ಪೊಂಪೈ: ಮೂಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನ ಫೆಬ್ರವರಿ 8ರಂದು

| Published : Feb 05 2025, 12:35 AM IST

ಪೊಂಪೈ: ಮೂಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನ ಫೆಬ್ರವರಿ 8ರಂದು
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಶ್ರಯದಲ್ಲಿ 8ರಂದು ಐಕಳ ಪೊಂಪೈ ಕಾಲೇಜಿನಲ್ಲಿ ಮೂಲ್ಕಿ ತಾಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಧರ ಡಿ.ಎಸ್. ಅಧ್ಯಕ್ಷತೆ ವಹಿಸುವರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಶ್ರಯದಲ್ಲಿ 8ರಂದು ಐಕಳ ಪೊಂಪೈ ಕಾಲೇಜಿನಲ್ಲಿ ಮೂಲ್ಕಿ ತಾಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಧರ ಡಿ.ಎಸ್. ಅಧ್ಯಕ್ಷತೆ ವಹಿಸುವರು.

ಶಾಸಕ ಉಮಾನಾಥ ಕೋಟ್ಯಾನ್ ಸಮ್ಮೇಳನ ಉದ್ಘಾಟಿಸುವರು. ಬೆಳಗ್ೆ ಮೂರುಕಾವೇರಿಯಿಂದ ಐಕಳ ಪೊಂಪೈ ಕಾಲೇಜು ವರೆಗೆ ನಡೆಯಲಿರುವ ಕನ್ನಡ ಭುವನೇಶ್ವರಿ ಮೆರವಣಿಗೆಯನ್ನು ಉದ್ಯಮಿ ಶ್ರೀನಿವಾಸ ಆಚಾರ್ಯ ಉದ್ಘಾಟಿಸಲಿದ್ದಾರೆ. ಕಾಲೇಜಿನ ಸಂಚಾಲಕ ರೆ. ಫಾ. ಓಸ್ವಾಲ್ಡ್ ಮೊಂತೆರೋ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದು, ಕಸಾಪ ದ.ಕ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಆಶಯ ನುಡಿಗಳನ್ನಾಡಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕಥೆಗಾರ ಅಬ್ದುಲ್ ರಶೀದ್ ಸಮ್ಮೇಳನಕ್ಕೆ ನುಡಿ ಸೇಸೆ ನೆರವೇರಿಸುವರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಗಣೇಶ್ ಅಮೀನ್ ಸಂಕಮಾರ್, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮೂಲ್ಕಿ ತಹಸೀಲ್ದಾರ್‌ ಪ್ರದೀಪ್ ಕುರ್ಡೇಕರ್, ಕಿನ್ನಿಗೋಳಿ ರೋಟರಿ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ಭಾಗವಹಿಸಲಿದ್ದಾರೆ.

ಬಳಿಕ ಮೂಲ್ಕಿ ತಾಲೂಕಿನಲ್ಲಿ ಯಕ್ಷಗಾನ ವೈಭವ ವಿಚಾರಗೋಷ್ಠಿಯಲ್ಲಿ ಕಟೀಲು ದೇವೀಪ್ರಕಾಶ ರಾವ್, ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ವಿಚಾರಗೋಷ್ಟಿಯಲ್ಲಿ ನಡುಗೋಡು ಶಾಲೆಯ ಯಕ್ಷ, ಮೂಲ್ಕಿ ಸರ್ಕಾರಿ ಕಾಲೇಜಿನ ಲಕ್ಷ್ಮೀ, ಐಕಳ ಪೊಂಪೈ ಕಾಲೇಜಿನ ಸನ್ನಿಧಿ, ಓದುವ ಸೊಬಗು, ಕೇಳುವ ಸೊಗಸು ವಿಚಾರಗೋಷ್ಟಿಯಲ್ಲಿ ಪಾಂಡುರಂಗ ಭಟ್, ದೇವದಾಸ ಮಲ್ಯ, ವಿಶ್ವನಾಥ ಕವತ್ತಾರು, ಡಾ. ರುಡಾಲ್ಫ್ ನೊರೊನ್ಹ ಮಾತನಾಡಲಿದ್ದು, ಡಾ. ಸೋಂದಾ ಭಾಸ್ಕರ ಭಟ್ ಸಮನ್ವಯಗೊಳಿಸಲಿದ್ದಾರೆ.

ಚಿತ್ರ ಮತ್ತು ಸಾಹಿತ್ಯ ಗೋಷ್ಟಿಯಲ್ಲಿ ಡಾ. ಇ. ವಿಕ್ಟರ್ ವಾಸ್ ಮಾತನಾಡಲಿದ್ದು ಕವಿ ಸಮಯದಲ್ಲಿ ಕಸ್ತೂರಿ ಪಂಜ, ಮನ್ಸೂರ್ ಮೂಲ್ಕಿ ಹಾಗೂ ಸೌಧಾಮಿನಿ ಶೆಟ್ಟಿ ಎಳತ್ತೂರು ಇವರ ಕವನಗಳನ್ನು ದಿನೇಶ್ ಕೊಡೆತ್ತೂರು, ಆಶ್ವೀಜಾ ಉಡುಪ ಹಾಡಲಿದ್ದಾರೆ.

ಹೊತ್ತಗೆಯ ಹೊತ್ತು ವಿಚಾರಗೋಷ್ಠಿಯಲ್ಲಿ ಡಾ. ಪ್ರಕಾಶ್ ಕಾಮತ್, ಸುಮಿತ್ರಾ ಪಕ್ಷಿಕೆರೆ ಹಾಗೂ ತಾಲೂಕಿನ ವಿವಿಧ ಗ್ರಂಥಾಲಯಗಳ ಗ್ರಂಥಪಾಲಕರು, ಓದುಗರು ಮಾತನಾಡಲಿದ್ದು, ಅವರಿಗೆ ಗೌರವಾರ್ಪಣೆಯನ್ನು ಡಾ. ಹರಿಕೃಷ್ಣ ಪುನರೂರು, ವಂ.ಜೊಕಿಂ ಫೆರ್ನಾಂಡಿಸ್ ನೆರವೇರಿಸಲಿದ್ದಾರೆ.

ಸಮಾಪನ ಸಮಾರಂಭದಲ್ಲಿ ಕಟೀಲು ಶ್ರೀಹರಿನಾರಾಯಣದಾಸ ಆಸ್ರಣ್ಣ ಸಮಾಪನದ ಮಾತುಗಳನ್ನಾಡಲಿದ್ದು, ತಾಲೂಕಿನ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯಗಳು, ತಾಲೂಕಿನ ಗಾಯಕರಿಂದ ಕನ್ನಡ ಹಾಡುಗಳ ಗಾಯನ ನಡೆಯಲಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಕನ್ನಡ ಶಾಲು, ಬಟ್ಟೆ ಚೀಲ, ಸಾಹಿತ್ಯ ಪುಸ್ತಕ, ತರಕಾರಿ ಸಸಿ, ಬೀಜಗಳನ್ನು ವಿತರಿಸಲಾಗುತ್ತದೆ. ಸಮ್ಮೇಳನದಲ್ಲಿ ಪುಸ್ತಕ, ಸಾವಯವ ವಸ್ತುಗಳ ಪ್ರದರ್ಶನ, ಮಾರಾಟ ನಡೆಯಲಿದೆ .

ಶಿಕ್ಷಕರಿಗೆ ಒಒಡಿ ಸೌಲಭ್ಯ:

ಸಮ್ಮೇಳನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ತಾಲೂಕಿನ ಮಂಗಳೂರು ಉತ್ತರ ವಲಯದ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಅನ್ಯಕಾರ್ಯ ನಿಮಿತ್ತ ರಜೆಯ ಸೌಲಭ್ಯ ಪಡೆಯುವ ಅವಕಾಶವನ್ನು ಶಿಕ್ಷಣ ಇಲಾಖೆ ನೀಡಿದೆ ಎಂದು ಸಮ್ಮೇಳನ ಸಂಚಾಲಕ, ಪೊಂಪೈ ಕಾಲೇಜಿನ ಪ್ರಾಚಾರ್ಯ ಡಾ. ಪುರುಷೋತ್ತಮ ಕೆ.ವಿ. ಸಮ್ಮೇಳನ ಸಮಿತಿಯ ಅಧ್ಯಕ್ಷ ಪೃಥ್ವೀರಾಜ ಆಚಾರ್ಯ , ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಹಿಲ್ಡಾ ಡಿಸೋಜ ತಿಳಿಸಿದ್ದಾರೆ.