾಗಿ ಸಚಿನಗೆ ಹಣ ನೀಡಿದರು. ಹಣಕ್ಕಾಗಿ ಒತ್ತಡ ಹಾಕಿ ಆತ್ಮಹತ್ಯೆಯಂತಹ ಕ್ರೂರ ನಿರ್ಧಾರ ಕೈಗೊಳ್ಳುವುದಕ್ಕೆ ಪ್ರೇರಣೆಯಾಗಿದ್ದು ಯಾಕೆ ? ಈ ನಿಟ್ಟಿನಲ್ಲಿ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾವಂತೆ ಮಾಡಬೇಕು, ಸಚಿನ ಕುಟುಂಬ ಈಗ ಅನಾಥವಾಗಿದೆ. ವಿವಾಹವಾಗಬೇಕಾದ ಇಬ್ಬರು ಯುವತಿಯರಿದ್ದಾರೆ. ಹಾಗಾಗಿ, ಸರ್ಕಾರ ಕೂಡಲೇ ಸಚಿನ ಕುಟುಂಬಕ್ಕೆ ಪರಿಹಾರ ಕೊಡಬೇಕು ಮತ್ತು ಸಚಿನ ಕಿರಿಯ ಸಹೋದರಿಗೆ ಉದ್ಯೋಗ ನೀಡಬೇಕು ಎಂದರು.
ಸಚಿನಗೆ ಬೆದರಿಕೆ ಬಂದಾಗ ಕುಟುಂಬದ ಸದಸ್ಯರು ದೂರು ನೀಡಲು ಮುಂದಾಗಿದ್ದರು. ಆಗ, ಪೊಲೀಸ್ ಅಧಿಕಾರಿಗಳು ದೂರು ಸ್ವೀಕರಿಸಿ, ಕ್ರಮ ಕೈಗೊಂಡಿದ್ದರೆ, ಸಚಿನ ಸಾವನ್ನು ತಪ್ಪಿಸಬಹುದಾಗಿತ್ತು. ಇಲ್ಲಿ ಪೋಲೀಸರು ಮಾಡಿದ ಸೇವಾ ಲೋಪವೇ ಸಚಿನ ಸಾವಿಗೆ ಕಾರಣ ಎಂದು ಆರೋಪಿಸಿದ ಅವರು, ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸಿ, ಯಾವುದೇ ಕ್ರಮ ಕೈಗೊಳದೇ ಇದ್ದ ಪಕ್ಷದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಕ್ಕೂಟದ ದಾವಣಗೆರೆ ಜಿಲ್ಲಾಧ್ಯಕ್ಷ ಬಿ. ನಾಗೇಂದ್ರ ಆಚಾರ್ಯ, ಬೀದರ್ ಜಿಲ್ಲಾಧ್ಯಕ್ಷ ಶ್ರೀನಿವಾಸ ಪಾಂಚಾಳ, ಬಿಪಿ ಜಗನ್ನಾಥ, ಸೋಮನಾಥ ಪಾಂಚಾಳ, ಕೊಟ್ರೇಶ ಪಂಚಾಳ, ಸಹೋದರ ವಿಜಯಕುಮಾರ ಪಂಚಾಳ ಸುದ್ದಿಗೋಷ್ಠಿಯಲ್ಲಿದ್ದರು.