ನಗರದಲ್ಲಿ ಮತದಾನಕ್ಕೆ ಹಿಂದೇಟು

| Published : May 13 2024, 01:12 AM IST

ಸಾರಾಂಶ

2019ರಲ್ಲಿ ಯಾವ್ಯಾವ ಬೂತ್‌ಗಳಲ್ಲಿ ಮತದಾನ ಕಡಿಮೆಯಾಗಿತ್ತೋ ಆ ಪ್ರದೇಶಕ್ಕೆ ತೆರಳಿ ಮತದಾನದ ಜಾಗೃತಿ ಸಹ ಮೂಡಿಸಲಾಗಿತ್ತು. ಇಷ್ಟಾಗಿಯೂ ಹುಬ್ಬಳ್ಳಿ ಧಾರವಾಡ ಕೇಂದ್ರ, ಪಶ್ಚಿಮ ಹಾಗೂ ಪೂರ್ವ ಮತದಾನ ಪ್ರಮಾಣದ ಕೊನೆ ಸ್ಥಾನದಲ್ಲಿವೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಮೇ 7ರಂದು ಜರುಗಿದ ಧಾರವಾಡ ಲೋಕಸಭಾ ಕ್ಷೇತ್ರದ ಮತದಾನದ ಅಂಕಿ-ಅಂಶ ಅವಲೋಕಿಸಿದರೆ ಮತದಾನದ ಪ್ರಮಾಣ 2019ರ ಚುನಾವಣೆಗಿಂಲೂ ಹೆಚ್ಚಿದರೂ ಹು-ಧಾ ಅ‍ವಳಿ ನಗರದ ಮತದಾರರು ಮತ ಹಾಕುವಲ್ಲಿ ಮತ್ತೇ ಹಿಂದೆ ಬಿದ್ದಿದ್ದಾರೆ.

ಇದೊಂದು ಪ್ರಜಾಪ್ರಭುತ್ವದ ಹಕ್ಕು, ಎಲ್ಲ ದಾನಗಳಿಗಿಂತ ಮತದಾನ ಶ್ರೇಷ್ಠ, ದೇಶದ ಸಮರ್ಥ ಆಡಳಿತಕ್ಕಾಗಿ ಸಮರ್ಥ ನಾಯಕರನ್ನು ಆಯ್ಕೆ ಮಾಡಲು ಇದೊಂದು ಸದಾವಕಾಶ ಅಂತಹ ಎಲ್ಲ ತಿಳುವಳಿಕೆ, ಜಾಗೃತಿ ಮಧ್ಯೆಯೂ ಹುಬ್ಬಳ್ಳಿ-ಧಾರವಾಡದ ಅವಳಿ ನಗರದ ಮತದಾರರು ನಿರೀಕ್ಷಿತ ಮಟ್ಟದಲ್ಲಿ ಮತದಾನ ಮಾಡದೇ ಇರುವುದು ಸ್ವೀಪ್ ಕಾರ್ಯಚಟುವಟಿಕೆಗಳ ಪ್ರಯತ್ನ ಅಷ್ಟಕಷ್ಟೇ ಎನ್ನುವಂತಾಗಿದೆ.

ಮತದಾನಕ್ಕೆ ಅರ್ಹರಾದವರು ಮತಪಟ್ಟಿಯಲ್ಲಿ ಸೇರ್ಪಡೆಯಾಗುವುದು ಹಾಗೂ ಅವರು ಮತಗಟ್ಟೆಗೆ ಬಂದು ಮತದಾನ ಮಾಡಲು ಪ್ರಚೋದಿಸಲು ಚುನಾವಣಾ ಆಯೋಗ ಸ್ವೀಪ್‌ ಹೆಸರಿನಲ್ಲಿ ಎರಡು ತಿಂಗಳು ಕಾಲ ಜಾಗೃತಿ ಮೂಡಿಸಲಾಯಿತು. ಯುವಕರು, ವಿಕಲಚೇತನರು, ಹಿರಿಯ ನಾಗರಿಕರು ಸೇರಿದಂತೆ 45 ಸಾವಿರಕ್ಕೂ ಹೆಚ್ಚು ಹೊಸ ಮತದಾರರು ಮತಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರು. ಜೊತೆಗೆ 2019ರಲ್ಲಿ ಯಾವ್ಯಾವ ಬೂತ್‌ಗಳಲ್ಲಿ ಮತದಾನ ಕಡಿಮೆಯಾಗಿತ್ತೋ ಆ ಪ್ರದೇಶಕ್ಕೆ ತೆರಳಿ ಮತದಾನದ ಜಾಗೃತಿ ಸಹ ಮೂಡಿಸಲಾಗಿತ್ತು. ಇಷ್ಟಾಗಿಯೂ ಹು-ಧಾ ಕೇಂದ್ರ (ಶೇ.66.88), ಹು-ಧಾ ಪಶ್ಚಿಮ (ಶೇ.67.09) ಹಾಗೂ ಹು-ಧಾ ಪೂರ್ವ (ಶೇ.73.53)ಮತದಾನ ಪ್ರಮಾಣದ ಕೊನೆ ಸ್ಥಾನದಲ್ಲಿವೆ. ಅವಳಿ ನಗರಕ್ಕೆ ಹೊಂದಿಕೊಂಡ ಕೆಲಗೇರಿ, ನವಲೂರು, ಸತ್ತೂರು ಅಂತಹ ಗ್ರಾಮೀಣ ಪ್ರದೇಶದಲ್ಲಿ ಶೇ. 70ಕ್ಕಿಂತ ಹೆಚ್ಚು ಮತದಾನವಾಗಿದೆ. ಆದರೆ, ನಗರದ ಪ್ರಮುಖ ಬಡಾವಣೆಗಳಲ್ಲಿಯೇ ಮತದಾರರು ಮತ ಹಾಕಿಲ್ಲ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಸುಶಿಕ್ಷತರ ಮತದಾನದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.

ಹು-ಧಾ ಅ‍ವಳಿ ನಗರದ ಜನತೆ ಸುಶಿಕ್ಷತರು ಮತ್ತು ಜಾಗೃತ ಮತದಾರರು ಎಂಬ ಹಣೆಪಟ್ಟಿ ಹೊಂದಿದರೂ ಗ್ರಾಮೀಣ ಮತದಾರರಿಗಿಂತ ಶೇ. 7-8ರಷ್ಟು ಮತದಾನದಲ್ಲಿ ಹಿಂದಿರುವುದು ಬೇಸರದ ಸಂಗತಿ. ಕಳೆದ ಬಾರಿ 2019ರಲ್ಲೂ ಹು-ಧಾ ಪಶ್ಚಿಮ (ಶೇ.64.14), ಹು-ಧಾ ಕೇಂದ್ರ (ಶೇ.64.38) ಹಾಗೂ ಹು-ಧಾ ಪೂರ್ವ (ಶೇ.70.72) ಮತದಾನವಾಗಿತ್ತು. ಈ ಬಾರಿಯೂ ಈ ಮೂರು ವಿಧಾನಸಭಾ ಕ್ಷೇತ್ರಗಳೇ ಹಿಂದಿವೆ. ಕುಂದಗೋಳ, ಕಲಘಟಗಿ, ಧಾರವಾಡ ಗ್ರಾಮೀಣ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲೂ ಹಾಗೂ ಈ ಚುನಾವಣೆಯಲ್ಲೂ ಅತ್ಯುತ್ತಮ ಮತದಾನವಾಗಿದೆ.

ಏತಕ್ಕೆ ಕಡಿಮೆ?

ಪ್ರತಿ ಬಾರಿ ನಗರದ ಮತದಾನ ಕಡಿಮೆ ಆಗುವುದಕ್ಕೆ ಹಲವು ಕಾರಣಗಳಿವೆ. ಉದ್ಯೋಗ, ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರು, ಪೂನಾ, ಚೆನ್ನೈ ಸೇರಿದಂತೆ ಹಲವು ಊರುಗಳಿಗೆ ಇಲ್ಲಿಯ ಮತದಾರರು ಹೋಗಿದ್ದಾರೆ. ಮತಚೀಟಿ ಮಾತ್ರ ಸ್ಥಳೀಯವಾಗಿಯೇ ಇರುತ್ತದೆ. ಈ ಪೈಕಿ ಶೇ. 100ರಷ್ಟು ಮತದಾರರು ಮತದಾನ ದಿನ ಬರೋದಿಲ್ಲ. ಸಾರಿಗೆ ಸೇರಿದಂತೆ ಹಲವು ಕಾರಣಗಳಿಂದ ಊದ್ಯೋಗ, ವ್ಯಾಸಂಗದ ಸ್ಥಳದಲ್ಲಿಯೇ ಉಳಿದುಕೊಳ್ಳುವುದು ಒಂದು ಕಾರಣವಾದರೆ, ಮನೆಯಲ್ಲಿಯೇ ಇದ್ದು ಅನ್ಯ ಕಾರಣಗಳಿಂದ ಮತದಾನ ಮಾಡದೇ ಇರುವುದು ಮತ್ತೊಂದು ಕಾರಣ. ಪ್ರಸ್ತುತ ರಾಜಕೀಯ ಸ್ಥಿತಿ-ಗತಿ, ಪಕ್ಷ-ಪಕ್ಷಗಳು, ಮುಖಂಡರ ಮಧ್ಯೆ ಕಚ್ಚಾಟದ ಪ್ರಭಾವವೂ ಕೆಲವು ಮತದಾರರ ಮೇಲೆ ಆಗಿರಬಹುದಾದ ಸಾಧ್ಯತೆಗಳೂ ಇವೆ. ಹೀಗಾಗಿ ಬೇಸರದಿಂದ ಮತ ಹಾಕದೇ ಮನೆಯಲ್ಲೂ ಉಳಿದಿರಬಹುದು ಎಂದು ಕೆಲವರು ಕಾರಣ ನೀಡುತ್ತಾರೆ. ಈ ಬಾರಿ ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಮನೆ ಮನೆಗೆ ಹೋಗಿ ಮತದಾನಕ್ಕೆ ಅ‍ವಕಾಶ ನೀಡಿದರೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಮತದಾರರು ಅದರ ಲಾಭ ಪಡೆದರೆ ಹೊರತು ನಗರದಲ್ಲಿ ಅಷ್ಟಾಗಿ ಪ್ರಯೋಜನ ಪಡೆಯಲಿಲ್ಲ ಎಂಬ ಅಂಶವನ್ನು ಪರಿಗಣಿಸಬೇಕಾಗುತ್ತದೆ.ಶೇ. 4.25ರಷ್ಟು ಹೆಚ್ಚಳ

ಮತದಾನ ಕುರಿತ ಜಾಗೃತಿಗಾಗಿ ಒಟ್ಟಾರೆ ಶೇ. 4.25ರಷ್ಟು ಮತದಾನದಲ್ಲಿ ಹೆಚ್ಚಳವಾಗಿದ್ದು ಸಾಧನೆಯೇ ಸರಿ. ಕಳೆದ ಚುನಾವಣೆಗೆ ಹೋಲಿಸಿದರೆ ಗ್ರಾಮೀಣ ಮತದಾರರಗಿಂತ ನಗರದ ಮತದಾರರ ಮತದಾನ ಪ್ರಮಾಣ ತುಸು ಕಡಿಮೆಯಾಗಿದೆ. ಚುನಾವಣೆಯಿಂದ ಚುನಾವಣೆಗೆ ಮತದಾನ ಪ್ರಮಾಣ ಹೆಚ್ಚಳವಾಗುತ್ತಿರುವುದು ಉತ್ತಮ ಸಂಗತಿ.ಸ್ವರೂಪಾ ಟಿ.ಕೆ. ಸ್ವೀಪ್‌ ಸಮಿತಿ ಅಧ್ಯಕ್ಷರು