ಸಾರಾಂಶ
ಶಿವಾನಂದ ಅಂಗಡಿ
ಅಣ್ಣಿಗೇರಿ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹೊಲಗಳೆಲ್ಲಾ ಕೆರೆಗಳಂತಾಗಿದ್ದು, ಸಕಾಲದಲ್ಲಿ ಹಿಂಗಾರಿ ಬಿತ್ತನೆಯೇ ಕಷ್ಟವಾಗಿದ್ದು, ರೈತರು ತೀವ್ರ ಆತಂಕದಲ್ಲಿದ್ದಾರೆ.ಈ ಬಾರಿ ಮುಂಗಾರಿ ಹಂಗಾಮಿನಲ್ಲಿ ಗುರಿ ಮೀರಿ ಬಿತ್ತನೆಯಾಗಿದ್ದು, ಮೆಕ್ಕೆಜೋಳ-2250 ಹೆಕ್ಟೇರ್, ಹೆಸರು ಕಾಳು-20500, ಶೇಂಗಾ-250 ಹೆಕ್ಟೇರ್, ಹತ್ತಿ-6000 ಹೆಕ್ಟೇರ್, ಉದ್ದು-1300 ಹೆ. ಸೇರಿ ಒಟ್ಟು 30,300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ಪೈಕಿ ಈ ಬಾರಿ ಹಿಂಗಾರಿ ಹಂಗಾಮಿನಲ್ಲಿ 20ರಿಂದ 25 ಸಾವಿರ ಹೆಕ್ಟೇರ್‌ನಲ್ಲಿ ಹಿಂಗಾರಿ ಬೀಜಗಳಾದ ಕಡಲೆ, ಕುಸುಬೆ, ಜೋಳ, ಗೋದಿ ಬಿತ್ತನೆಗೆ ರೈತರು ಸಿದ್ಧತೆಯಲ್ಲಿದ್ದಾರೆ. ಆದರೆ, ಬುಧವಾರ ರಾತ್ರಿ ಇಡೀ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಹೊಲಗಳೆಲ್ಲಾ ನದಿಗಳಾಂತಾಗಿವೆ. ಹೊಲದಿಂದ ನೀರು ಹೊರ ಹಾಕುವುದೇ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬುಧವಾರ ರಾತ್ರಿ ಅಣ್ಣಿಗೇರಿ ಪಟ್ಟಣ, ಸಾಸ್ವಿಹಳ್ಳಿ, ಸೈದಾಪುರ, ಮಜ್ಜಿಗುಡ್ಡ, ಕೊಂಡಿಕೊಪ್ಪ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದೆ. ಪರಿಣಾಮ ಹೊಲಗಳ ತುಂಬಾ ನೀರು ನಿಂತಿದೆ. ಗುರುವಾರ ಬೆಳಗ್ಗೆ ಹೊಲ ನೋಡಲು ಬಂದ ರೈತರು ಹೊಲ ಕೆರೆಯಂತಾಗಿರುವುದನ್ನು ನೋಡಿ ಹೌಹಾರಿದ್ದಾರೆ. ತುಪ್ಪದ ಕುರಹಟ್ಟಿ, ನ್ಯಾವಳ್ಳಿ, ಹಳ್ಳಿಕೇರಿ, ಶಲವಡಿ, ಬಸಾಪುರ ಪ್ರದೇಶದಲ್ಲಿ ಹಸಿ ಮಳೆಯಾಗಿದ್ದು, ಒಂದೆರಡು ದಿನಗಳಲ್ಲಿ ಹಿಂಗಾರಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಹೊಲಗಳಲ್ಲಿ ಸಮಸ್ಯೆ ಏನು?:
ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕಿನಲ್ಲಿ ಬಹುಸಂಖ್ಯಾತ ರೈತರು ಭೂಸುಧಾರಣೆಗೆ ಗಮನಹರಿಸುತ್ತಿಲ್ಲ.ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಮಾತ್ರ ಆದ್ಯತೆ ನೀಡುತ್ತಿದ್ದು, ಹಿಂಗಾರಿ ಬೆಳೆ ತೆಗೆದ ಮೇಲೆ ಹೊಲಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು, ತಗ್ಗುಪ್ರದೇಶ ಇದ್ದ ಕಡೆ ಮಣ್ಣು ಸಮತಟ್ಟು ಮಾಡಿ ಭಾರೀ ಮಳೆ ಸುರಿದಾಗ ಸಲೀಸಾಗಿ ನೀರು ಹರಿದು ಹೋಗುವಂತೆ ದಾರಿ ಮಾಡಬೇಕು, ಮಣ್ಣು ಪರೀಕ್ಷೆ ಸೇರಿ ಭೂ ಸುಧಾರಣೆಗೆ ಕೃಷಿ ಇಲಾಖೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಲಾಗಿದೆ. ಆದರೂ ಹೆಚ್ಚಿನ ಪ್ರಮಾಣದಲ್ಲಿ ರೈತರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಹೀಗಾಗಿ ದೊಡ್ಡ ಮಳೆ ಆದಾಗ ನೀರು ಹರಿದು ಹೋಗಲು ದಾರಿ ಇಲ್ಲದೇ ಸಮಸ್ಯೆ ಆಗುತ್ತಿದೆ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.
ಹಿಂಗಾರಿ ಬಿತ್ತನೆಗೆ ಸಾಕಷ್ಟು ಕಾಲಾವಕಾಶವಿದೆ. ಹೀಗಾಗಿ ರೈತರು ಬಿತ್ತನೆಗೆ ಕುರಿತಂತೆ ಆತಂಕಪಡುವುದು ಬೇಡ. ಆದ್ದರಿಂದ ದೀಪಾವಳಿ ಬಳಿಕವೂ ಮಳೆ ಬಿಡುವು ಕೊಟ್ಟ ಮೇಲೆ ಬಿತ್ತನೆ ಮಾಡಬಹುದು. ಸದ್ಯ ಮಳೆಯಿಂದ ಕೆರೆಯಂತಾದ ಹೊಲಗಳಿಂದ ನೀರು ಹೊರ ಹಾಕಿ ರೈತರು ಬಿತ್ತನೆಗೆ ಸಿದ್ಧಗೊಳಿಸಿಕೊಳ್ಳಬೇಕು ಎಂದು ಅಣ್ಣಿಗೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿ.ವಿ. ಗಡಾದ ಹೇಳಿದರು.ಮೆಕ್ಕೆಜೋಳದ ರಾಶಿ ಮಾಡುತ್ತಿದ್ದೇವೆ. ಆದರೆ ಬುಧವಾರ ರಾತ್ರಿ ಮಳೆಯಿಂದಾಗಿ ಹೊಲಗಳು ಅಕ್ಷರಶಃ ಕೆರೆಯಂತಾಗಿವೆ. ಗುರುವಾರ ಬೆಳಗ್ಗೆ ಹೋಗಿ ಹೊಲ ನೋಡಿದಾಗ ನೀರೆಲ್ಲಾ ಹೊರಗೆ ಹಾಕಿ ಬಿತ್ತಾಕ್ ಯಾವಾಗಪ್ಪ ಹೊಲ ರೆಡಿ ಮಾಡೂದು ಎಂಬುದು ಚಿಂತೆ ಆಗೈದ ಎಂದು ಅಣ್ಣಿಗೇರಿ ರೈತ ಮಹಾದೇವಪ್ಪ ಮಜ್ಜಿಗುಡ್ಡ ಹೇಳಿದರು.