ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ತಾಲೂಕಿನ ಕೈಗಾರಿಕಾ ಪ್ರದೇಶದ ಅಂಚೆಪಾಳ್ಯದಲ್ಲಿ ನಿರ್ಮಾಣಗೊಂಡ ಹಲವಾರು ಕಾರ್ಖಾನೆಗಳಿಂದ ಕಲುಷಿತ ನೀರು ನಿರಂತರವಾಗಿ ಗೊಟ್ಟಿಕೆರೆ ಸೇರುತ್ತಿದ್ದು ಕೆರೆ ನೀರು ಬಳಸಲು ಯೋಗ್ಯವಾಗಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ಕಳೆದ ಹಲವಾರು ದಿನಗಳಿಂದ ಕಾರ್ಖಾನೆಯ ನೀರು ಕೆರೆಯಲ್ಲಿ ಸಂಗ್ರಹಣೆ ಆಗುತ್ತಿದ್ದು ಕೆರೆಯಲ್ಲಿ ಅತಿಯಾದ ವಾಸನೆ ಉಂಟಾಗಿ ವಿಷಪೂರಿತ ನೀರು ಅಂತರ್ಜಲ ಸೇರುತ್ತಿದೆ. ಪರಿಣಾಮ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದನ್ನು ತಡೆಗಟ್ಟಬೇಕು ಎಂದು ರಸ್ತೆ ತಡೆ ಪ್ರತಿಭಟನೆಗೆ ಮುಂದಾದಾಗ ಸಿಪಿಐ ನವೀನ್ ಗೌಡ ಪ್ರತಿಭಟನಾಕಾರರನ್ನು ಮನವೊಲಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ತಮ್ಮ ದೇಹದ ಮೇಲೆ ಆಗಿರುವ ಕಾಯಿಲೆಗಳ ಗುರುತುಗಳನ್ನು ಹಾಗೂ ಕಾಲು ಮತ್ತು ಕೈ ಭಾಗದಲ್ಲಿ ಕೊಳೆತ ರೀತಿಯ ಮಾದರಿಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಕಶ್ಮಲಗೊಂಡ ನೀರಿನ ಸೇವನೆಯಿಂದ ಈ ರೀತಿ ಸಮಸ್ಯೆಗಳು ಕಾಡುತ್ತಿದೆ. ತಕ್ಷಣ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ಕೆರೆಯ ನೀರನ್ನು ಸ್ವಚ್ಛ ಮಾಡಿ ಆರೋಗ್ಯದ ಕಡೆಗೆ ಗಮನ ಹರಿಸಬೇಕೆಂದರು. ಕೊಳವೆ ಬಾವಿಗಳ ನೀರು ಕಶ್ಮಲ ಆಗುತ್ತಿದ್ದು ಕೊಳವೆ ಬಾವಿಯ ನೀರನ್ನು ಕುಡಿಯುವುದರಿಂದ ಕೈಕಾಲು ನೋವು ಸೇರಿದಂತೆ ಹಲವಾರು ಸಮಸ್ಯೆ ಮತ್ತೆ ಹೆಚ್ಚಿದ ಕ್ಯಾನ್ಸರ್ ಪ್ರಕರಣಗಳಿಂದ ದಿನನಿತ್ಯ ಸಮಸ್ಯೆ ಕಾಡುತ್ತಿದೆ ಆದ್ದರಿಂದ ತಕ್ಷಣ ಸಂಬಂಧಪಟ್ಟ ಕಾರ್ಖಾನೆಗಳನ್ನು ಗುರುತಿಸಿ ಕ್ರಮ ವಹಿಸಬೇಕೆಂದರು. ಸ್ಥಳಕ್ಕೆ ಆಗಮಿಸಿದ ತಾಲೂಕು ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಸ್ಥಳೀಯರು ಹಲವಾರು ಸಮಸ್ಯೆಗಳು ಕುಡಿಯುವ ನೀರು ಸ್ವಚ್ಛತೆ ಇವುಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಕಿಡಿಕಾರಿದರು. ತಾಲೂಕು ವೈದ್ಯಾಧಿಕಾರಿ ಮರಿಯಪ್ಪ ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಹಾಗೂ ಇತರ ಮೇಲಧಿಕಾರಿಗಳಿಗೆ ಕ್ರಮ ವಹಿಸಿ ತಹಸೀಲ್ದಾರ್ ಮೂಲಕ ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜು ಮುಖಂಡರಾದ ಚಂದ್ರಪ್ಪ, ಮುರಳಿ ಮೋಹನ, ಶಿವಾನಂದ, ಮಂಜುನಾಥ, ರೇಣುಕೇಶ್ ಭಾಗ್ಯಮ್ಮ ಗೌರಮ್ಮ ತಾರಾದೇವಿ ಸೇರಿದಂತೆ ಹಲವಾರು ಸ್ಥಳೀಯರು ಇದ್ದರು.