ಕಾವೇರಿ ನದಿಯೊಡಲು ಸೇರುತ್ತಿದೆ ಕಲುಷಿತ ನೀರು

| Published : May 27 2024, 01:10 AM IST / Updated: May 27 2024, 12:24 PM IST

cauvery river

ಸಾರಾಂಶ

ಮೈಸೂರು ನಗರದ ಕಲುಷಿತ ನೀರು ಕಾವೇರಿ ನದಿಯೊಡಲು ಸೇರುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.

 ಮಂಡ್ಯ :  ಮೈಸೂರು ನಗರದ ಕಲುಷಿತ ನೀರು ಕಾವೇರಿ ನದಿಯೊಡಲು ಸೇರುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಲುಷಿತ ನೀರು ಕಾವೇರಿ ನದಿ, ನಾಲೆಗೆ ಬಿಟ್ಟಿರುವ ಬಗ್ಗೆ ದೂರು ಬಂದಿದೆ. ಪಂಪ್‌ಹೌಸ್ ಮೂಲಕ ಶ್ರೀರಂಗಪಟ್ಟಣದ ಗಂಜಾಂನ ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಸಾರ್ವಜನಿಕರ ದೂರಿನನ್ವಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ ಎಂದರು.

ಮೈಸೂರಿನ ತ್ಯಾಜ್ಯ ನೀರು ಕಾವೇರಿ ನದಿಗೆ ಬರುತ್ತಿದೆ. ಈಗಾಗಲೇ ನಮ್ಮ ಅಧಿಕಾರಿಗಳು ಮೈಸೂರು ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ. ತ್ಯಾಜ್ಯ ನೀರು ಬಳಸಬಾರದು ಎಂದು ಸೂಚನೆ ನೀಡಲಾಗಿದೆ. ತ್ಯಾಜ್ಯ ನೀರು ಬಿಟ್ಟ ಬಳಿಕ ನಮ್ಮ ನೀರನ್ನು ಲಿಫ್ಟ್ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ತ್ಯಾಜ್ಯ ಬಿಡುವ ವೇಳೆ ಜಾಕ್ವೆಲ್ ಬಳಿ ನೀರನ್ನು ಲಿಫ್ಟ್ ಮಾಡುತ್ತಿಲ್ಲ ಇದು ಸೂಕ್ತ ಅಲ್ಲ ಎಂದು ತಿಳಿಸಿದರು.

ಮೈಸೂರಿನಿಂದ ಎರಡೂ ಸ್ಟ್ರೀಮ್‌ನಲ್ಲಿ ತ್ಯಾಜ್ಯ ನೀರು ಬರುತ್ತಿದೆ. ತಡೆಗೋಡೆ ನಿರ್ಮಿಸಲು ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಒಂದೋ ಸ್ಥಳಾಂತರ ಮಾಡಬೇಕು, ಇಲ್ಲವೇ ತ್ಯಾಜ್ಯ ನೀರಿನ್ನು ಸಂಸ್ಕರಿಸಿ ಮೈಸೂರಿನವರು ಬಿಡಬೇಕು. ಎರಡರಲ್ಲಿ ಒಂದನ್ನು ಮಾಡಿದರೆ ಮಾತ್ರ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಮೈಸೂರು ಡಿಸಿಗೆ ಪತ್ರ ಬರೆದಿರುವುದಾಗಿ ವಿವರಿಸಿದರು.

ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಲು 8.5 ಲಕ್ಷ ರು ಭರಿಸಿದ್ದೇವೆ. ತಾತ್ಕಾಲಿಕವಾಗಿ ಇದನ್ನು ತಡೆಗಟ್ಟಬಹುದು. ಆದರೆ, ದೊಡ್ಡ ಪ್ರಮಾಣದಲ್ಲಿ ನೀರು ಬಂದರೆ ತಡೆಗೋಡೆ ತಡೆಯಲ್ಲ. ಅಲ್ಲಿರುವ ಇನ್ಟೆಕ್‌ವೆಲ್ ಅನ್ನು ಸ್ಥಳಾಂತರ ಮಾಡಬೇಕು ಎಂದರು. ಗಂಜಾಂ ಪ್ರದೇಶದ 6 ವಾರ್ಡ್‌ಗಳಿಗೆ ಮಾತ್ರ ಕುಡಿಯುವ ನೀರಿನ ಪೂರೈಕೆಯಿದೆ. ಇನ್ಟೆಕ್‌ವೆಲ್ ಸ್ಥಳಾಂತರ ಮಾಡಿದರೆ ಮಾತ್ರ ಇದಕ್ಕೆ ಪರಿಹಾರ ಸಿಗುತ್ತದೆ. ನೀರು ಪರೀಕ್ಷಿಸಿ ಬಿಡಲು ಸೂಚನೆ ಕೊಟ್ಟಿದ್ದೇನೆ. ತ್ಯಾಜ್ಯ ನೀರು ಬಿಟ್ಟ ವೇಳೆ ಇನ್ಟೆಕ್‌ವೆಲ್ ನಿಲ್ಲಿಸಬೇಕು. ಬಳಿಕ ಸ್ಟಾರ್ಟ್ ಮಾಡಲು ಸೂಚನೆ ನೀಡಲಾಗಿದೆ ಎಂದು ಡಾ.ಕುಮಾರ ತಿಳಿಸಿದರು.