ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದು: ಡಾ.ಮಂತರ್‌ ಗೌಡ

| Published : Jul 13 2024, 01:38 AM IST

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದು: ಡಾ.ಮಂತರ್‌ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ರು. 1.65 ಕೋಟಿ ವೆಚ್ಚದಲ್ಲಿ ಕಕ್ಕೆಹೊಳೆಗೆ ನಿರ್ಮಾಣವಾಗಿರುವ ಸೇತುವೆಯನ್ನು ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಶುಕ್ರವಾರ ಉದ್ಘಾಟಿಸಿದರು. ಅವರು ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು. ಉತ್ತಮ ಕೆಲಸಗಳನ್ನು ಮಾಡಿದಾಗ ಜನಪ್ರತಿನಿಧಿಗಳನ್ನು ಗೌರವಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು. ಉತ್ತಮ ಕೆಲಸಗಳನ್ನು ಮಾಡಿದಾಗ ಜನಪ್ರತಿನಿಧಿಗಳನ್ನು ಗೌರವಿಸಬೇಕು ಎಂದು ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಅಭಿಪ್ರಾಯಪಟ್ಟಿದ್ದಾರೆ.

ರು. 1.65 ಕೋಟಿ ವೆಚ್ಚದಲ್ಲಿ ಕಕ್ಕೆಹೊಳೆಗೆ ನಿರ್ಮಾಣವಾಗಿರುವ ಸೇತುವೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅತೀ ಹೆಚ್ಚು ವಿದ್ಯಾರ್ಥಿಗಳು ಕಾಲ್ನಡಿಯಲ್ಲಿ ಶಿಥಿಲಗೊಂಡಿದ್ದ ಕಕ್ಕೆಹೊಳೆ ಸೇತುವೆಯಲ್ಲಿ ತೆರಳುತ್ತಿದ್ದರು. ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ಕೋರಿದ ಸಂದರ್ಭ ಲೋಕೋಪಯೋಗಿ ಸಚಿವ ಸತೀಶ್ ಜಾರಕೀಹೊಳಿ ಅನುದಾನ ಕಲ್ಪಿಸಿದರು. ಅನುದಾನ ನೀಡಿದ 8 ತಿಂಗಳಲ್ಲೇ ಸೇತುವೆ ಕಾಮಗಾರಿ ಮುಗಿದಿದೆ. ವಿದ್ಯಾರ್ಥಿಗಳಿಗೆ ನಡೆದಾಡಲು ಫುಟ್‍ಪಾತ್ ನಿರ್ಮಿಸಲಾಗಿದೆ. ಇನ್ನು ಮುಂದೆ ನೆಮ್ಮದಿಯಿಂದ ಸಂಚರಿಸಬಹುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ನಂತರ ಐದು ಗ್ಯಾರೆಂಟಿಗಳೊಂದಿಗೆ, ಅಭಿವೃದ್ಧಿ ಕಾಮಗಾರಿಗಳಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ನನ್ನ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಐಗೂರು ಸೇತುವೆ ನಿರ್ಮಾಣಕ್ಕೂ ಅನುದಾನ ಸಿಕ್ಕಿದೆ. ಕಲ್ಲಂದೂರು, ಕೂತಿ ರಸ್ತೆ 20 ಕೋಟಿ ರು.ವೆಚ್ಚದಲ್ಲಿ ಡಾಂಬರೀಕರಣಗೊಳ್ಳಲಿದೆ ಎಂದು ವಿವರಿಸಿದರು.

ಕಕ್ಕೆಹೊಳೆ ಸೇತುವೆ ಸನಿಹದಲ್ಲೇ ಬಸವೇಶ್ವರರ ಪ್ರತಿಮೆಯಿದ್ದು, ನೂತನ ಸೇತುವೆಗೂ ಬಸವೇಶ್ವರರ ಹೆಸರು ಇಡಬೇಕು ಎಂದು ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮನವಿ ಮಾಡಿದರು.

ಗುತ್ತಿಗೆದಾರ ಆರ್.ಸಿ.ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷ ಬಿ.ಬಿ.ಸತೀಶ್, ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಪ್ರಮುಖರಾದ ಎಚ್.ಆರ್.ಸುರೇಶ್, ಈಶ್ವರಚಂದ್ರ ವಿದ್ಯಾಸಾಗರ್, ಕಾಂತರಾಜ್, ಕೆ.ಎ.ಆದಂ ಲೋಕೋಪಯೋಗಿ ಇಲಾಖೆ ಇಇ ಸಿದ್ದೇಗೌಡ ಇದ್ದರು.