ಕೊಪ್ಪಪಟ್ಟಣ ಪಂಚಾಯಿತಿ ಯಿಂದ ಕೊಪ್ಪ ಪಟ್ಟಣಕ್ಕೆ ಪ್ರತಿನಿತ್ಯ ಸರಬರಾಜು ಮಾಡಲಾಗುತ್ತಿರುವ ಕುಡಿಯುವ ನೀರು ಕಲುಷಿತ ಗೊಂಡಿದ್ದು, ಕೆಂಪು ಬಣ್ಣದ ಕೊಳಕು ನೀರು ಬರುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನಿವಾಸಿಗಳು ಪಟ್ಟಣ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲುಷಿತ ನೀರಿನಿಂದ ಒಂದೇ ವಾರದಲ್ಲಿ ವಾಟರ್ ಫಿಲ್ಟರ್‌ ಹಾನಿ

ಕನ್ನಡಪ್ರಭ ವಾರ್ತೆ ಕೊಪ್ಪ

ಪಟ್ಟಣ ಪಂಚಾಯಿತಿ ಯಿಂದ ಕೊಪ್ಪ ಪಟ್ಟಣಕ್ಕೆ ಪ್ರತಿನಿತ್ಯ ಸರಬರಾಜು ಮಾಡಲಾಗುತ್ತಿರುವ ಕುಡಿಯುವ ನೀರು ಕಲುಷಿತ ಗೊಂಡಿದ್ದು, ಕೆಂಪು ಬಣ್ಣದ ಕೊಳಕು ನೀರು ಬರುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನಿವಾಸಿಗಳು ಪಟ್ಟಣ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾರ್ವಜನಿಕರ ಅನುಕೂಲಕ್ಕಾಗಿ ಸಮಾಜಸೇವೆ ನಿರತ ಸರಸ್ವತಿ ಅವರು ಅಳವಡಿಸಿದ್ದ ಸುಮಾರು 1.50 ಲಕ್ಷ ರು. ಮೌಲ್ಯದ ವಾಟರ್ ಫಿಲ್ಟರ್ ಕಲುಷಿತ ನೀರಿನಿಂದ ಹಾನಿಗೊಳಗಾಗಿದೆ. ವಾರದ ಹಿಂದಷ್ಟೇ ಅಳವಡಿಸಲಾಗಿದ್ದ ಫಿಲ್ಟರ್‌ನಲ್ಲಿ ನೀರು ಸರಿಯಾಗಿ ಹರಿಯದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ, ಕೊಳಕು ನೀರಿ ನಿಂದ ಫಿಲ್ಟರ್ ಹಾಳಾಗಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ.ಫಿಲ್ಟರ್‌ಗಳೇ ಹಾಳಾಗುವಷ್ಟು ಕಲುಷಿತ ನೀರು ಬರುತ್ತಿದ್ದರೆ, ಯಾವುದೇ ಫಿಲ್ಟರ್ ವ್ಯವಸ್ಥೆ ಇಲ್ಲದೆ ಇದೇ ನೀರನ್ನು ಕುಡಿಯುವ ಜನಸಾಮಾನ್ಯರ ಪರಿಸ್ಥಿತಿ ಏನು? ಎಂದು ನಾಗರಿಕರು ಪ್ರಶ್ನಿಸಿದ್ದಾರೆ.ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಣ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನವೂ ಸಾರ್ವಜನಿಕರಲ್ಲಿ ಮೂಡಿದೆ. ಕಲುಷಿತ ನೀರು ಸರಬರಾಜಾಗುತ್ತಿರುವುದಕ್ಕೆ ಹೊಣೆ ಯಾರು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.ಪಟ್ಟಣದ ಜನರಿಗೆ ಕನಿಷ್ಠ ಮೂಲಸೌಕರ್ಯ ಸಮರ್ಪಕವಾಗಿ ಒದಗಿಸಲು ಸಾಧ್ಯವಾಗದಿದ್ದರೆ, ಇನ್ನಾವ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳುತ್ತಾರೆ ಎಂದು ನಾಗರಿಕರು ಪ್ರಶ್ನಿಸಿದ್ದಾರೆ. ಇದೇ ವೇಳೆ ಕೊಪ್ಪ ಪಟ್ಟಣದ ಪ್ರಮುಖ ರಸ್ತೆಗಳಲ್ಲಿರುವ ಬಾವಿ ಯಂತಿರುವ ದೊಡ್ಡ ಗುಂಡಿಗಳನ್ನು ಕನಿಷ್ಠ ಜಲ್ಲಿ ಹಾಕಿಯಾದರೂ ಮುಚ್ಚದೆ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕುಡಿಯುವ ನೀರಿನ ಸಮಸ್ಯೆ ಹಾಗೂ ರಸ್ತೆ ಗುಂಡಿಗಳ ಸಮಸ್ಯೆ ಕೂಡಲೇ ಬಗೆಹರಿಸದಿದ್ದರೆ, ಪಟ್ಟಣದ ನಾಗರಿಕ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟಿಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.ನೀರಿನ ಗುಣಮಟ್ಟ ತಕ್ಷಣ ಪರಿಶೀಲಿಸಿ, ಕಲುಷಿತ ನೀರು ಸರಬರಾಜಾಗದಂತೆ ಕ್ರಮ ಕೈಗೊಳ್ಳಬೇಕು. ಹಾನಿಗೊಳಗಾದ ನೀರು ಶುದ್ಧೀಕರಣ ವ್ಯವಸ್ಥೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.