ಮೇಲುಕೋಟೆ ಪಟ್ಟಾಭಿರಾಮನ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯ ವೈಭವ

| Published : Jan 23 2024, 01:48 AM IST

ಮೇಲುಕೋಟೆ ಪಟ್ಟಾಭಿರಾಮನ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯ ವೈಭವ
Share this Article
  • FB
  • TW
  • Linkdin
  • Email

ಸಾರಾಂಶ

ಮೇಲುಕೋಟೆ ಪುರಾತನ ಪಟ್ಟಾಭಿರಾಮನ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳ ವೈಭವ. ಸೀತಾಲಕ್ಷ್ಮಣ ಸಮೇತನಾದ ಶ್ರೀರಾಮಚಂದ್ರನಿಗೆ ಸೋಮವಾರ ಬೆಳಗ್ಗೆ ಎಣ್ಣೆಕಾಪ್ಪುಸೇವೆ, ಮಹಾಭಿಷೇಕ, ರಾಮತಾರಕಹೋಮ, ಮಹಾ ಮಂಗಳಾರತಿ ಶಾತ್ತುಮೊರೆ. ನಂತರ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ. ಆಚಾರ್ಯ ರಾಮಾನುಜ ದಿವ್ಯಕ್ಷೇತ್ರವಾದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯನ್ನು ಜಗತ್ತಿಗೆ ಪ್ರಕಾಶ ಪಡಿಸಿದ ಪ್ರತೀಕವಾದ ಪುನರ್ವಸು ಉತ್ಸವ ಜ.24ರಂದು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಸೋಮವಾರ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದ ಹಿನ್ನೆಲೆಯಲ್ಲಿ ಮೇಲುಕೋಟೆ ಪುರಾತನ ಪಟ್ಟಾಭಿರಾಮನ ಸನ್ನಿಧಿಯಲ್ಲಿ ವಿಶೇಷ ಪೂಜಾಕೈಂಕರ್ಯಗಳು ವೈಭವದಿಂದ ನೆರವೇರಿತು.

ಭಾರತೀಯ ಬಹುಸಂಖ್ಯಾತ ಹಿಂದೂಗಳ 500 ವರ್ಷಗಳ ಬಯಕೆ ಸಾಕಾರವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಶಯ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಮೇಲುಕೋಟೆಯಲ್ಲೂ ಪೂಜಾ ಕೈಂಕರ್ಯಗಳು ನೆರವೇರಿದವು. ಸುಮಾರು 800 ರಾಮನ ಸನ್ನಿಧಿಯಲ್ಲಿ ಸಡಗರ ಸಂಭ್ರಮದಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸೀತಾಲಕ್ಷ್ಮಣ ಸಮೇತನಾದ ಶ್ರೀರಾಮಚಂದ್ರನಿಗೆ ಸೋಮವಾರ ಬೆಳಗ್ಗೆ ಎಣ್ಣೆಕಾಪ್ಪುಸೇವೆ, ಮಹಾಭಿಷೇಕ, ರಾಮತಾರಕಹೋಮ, ಮಹಾ ಮಂಗಳಾರತಿ ಶಾತ್ತುಮೊರೆ. ನಂತರ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ರಾತ್ರಿರಾಮನ ದೇಗುದಲ್ಲಿ ದೀಪೋತ್ಸವ ಸಹ ನೆರವೇರಿತು. ಪಂಚ ಭಾಷಾಕವಿತಾವಲ್ಲಭ ವಿದ್ವಾನ್ ಅರೆಯರ್ ಶ್ರೀರಾಮಶರ್ಮ ನೇತೃತ್ವದಲ್ಲಿ ಅರ್ಚಕ ಅರೆಯರ್ ಪಾರ್ಥಸಾರಥಿ ಕೈಂಕರ್ಯ ನೆರವೇರಿಸಿದರು. ರಾಮಪ್ರಿಯ ಭಟ್ಟರ್ ಅಭಿಷೇಕ ನೆರವೇರಿಸಿದರೆ ಗ್ರಾಮದ ಯುವಕರು ಮುಂದೆ ನಿಂತು ಭಕ್ತರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದರು.

ಶ್ರೀರಾಮಬಾಣಬಿಟ್ಟು ಸೀತಾಮಾತೆಗೆ ನೀರು ತರಿಸಿದ ಧನುಷ್ಕೋಟಿ ಕಲ್ಯಾಣಿಯ ಬಳಿಯ ಸೀತಾರಣ್ಯ ಹಾಗೂ ಒಕ್ಕಲಿಗರ ಬೀದಿಯಲ್ಲಿರುವ ರಾಮ ಮಂದಿರದಲ್ಲೂ ವಿಶೇಷಪೂಜಾ ಕೈಂಕರ್ಯಗಳು ನೆರವೇರಿದವು. ಪಟ್ಟಾಭಿರಾಮನ ಸನ್ನಿಧಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮಶೇಖರ್, ಮೇಲುಕೋಟೆ ಶಕ್ತಿಕೇಂದ್ರ ಪ್ರಮುಖ ಎಂಕೆ ಮುರಳೀಧರ, ಪಾಂಡವಪುರ ರಾಜೀವ್ ಆಗಮಿಸಿ ರಾಮಚಂದ್ರನ ದರ್ಶನ ಪಡೆದರು.

ಬನ್ನಿಮಂಟಪದ ಬಳಿಯ ಕಾರ್ಯಸಿದ್ಧಿ ವೀರಾಂಜನೇಯಸ್ವಾಮಿ ದೇವಾಲಯ ಹಾಗೂ ಪೇಟೆ ಆಂಜನೇಯಸ್ವಾಮಿ ದೇವಾಲಯಗಳಲ್ಲೂ ಸಹ ಅಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆದವು ನೂರಾರು ಭಕ್ತರಿಗೆ ಪಾನಕ ಕೋಸಂಬರಿ ವಿತರಿಸಲಾಯಿತು.

ಮೇಲುಕೋಟೆಯಲ್ಲಿ ನಾಳೆ ಪುನರ್ವಸು ಉತ್ಸವಆಚಾರ್ಯ ರಾಮಾನುಜ ದಿವ್ಯಕ್ಷೇತ್ರವಾದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯನ್ನು ಜಗತ್ತಿಗೆ ಪ್ರಕಾಶ ಪಡಿಸಿದ ಪ್ರತೀಕವಾದ ಪುನರ್ವಸು ಉತ್ಸವ ಜ.24ರಂದು ನಡೆಯಲಿದೆ.ಕಗ್ಗತ್ತಲ ಕಾಡಿನ ಮಧ್ಯೆ ಹುತ್ತ ಕರಗಿಸಿ ಚೆಲುವನಾರಾಯಣಸ್ವಾಮಿ ದಿವ್ಯಮಂಗಳ ರೂಪವನ್ನು ಮಕರ ಶುಕ್ಲ ಪುನರ್ವಸು ನಕ್ಷತ್ರದಂದು ಜಗತ್ತಿಗೆ ಪ್ರಕಾಶ ಪಡಿಸಿದ್ದರು. ಈ ಕಾರಣ ಪ್ರತಿವರ್ಷ ತೈ ಪುನರ್ವಸು ಉತ್ಸವ ನಡೆಯುತ್ತಾ ಬಂದಿದೆ.ಮೇಲಕೋಟೆ ದೇವಾಲಯದಲ್ಲಿ ಇಡೀ ದಿನ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ. ಶ್ರೀ ಭಾಷ್ಯಕಾರಸನ್ನಿಧಿ ವಂಗೀಪುರಂ ನಂಬಿ ಮನೆತನ ಪ್ರತಿವರ್ಷ ಈ ಮಹೋತ್ಸವವನ್ನು ವೈಭವದಿಂದ ನಡೆಸಿಕೊಂಡು ಬರುತ್ತಿದೆ. ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ ಆನಂದಾಳ್ವಾರ್ ನೇತೃತ್ವದಲ್ಲಿ ಉತ್ಸವದ ಕೈಂಕರ್ಯಗಳು ನಡೆಯಲಿವೆ. ಪುನರ್ವಸು ಉತ್ಸವಕ್ಕಾಗಿ ದೇವಾಲಯ ಸಜ್ಜುಗೊಳ್ಳುತ್ತಿದೆ.ಜ.24ರ ಬೆಳಗ್ಗೆ 4 ಗಂಟೆಗೆ ರಾಮಾನುಜರಿಗೆ ಅಭಿಷೇಕ 6 ಗಂಟೆಗೆ ಕಲ್ಯಾಣಿಗೆ ಉತ್ಸವ 8-30ಕ್ಕೆ ಶ್ವೇತವಸ್ತ್ರಧಾರಣೆ ಗಧ್ಯತ್ರಯಗೋಷ್ಟಿ ತಿರುಪ್ಪಾವೈ ಶಾತ್ತುಮೊರೆ ನಡೆದು 9 ಗಂಟೆಗೆ ದೇವಾಲಯಕ್ಕೆ ರಾಮಾನುಜರ ಉತ್ಸವ ಆರಂಭವಾಗಲಿದೆ.11 ಗಂಟೆಗೆ ದೇವಾಲಯದ ರಾಜಗೋಪುರದ ಬಳಿ ರಾಮಾನುಜ ನೂತ್ತಂದಾದಿ ಶಾತ್ತುಮೊರೆ "ರಾಮಾನುಜರು ತಿರುನಾರಾಯಣನನ್ನು ಕಂಡು ನಿಜವಾದ ಬೆಳಕುಕಂಡೆ ನಾರಾಯಣನ ದರ್ಶನ ಮಾಡಿದೆ ಎಂದು ಸ್ತುತಿಸಿದ ಪಾಶುರದ ಪಾರಾಯಣ ನಡೆಯಲಿದೆ.12 ಗಂಟೆಗೆ ವಂಗೀಪುರಂ ಮನೆತನದಿಂದ ಸ್ವಾಮಿಗೆ ನೂರಾರು ತಟ್ಟೆಗಳಲ್ಲಿ ಫಲಪುಷ್ಪ ಸಮರ್ಪಣೆಯ ಕೈಂಕರ್ಯ ನಡೆಯಲಿದೆ. 1.30ರ ವೇಳೆಗೆ ತಿರುವಾರಾಧನೆ, ತೀರ್ಥಗೋಷ್ಠಿಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ರಾತ್ರಿ ಪೂಜೆಯ ನಂತರ ರಾಮಾನುಜರ ಉತ್ಸವ ಸ್ವಸ್ಥಾನಕ್ಕೆ ತಲುಪಲಿದೆ.