ಪಕ್ಷಾಂತರಿಗೆ ಕಡಿವಾಣ ಬೀಳದೆ ರಾಜಕಾರಣ ಶುದ್ಧಿಯಾಗದು: ತರಳಬಾಳುಶ್ರೀ

| Published : Mar 31 2024, 02:05 AM IST

ಪಕ್ಷಾಂತರಿಗೆ ಕಡಿವಾಣ ಬೀಳದೆ ರಾಜಕಾರಣ ಶುದ್ಧಿಯಾಗದು: ತರಳಬಾಳುಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸಿರಿಗೆರೆಯ ಸದ್ಧರ್ಮ ನ್ಯಾಯಪೀಠದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರನ್ನು ಭೇಟಿ ಮಾಡಿ ಗೋವಿಂದ ಕಾರಜೋಳ ಆಶೀರ್ವಾದ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಪಕ್ಷಾಂತರಿಗಳಿಗೆ ಕಡಿವಾಣ ಬೀಳದೆ ಇದ್ದರೆ ರಾಜಕೀಯ ರಂಗದಲ್ಲಿ ಪರಿಶುದ್ಧತೆಯನ್ನು ನಿರೀಕ್ಷಿಸುವುದು ಅಸಾಧ್ಯದ ಮಾತು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಸಿರಿಗೆರೆಯ ಸದ್ಧರ್ಮ ನ್ಯಾಯಪೀಠದ ಸಭಾಂಗಣದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಶ್ರೀಗಳು ಪಕ್ಷಾಂತರಿಗಳಿಗೆ ಮಣೆ ಹಾಕುತ್ತಾ ಹೋದಂತೆ ಕಾರ್ಯಕರ್ತರ ಅಸಮಾ ಧಾನ ಹೆಚ್ಚುತ್ತದೆ ಎಂದರು.

ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿಲ್ಲ. ಪಕ್ಷವೊಂದರಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡಿದ ವ್ಯಕ್ತಿ ಐದು ವರ್ಷಗಳ ಕಾಲ ಹೊಸ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿರಬೇಕು. ಆ ನಂತರವೇ ಆತನಿಗೆ ರಾಜಕೀಯ ಸ್ಥಾನಮಾನಗಳು ದೊರೆಯಬೇಕು. ಪಕ್ಷಾಂತರ ನಿಷೇಧ ಕಾಯಿದೆಯಲ್ಲಿ ಈ ಅಂಶವನ್ನು ಸೇರಿಸಿದರೆ ರೆಸಾರ್ಟ್‌ ರಾಜಕಾರಣವೋ ಕೊನೆಗೊಳ್ಳುತ್ತದೆ ಜೊತೆಗೆ ರಾಜಕೀಯ ಶುದ್ಧೀಕರಣವೂ ಆಗುತ್ತದೆ ಎಂದರು.

ಕೆಲವು ದಶಕಗಳ ಹಿಂದೆ ರಾಜಕೀಯದಲ್ಲಿ ಹೊಸ ಪ್ರಯೋಗವೊಂದನ್ನು ಆರಂಭಿಸಿದ್ದುದನ್ನು ನೆಪಿಸಿಕೊಂಡ ಶ್ರೀಗಳು ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾತೀತ ಮತ್ತು ಜಾತ್ಯತೀತ ರಾಜಕೀಯ ಜಾಗೃತಿ ಮಾಡುವ ಉದ್ದೇಶದಿಂದ ಇಂತಿಂಥ ಅಭ್ಯರ್ಥಿಗಳಿಗೆ ಮತ ನೀಡಲು ಮನವಿ ಮಾಡಿದ್ದೆವು. ಆ ಪ್ರಯೋಗ ಯಶಸ್ವಿ ಯಾಗಿತ್ತು. ಆದರೆ ಚುನಾವಣೆಯಲ್ಲಿ ಗೆದ್ದು ಬಂದ ಅಭ್ಯರ್ಥಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸಲಿಲ್ಲ ಎಂದರು.

ಗೋವಿಂದ ಕಾರಜೋಳ ತರಳಬಾಳು ಶ್ರೀಗಳನ್ನು ಗೌರವಿಸಿ ಆಶೀರ್ವಾದ ಪಡೆದುಕೊಂಡರು. ಬೃಹನ್ಮಠದ ವತಿಯಿಂದ ಕಾರಜೋಳರನ್ನು ಅಭಿನಂದಿಸಲಾಯಿತು.

ಕಾರಜೋಳರ ಭೇಟಿ ಸಂದರ್ಭದಲ್ಲಿ ಸ್ಥಳೀಯ ಕಾರ್ಯಕರ್ತರ ಪಡೆಯ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಮಾಜಿ ಸಚಿವ ಮುರುಗೇಶ್‌ ನಿರಾಣಿ, ವಿಧಾನ ಪರಿಷತ್‌ ಸದಸ್ಯ ನವೀನ್‌, ಚುನಾವಣಾ ಸಂಚಾಲಕ ಹೊಸದುರ್ಗದ ಲಿಂಗಮೂರ್ತಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಮುರಳಿ, ಭೀಮಸಮುದ್ರದ ಉದ್ಯಮಿ ಜಿ.ಎಸ್.‌ಅನಿತ್‌, ಮಾಯಕೊಂಡ ಮಾಜಿ ಶಾಸಕ ಪ್ರೊ.ಲಿಂಗಣ್ಣ, ರಾಜ್ಯ ಕಾರ್ಯಕಾರಿಣಿ ಸದಸ್ಯ ಹನುಮಂತ ಕೊಟಭಾಗಿ, ಮೊಳಕಾಲ್ಮೂರು ಬಿಜೆಪಿ ಮುಖಂಡ ಮೊರಾರ್ಜಿ, ಮಾಧುರಿ ಗಿರೀಶ್‌ ಮುಂತಾದವರು ಹಾಜರಿದ್ದರು.

ರಘುಚಂದನ್‌ ನಿರ್ಧಾರ ಶೋಭೆ ತರದು: ಬಿಜೆಪಿ ಸಮುದ್ರದಂತಿರುವ ಪಕ್ಷ. ಕಾರ್ಯಕರ್ತರ ಬಹು ದೊಡ್ಡ ಪಡೆಯೇ ಪಕ್ಷಕ್ಕಿದೆ. ಬೂತ್‌ ಹಂತದಲ್ಲಿಯೂ ನಿಷ್ಠೆಯಿಂದ ಕೆಲಸ ಮಾಡುವ ತಂತ್ರಗಾರಿಕೆ ಗೊತ್ತಿದೆ. ಹೊಳಲ್ಕೆರೆ ಶಾಸಕ ಚಂದ್ರಪ್ಪನವರ ಪುತ್ರ ರಘು ಚಂದನ್‌ ಅವರು ಪಕ್ಷೇತರರಾಗಿ ಸ್ಪರ್ಧಿಸುವುದು ಪಕ್ಷಕ್ಕೆ ಶೋಭೆ ತರುವುದಿಲ್ಲ. ಇವರ ಪರವಾಗಿ ಕೆಲಸ ಮಾಡುವ ಕಾರ್ಯಕರ್ತರು ಕ್ಷೇತ್ರದಲ್ಲಿ ಇಲ್ಲ ಎಂದು ಚುನಾವಣೆ ಸಮಿತಿ ಸಂಚಾಲಕ ಹೊಸದುರ್ಗದ ಲಿಂಗಮೂರ್ತಿ ಹೇಳಿದರು.ದುರ್ಗದ ಸ್ಪರ್ಧೆ ನನ್ನ ಅಪೇಕ್ಷೆಯಲ್ಲ: ಮುನಿಸಿಕೊಂಡಿರುವ ಶಾಸಕ ಚಂದ್ರಪ್ಪನವರ ಜೊತೆ ಮಾತನಾಡುವಿರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಗೋವಿಂದ ಕಾರಜೋಳ ಮೌನ ತಾಳಿದರು.

ಚಿತ್ರದುರ್ಗ ಕ್ಷೇತ್ರಕ್ಕೆ ನನ್ನ ಅಪೇಕ್ಷೆಯಂತೆ ಬರುತ್ತಿಲ್ಲ. ನಮ್ಮ ಪಕ್ಷದ ತೀರ್ಮಾನ ಆಗಿದೆ. ಪಕ್ಷದ ಆದೇಶವನ್ನು ಪುರಸ್ಕರಿಸುತ್ತಿದ್ದೇನೆ ಎಂದು ಹೇಳಿದರು.

ನನಗೆ ರಾಜಕಾರಣವೇ ಬದುಕು, ಬೇರೆ ಕೆಲಸವಿಲ್ಲ. ಬಾಗಲಕೋಟೆಯ ಮನೆಯಲ್ಲಿ ನನಗೆ ಕೆಲಸವಿಲ್ಲ ಎಂದ ಕಾರಜೋಳ ಚಿತ್ರದುರ್ಗದಲ್ಲಿ ಚುನಾವಣೆಯವರೆವಿಗೆ ನೆಲೆಸುವ ಸೂಚನೆ ನೀಡಿದರು.