ಪೊನ್ನಂಪೇಟೆ: ಪುನರ್‌ನಿರ್ಮಿತ ಶಾಫಿ ಜುಮಾ ಮಸೀದಿ ಲೋಕಾರ್ಪಣೆ ನಾಳೆಯಿಂದ

| Published : Jan 03 2025, 12:33 AM IST

ಪೊನ್ನಂಪೇಟೆ: ಪುನರ್‌ನಿರ್ಮಿತ ಶಾಫಿ ಜುಮಾ ಮಸೀದಿ ಲೋಕಾರ್ಪಣೆ ನಾಳೆಯಿಂದ
Share this Article
  • FB
  • TW
  • Linkdin
  • Email

ಸಾರಾಂಶ

ಪೊನ್ನಂಪೇಟೆ ಶಾಫಿ ಜುಮಾ ಮಸೀದಿ ಆಧುನಿಕ ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯ ಮಸೀದಿಯಾಗಿ ಪುನರ್‌ ನಿರ್ಮಾಣಗೊಂಡಿದ್ದು, ಶನಿವಾರ ಲೋಕಾರ್ಪಣೆಗೊಳ್ಳಲಿದೆ. ನೂತನ ಮಸೀದಿಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಶನಿವಾರದಿಂದ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸುಮಾರು ಎರಡು ಶತಮಾನಗಳಷ್ಟು ಹಳೆಯ ಪೊನ್ನಂಪೇಟೆ ಶಾಫಿ ಜುಮಾ ಮಸೀದಿ ಆಧುನಿಕ ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯ ಮಸೀದಿಯಾಗಿ ಪುನರ್‌ ನಿರ್ಮಾಣಗೊಂಡಿದ್ದು, ಶನಿವಾರ ಲೋಕಾರ್ಪಣೆಗೊಳ್ಳಲಿದೆ. ನೂತನ ಮಸೀದಿಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಶನಿವಾರದಿಂದ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಲೋಕಾರ್ಪಣೆಗೆ ಮುನ್ನುಡಿಯಾಗಿ ನಡೆದ ನೂತನ ಮಸೀದಿಗೆ ಸಾರ್ವಜನಿಕ ಮಹಿಳೆಯರ ಸಂದರ್ಶನ ಕಾರ್ಯಕ್ರಮ ನಡೆಯಿತು.

ಪೊನ್ನಂಪೇಟೆ ತ್ಯಾಗರಾಜ ರಸ್ತೆಯಲ್ಲಿರುವ ನೂತನ ಶಾಫಿ ಜುಮಾ ಮಸೀದಿ ನೆಲ ಮತ್ತು ಪ್ರಥಮ ಅಂತಸ್ತುಗಳನ್ನು ಹೊಂದಿದೆ. ಒಟ್ಟು 8,600 ಚ.ಅ. ಅಗಲದ ಮಸೀದಿಯನ್ನು 600 ಮಂದಿ ಏಕಕಾಲದಲ್ಲಿ ನಮಾಜು ಮಾಡಲು ಸಾಧ್ಯವಾಗುವಂತೆ ನಿರ್ಮಿಸಲಾಗಿದೆ. ನೆಲ್ಯಹುದಿಕೇರಿಯ ಇಂಜಿನಿಯರ್ ಮೊಹಿಮೀನ್ ಈ ಮಸೀದಿಯ ನೀಲನಕಾಶೆ ತಯಾರಿಸಿದರೆ, ನೆಲ್ಯಹುದಿಕೇರಿಯ ಸಿವಿಲ್ ಗುತ್ತಿಗೆದಾರರಾದ ಅಶ್ರಫ್ (ಕುಂಜ್ಹನ್) ಮಸೀದಿ ನಿರ್ಮಾಣದ ಕೆಲಸ ನಿರ್ವಹಿಸಿದ್ದಾರೆ.

2020ರಿಂದ ಆರಂಭಗೊಂಡು ಕಳೆದ 44 ತಿಂಗಳುಗಳಿಂದ ನಿರಂತರವಾಗಿ ನಡೆದ ಈ ಮಸೀದಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದ ಕೆಲಸಗಳು ಭರದಿಂದ ಸಾಗುತ್ತಿದೆ. ಆವರಣ ಗೋಡೆ ನೂತನವಾಗಿ ನಿರ್ಮಿಸಲಾಗಿದೆ.

ವಿವಿಧ ಕಾರ್ಯಕ್ರಮಗಳು:

ಶನಿವಾರ ಅಪರಾಹ್ನ 3ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷ, ಪ್ರಸಿದ್ಧ ವಿದ್ವಾಂಸ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ನೂತನ ಮಸೀದಿ ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯ ಕೊಡಗಿನ ಎಡಪಾಲದ ಅಬ್ದುಲ್ಲಾ ಪೈಝಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎ.ಎಸ್. ಪೊನ್ನಣ್ಣ ಭಾಗವಹಿಸಲಿದ್ದಾರೆ. ಹೆಸರಾಂತ ಧರ್ಮಗುರು ಯಾಹ್ಯ ಬಾಖವಿ ಪ್ರಧಾನ ಭಾಷಣ ಮಾಡಲಿದ್ದಾರೆ.

ಭಾನುವಾರ ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಧರ್ಮಗುರು ಝಯಾದ್ ದಾರಿಮಿ ಪ್ರಧಾನ ಭಾಷಣ ಮಾಡಲಿದ್ದು, ಅಂದು ರಾತ್ರಿ ಅನ್ವರ್ ಅಲಿ ಹುದವಿ ಅವರ ನೇತೃತ್ವದಲ್ಲಿ ಇಶ್ಕ್ ಮಜ್ಲೀಸ್ ಜರುಗಲಿದೆ. ಜ. 6ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ಪಾಣಕ್ಕಾಡಿನ ಸೈಯದ್ ಮೊಯೀನ್ ಅಲಿ ಶಿಹಾಬ್ ತಂಗಳ್ ಉದ್ಘಾಟಿಸಲಿದ್ದಾರೆ. ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಪತ್ತಾನಾಪುರಂ ಸಮಾರೋಪ ಭಾಷಣ ಮಾಡಲಿದ್ದಾರೆ.

ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಡಿ.ಎಚ್ ಸೂಫಿ ಹಾಜಿ, ಗೋಣಿಕೊಪ್ಪ ಜುಮಾ ಮಸೀದಿಯ ಖತೀಬ ಮೊಹಮ್ಮದ್ ಆಲಿ ಫೈಝಿ, ಜಿಲ್ಲಾ ಎಸ್. ಕೆ.ಎಸ್. ಎಸ್. ಎಫ್. ಪ್ರಧಾನ ಕಾರ್ಯದರ್ಶಿ ರಫೀಕ್ ಬಾಖವಿ ಸೇರಿದಂತೆ ವಿವಿಧ ಮಸೀದಿಗಳ ಆಡಳಿತ ಮಂಡಳಿಯ ಅಧ್ಯಕ್ಷರು, ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಪ್ರಮುಖರು, ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಪೊನ್ನಂಪೇಟೆ ಶಾಪಿ ಜುಮಾ ಮಸೀದಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪಿ.ಎ.ಅಸೀಸ್ ತಿಳಿಸಿದ್ದಾರೆ.