ಗ್ರಾಮ ಪಂಚಾಯಿತಿಗಳಲ್ಲಿ ರಾಜಕೀಯ ಇರಬಾರದು. ಪಕ್ಷಾತೀತವಾಗಿ ಅಭಿವೃದ್ಧಿ ಆಗಬೇಕು. ಶಾಸಕರಿಗೆ ಇರುವಷ್ಟು ಅಧಿಕಾರ ಗ್ರಾಮ ಪಂಚಾಯಿತಿ ಸದಸ್ಯರಿಗೂ ಇದೆ. ಈ ನಿಟ್ಟಿನಲ್ಲಿ ಗ್ರಾಮಸಭೆಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕು ಎಂದು ಶಾಸಕ ಡಾ. ಟಿ.ಬಿ.ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಗ್ರಾಮ ಪಂಚಾಯಿತಿಗಳಲ್ಲಿ ರಾಜಕೀಯ ಇರಬಾರದು. ಪಕ್ಷಾತೀತವಾಗಿ ಅಭಿವೃದ್ಧಿ ಆಗಬೇಕು. ಶಾಸಕರಿಗೆ ಇರುವಷ್ಟು ಅಧಿಕಾರ ಗ್ರಾಮ ಪಂಚಾಯಿತಿ ಸದಸ್ಯರಿಗೂ ಇದೆ. ಈ ನಿಟ್ಟಿನಲ್ಲಿ ಗ್ರಾಮಸಭೆಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕು ಎಂದು ಶಾಸಕ ಡಾ. ಟಿ.ಬಿ.ಜಯಚಂದ್ರ ಹೇಳಿದರು.

ಅವರು ಬುಧವಾರ ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಹುಯಿಲ್ ದೊರೆ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಹಾಗೂ ಎಸ್. ರಂಗನಹಳ್ಳಿ, ಡಿ.ಎ. ತಾಂಡ ಗ್ರಾಮಗಳ ಅಂಗನವಾಡಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಶಿರಾ ತಾಲೂಕಿನಲ್ಲಿ ಹೆಚ್ಚು ಗ್ರಾಮ ಪಂಚಾಯಿತಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇದುವರೆಗೂ ಸುಮಾರು ೧೭ ಗ್ರಾಮ ಪಂಚಾಯಿತಿ ನೂತನ ಕಟ್ಟಡಗಳು ಪೂರ್ಣಗೊಂಡಿವೆ. ಇದು ರಾಜ್ಯದಲ್ಲಿಯೇ ಮಾದರಿ ಕೆಲಸವಾಗಿದ್ದು, ನೂತನ ಪಂಚಾಯಿತಿ ಕಟ್ಟಡಗಳಿಗೆ ಸರಕಾರದಿಂದ ೨೫ ಲಕ್ಷ ಅನುದಾನ ಕೊಡಿಸಲು ಪ್ರಯತಿಸುತ್ತೇನೆ. ಅವರು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ಗ್ರಾಮ ಲೆಕ್ಕಿಗರು, ಪಂಚಾಯಿತಿ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಇರುವಂತಾಗಬೇಕು. ಗ್ರಾಮ ಪಂಚಾಯಿತಿ ಕೆಲಸ ಹಾಗೂ ಕಂದಾಯ ಇಲಾಖೆಯ ಕೆಲಸಗಳು ಒಟ್ಟಿಗೆ ಸಿಗುವಂತಾಗಲಿ ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸಿಬಿ ಸುರೇಶ್‌ ಬಾಬು ಮಾತನಾಡಿ, ಗ್ರಾಮ ಪಂಚಾಯಿತಿಗಳು ದೇಗುಲವಿದ್ದ ಹಾಗೆ. ಇದು ಜನ ಸಾಮಾನ್ಯರು ಬಂದು ಹೋಗುವ ಸ್ಥಳ. ಇಂತಹ ಸ್ಥಳವನ್ನು ದೇಗುಲದ ರೀತಿ ಅಭಿವೃದ್ಧಿಪಡಿಸಬೇಕು. ರಸ್ತೆಗಳ ಅಭಿವೃದ್ಧಿಗೆ ೩೭ ಕೋಟಿ ವಿಶೇಷ ಅನುದಾನ ತರಲಾಗಿದೆ ಎಂದರು. ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ ಮಾತನಾಡಿ, ಕ್ಷೇತ್ರಕ್ಕೆ ಹೆಚ್ಚಿನ ನೀರಾವರಿ ಯೋಜನೆ ರೂಪಿಸಬೇಕು ಎಂದರು.

ಈ ವೇಳೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ಹರೀಶ್ ಆರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ ಚಂದ್ರನಾಯ್ಕ ಕೆ.ಜಿ.,ಉಪಾಧ್ಯಕ್ಷೆ ಲಕ್ಷ್ಮೀ ತಿಮ್ಮಯ್ಯ, ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್, ಎಂ ಎನ್ ರಾಜಣ್ಣ, ಹರಿಪ್ರಸಾದ್, ಮಂಜುನಾಥ್, ಕನಕಪ್ಪ ಮೇಲಸಕ್ರಿ, ಪುಟ್ಟಮ್ಮ ಭೀಮಣ್ಣ, ಆರ್ ಭೂತಣ್ಣ, ಮಹಾಲಕ್ಷ್ಮಿ ಮಾರಣ್ಣ, ಜಯಮ್ಮ ರಾಜಣ್ಣ, ಮಹಮ್ಮದ್ ಸಫಿ ಉಲ್ಲಾ, ದಿವಾಕರ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಶೇಷ ನಾಯ್ಕ, ಮುಖಂಡರಾದ ಕೆ ಎನ್ ಶೇಷ ನಾಯ್ಕ, ಸತ್ಯನಾರಾಯಣ ಸೇರಿದಂತೆ ಹಲವರು ಹಾಜರಿದ್ದರು.