ಹೊನ್ನೇನಹಳ್ಳಿ ಕಾವಲಿನ ಜನರಿಂದ ಮತದಾನ ಬಹಿಷ್ಕಾರ

| Published : Apr 27 2024, 01:17 AM IST

ಸಾರಾಂಶ

ಬೇಲೂರು ತಾಲೂಕಿನ ಹನಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನೆನಹಳ್ಳಿ ಗ್ರಾಮದ ಸುಮಾರು ೪೫ ಕುಟುಂಬಗಳು ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸದಿರುವುದನ್ನು ಖಂಡಿಸಿ ಮತಗಟ್ಟೆ ಸಂಖ್ಯೆ ೫೭ರಲ್ಲಿ ಮತದಾನ ಮಾಡುವುದಿಲ್ಲ ಎಂದು ಚುನಾವಣೆ ಪ್ರಕ್ರಿಯೆಯಿಂದ ಹೊರಗುಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸದಿರುವುದನ್ನು ಖಂಡಿಸಿ ಗ್ರಾಮದ ಮಹಿಳೆಯರು ಚುನಾವಣೆಯಲ್ಲಿ ಮತದಾನ ಮಾಡದೆ ಹೊನ್ನೇನಹಳ್ಳಿ ಕಾವಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಲೂಕಿನ ಹನಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನೆನಹಳ್ಳಿ ಗ್ರಾಮದ ಸುಮಾರು ೪೫ ಕುಟುಂಬಗಳು ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸದಿರುವುದನ್ನು ಖಂಡಿಸಿ ಮತಗಟ್ಟೆ ಸಂಖ್ಯೆ ೫೭ರಲ್ಲಿ ಮತದಾನ ಮಾಡುವುದಿಲ್ಲ ಎಂದು ಚುನಾವಣೆ ಪ್ರಕ್ರಿಯೆಯಿಂದ ಹೊರಗುಳಿದರು.

ಈ ವೇಳೆ ಮಾತನಾಡಿದ ತಾಪಂ ಮಾಜಿ ಸದಸ್ಯ ಶೇಖರಯ್ಯ, ಗ್ರಾಮಸ್ಥರಾದ ಬಸವರಾಜು, ಚಂದ್ರಶೇಖರ್, ಶಿವಣ್ಣ ಮಾತನಾಡಿ, ‘ನಮ್ಮ ಗ್ರಾಮಕ್ಕೆ ಸುಮಾರು ಮೂರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಇಲ್ಲ. ಸಮರ್ಪಕವಾದ ರಸ್ತೆ ಇಲ್ಲದೆ ಮಹಿಳೆಯರು, ವೃದ್ಧರಿಗೆ ಅನಾರೋಗ್ಯವಾದರೆ ಆಟೋ ಚಾಲಕರು ಹಾಗೂ ಆ್ಯಂಬುಲೆನ್ಸ್ ಗ್ರಾಮಕ್ಕೆ ಬರಲು ಹಿಂಜರಿಯುತ್ತಾರೆ. ಈಗ ಬರಗಾಲವಿದ್ದು ಕೊಳವೆಬಾವಿಗಳಲ್ಲಿ ನೀರಿಲ್ಲದೆ ಪರಿತಪಿಸುತ್ತಿದ್ದೇವೆ. ಇಷ್ಟಾದರೂ ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಮಗೆ ಕುಡಿಯಲು ನೀರಿಲ್ಲದಂತಾಗಿದೆ. ಅದಕ್ಕಾಗಿ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಮತದಾನ ಮಾಡದೆ‌ ನಾವು ಹೊರಗುಳಿಯುತ್ತಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಂಗಸ್ವಾಮಿ, ರಾಜಯ್ಯ, ತೀರ್ಥಯ್ಯ, ಜಗದೀಶ್, ವಿಜಯಕುಮಾರ್, ಮಲ್ಲೇಶಯ್ಯ, ಜಯಂತಿ, ರೇಣುಕಾ, ಆಶಾ, ಪೂಜಾ, ಗಂಗಾ, ಮಲ್ಲಮ್ಮ ಹಾಜರಿದ್ದರು.

ಮೂಲಸೌಕರ್ಯಕ್ಕೆ ಆಗ್ರಹಿಸಿ ಬೇಲೂರಿನ ಹೊನ್ನೆನಹಳ್ಳಿ ಕಾವಲು ಗ್ರಾಮದ ಮಹಿಳೆಯರು ಚುನಾವಣೆಯಲ್ಲಿ ಮತದಾನ ಮಾಡದೆ ಪ್ರತಿಭಟನೆ ನಡೆಸಿದರು .