ಡೇರಿಗಳಲ್ಲಿ ರಾಜಕೀಯ ಮಾಡಬಾರದು: ಸಿ.ಶಿವಕುಮಾರ್

| Published : Jul 31 2025, 12:45 AM IST

ಸಾರಾಂಶ

ರಾಸುಗಳಿಗೆ ವಿಮೆ ಮಾಡಿಸುವ ವಿಚಾರದಲ್ಲಿ ರೈತರು ನಿರ್ಲಕ್ಷ್ಯ ಮಾಡಬಾರದು, ರಾಸುವಿಮೆ ಮಾಡಿಸದೆ ಹಸುಗಳು ಅಕಾಲಿಕ ಮರಣ ಹೊಂದಿದರೆ ರೈತರಿಗೆ ನಯಾಪೈಸೆ ವಿಮೆ ಪರಿಹಾರ ದೊರೆಯುವುದಿಲ್ಲ. ಹಾಗಾಗಿ ಕಡ್ಡಾಯವಾಗಿ ಪ್ರತಿಯೊಬ್ಬ ಉತ್ಪಾದಕರು ರಾಸು ವಿಮೆಮಾಡಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹಾಲು ಉತ್ಪಾದಕರ ಸಹಕಾರ ಸಂಘಗಳು ದೇವಸ್ಥಾನ ಇದ್ದಂತೆ. ಇಲ್ಲಿ ರಾಜಕೀಯ ಮಾಡದೇ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ರಾಸು ವಿಮೆ ಮಾಡಿಸಬೇಕು ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.

ತಾಲೂಕಿನ ಕಟ್ಟೇರಿ ಡೇರಿ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಮನ್ಮುಲ್ ಒಕ್ಕೂಟವು ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಮೂರು ಸ್ಥಾನ ಪಡೆದಿದೆ. ಯುವ ಜನಾಂಗ ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ರಾಸುಗಳಿಗೆ ವಿಮೆ ಮಾಡಿಸುವ ವಿಚಾರದಲ್ಲಿ ರೈತರು ನಿರ್ಲಕ್ಷ್ಯ ಮಾಡಬಾರದು, ರಾಸುವಿಮೆ ಮಾಡಿಸದೆ ಹಸುಗಳು ಅಕಾಲಿಕ ಮರಣ ಹೊಂದಿದರೆ ರೈತರಿಗೆ ನಯಾಪೈಸೆ ವಿಮೆ ಪರಿಹಾರ ದೊರೆಯುವುದಿಲ್ಲ. ಹಾಗಾಗಿ ಕಡ್ಡಾಯವಾಗಿ ಪ್ರತಿಯೊಬ್ಬ ಉತ್ಪಾದಕರು ರಾಸು ವಿಮೆಮಾಡಿಸಬೇಕು ಎಂದರು.

ಮಂಡ್ಯ ಹಾಲು ದೆಹಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಅದರ ಜತೆಗೆ ಅಕ್ಕಪಕ್ಕದ ರಾಜ್ಯಗಳಲ್ಲೂ ಮಾರಾಟ ಮಾಡಲು ನಮ್ಮ ಆಡಳಿತ ಮಂಡಳಿ, ಅಧಿಕಾರಿ ವರ್ಗದೊಂದಿದೆ ಚರ್ಚಿಸಿದ್ದೇವೆ. ಅದಕ್ಕಾಗಿಯೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳುತ್ತಿದ್ದೇವೆ ಎಂದರು.

ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಹಾಲಿನ ಗುಣಮಟ್ಟ ಪರೀಕ್ಷೆ ಮಾಡಲು ಪ್ರತಿಯೊಂದು ಡೇರಿಯಲ್ಲಿ ಕಾಮನ್ ಸಾಪ್ಟವೇರ್ ಅಳವಡಿಕೆ ಒಕ್ಕೂಟ ಮುಂದಾಗಿದೆ. ಜಿಲ್ಲೆಯಲ್ಲಿ 1307 ಡೇರಿಗಳಿದ್ದು, 919 ಡೇರಿಗಳಿಗೆ ಹಾಗೂ ತಾಲೂಕಿನ 148 ಡೇರಿಗಳ ಪೈಕಿ 107 ಡೇರಿಗಳಲ್ಲಿ ಕಾಮನ್ ಸಾಫ್ಟವೇರ್ ಅಳವಡಿಕೆ ಮಾಡಲಾಗಿದೆ ಎಂದರು.

ಡೇರಿ ಅಧ್ಯಕ್ಷ ಕೆ.ಎಸ್.ರಜಿನಿ ಮಾತನಾಡಿ, ಡೇರಿಗಳು ಅಭಿವೃದ್ಧಿ ಹೊಂದಲು ಹಾಲು ಉತ್ಪಾದಕ ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಕಾಮನ್ ಸಾಪ್ಟವೇರ್ ಅಳವಡಿಕೆ ಹಾಗೂ ಡೇರಿ ಅಭಿವೃದ್ಧಿ ಕುರಿತು ಸದಸ್ಯರು ಚರ್ಚೆ ನಡೆಸಿದರು. ಇದೇ ವೇಳೆ ಅಧಿಕ ಹಾಲು ಉತ್ಪಾದನೆ ಮಾಡಿದ ರೈತರನ್ನು ಅಭಿನಂದಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಶಶಿಕಲಾ, ನಿರ್ದೇಶಕರಾದ ಕೆ.ಎಸ್.ಸತೀಶ್, ಕೆ.ಜೆ.ರಾಮಚಂದ್ರ, ಕೆ.ಎನ್.ಅನಂತ, ಕೆ.ವಿ.ರಘು, ಕೆ.ಜೆ.ಕುಮಾರ್, ಕೆ.ಬಿ.ಅನಿಲ್ ಕುಮಾರ್, ಮಂಜುನಾಥ್, ಕೆ.ಪಿ.ನಾಗರಾಜು, ಯಶೋದಮ್ಮ, ಕೆ.ಅನಂತರಾಜು, ಕಾರ್ಯದರ್ಶಿ ಎ.ದೇವರಾಜು, ಸಿಬ್ಬಂದಿ ಹಾಜರಿದ್ದರು.