ಕಾವೇರಿ ಹೋರಾಟಕ್ಕೆ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಬೆಂಬಲ

| Published : Oct 17 2023, 12:45 AM IST

ಸಾರಾಂಶ

ಚನ್ನಪಟ್ಟಣ: ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಬೇಕು ಹಾಗೂ ಮೇಕೆದಾಟು ಯೋಜನೆಗೆ ಅಡಿಕಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ 100 ದಿನಗಳ ಪ್ರತಿಜ್ಞೆಯ ಹೋರಾಟದ 12ನೇ ದಿನದ ಪ್ರತಿಭಟನೆಗೆ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ಚನ್ನಪಟ್ಟಣ: ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಬೇಕು ಹಾಗೂ ಮೇಕೆದಾಟು ಯೋಜನೆಗೆ ಅಡಿಕಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ 100 ದಿನಗಳ ಪ್ರತಿಜ್ಞೆಯ ಹೋರಾಟದ 12ನೇ ದಿನದ ಪ್ರತಿಭಟನೆಗೆ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಗರದ ಅಂಚೆ ಕಚೇರಿ ರಸ್ತೆಯ ಕಾವೇರಿ ಸರ್ಕಲ್‌ನಲ್ಲಿ ಕಕಜವೇ ಹಮ್ಮಿಕೊಂಡಿರುವ ಪ್ರತಿನಿತ್ಯ ಒಂದು ತಾಸು ಪ್ರತಿಭಟನೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿದರು. ಕಾವೇರಿ ನದಿಯ ಉಳಿವಿಗಾಗಿ ಪ್ರತಿಯೊಬ್ಬರೂ ಹೋರಾಟದ ಹೆಜ್ಜೆ ಹಾಕಬೇಕು. ಯುವಶಕ್ತಿ ಹೋರಾಟಕ್ಕೆ ಮುಂದಾದರೆ ಯಾವ ಶಕ್ತಿಯೂ ಅವರನ್ನು ತಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಯುವಶಕ್ತಿ ಹೋರಾಟದ ದಾರಿ ಹಿಡಿಯಲು ಅವಕಾಶ ನೀಡದೇ ಕೇಂದ್ರ ಸರ್ಕಾರವೇ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು. ತಮಿಳುನಾಡಿನ ಭವಾನಿ, ಮೆಟ್ಟೂರು ಜಲಾಶಯಗಳು ಭರ್ತಿಯಾಗುವ ಜೊತೆಗೆ ಲಕ್ಷಾಂತರ ಹೆಕ್ಟೇರ್ ಕೃಷಿ ಜಮೀನಿಗೆ ನೀರು ಪೂರೈಸಿದ್ದಾರೆ. ನಮ್ಮ ರಾಜ್ಯದ ನೀರಾವರಿ ಇಲಾಖೆಯ ಅಧಿಕಾರಿಗಳು, ತಜ್ಞರು ತಮಿಳುನಾಡಿಗೆ ತೆರಳಿ ಅಲ್ಲಿನ ನೀರಿನ ಲಭ್ಯತೆಯನ್ನು ಸಮಗ್ರವಾಗಿ ಪರಿಶೀಲಿಸಿ ಪ್ರಾಧಿಕಾರದ ಮುಂದೆ ಈ ವರದಿ ಮಂಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ನಮ್ಮ ರಾಜ್ಯದ ರಾಜಕಾರಣಿಗಳಿಗೆ ನೆಲ, ಜಲ ಉಳಿಸಿಕೊಳ್ಳುವ ಬದ್ಧತೆ ಇಲ್ಲ. ಸಮಸ್ಯೆ ಬಂದಾಗ ಆ ಬಗ್ಗೆ ಅಧಿಕಾರಿಗಳಿಂದ ವರದಿ ತಯಾರಿಸುತ್ತಾರೆ. ಆದರೆ, ತಮಿಳುನಾಡು ಸರ್ಕಾರ ಕಾವೇರಿ ನೀರು ಹಂಚಿಕೆ ಕುರಿತು ಅಧಿಕಾರಿಗಳ ತಂಡ ರಚಿಸಿದ್ದು, ಆ ತಂಡ ಪ್ರತಿ ತಿಂಗಳು ನಮ್ಮ ರಾಜ್ಯದಲ್ಲಿನ ನೀರಿನ ಲಭ್ಯತೆ, ಮಳೆ ಪ್ರಮಾಣ ಸೇರಿದಂತೆ ಸಂಪೂರ್ಣ ವರದಿ ಕಲೆಹಾಕುತ್ತಿದೆ. ಇಂತಹ ಬದ್ಧತೆ ನಮ್ಮ ರಾಜ್ಯದ ರಾಜಕಾರಣಿಗಳಿಗೆ ಬಂದಾಗ ಮಾತ್ರ ಕಾವೇರಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್, ಬೆಂಗಳೂರು ಕಾರ್ಯಾಧ್ಯಕ್ಷ ಚಂದ್ರೇಗೌಡ, ಸಾಂಸ್ಕೃತಿಕ ಘಟಕದ ಅಧ್ಯಕ್ಷ ರ್‍ಯಾಂಬೋ ಸೂರಿ, ಚಿಕ್ಕೇನಹಳ್ಳಿ ಸುಧಾಕರ್, ಚಿನ್ಮಯ್, ಸರ್ಕಾರಿ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೊಟೋ೧೬ಸಿಪಿಟಿ೨: ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ 100 ದಿನಗಳ ಪ್ರತಿಜ್ಞೆಯ ಹೋರಾಟದಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಭಾಗಿಯಾದರು.