ಸಾರಾಂಶ
-ಕೊಡೇಕಲ್ ಬಸವಸಾಗರ ಜಲಾಶಯ ಭರ್ತಿ । ಜಿಲ್ಲಾ ಉಸ್ತುವಾರಿ ಸಚಿವರಿಂದ ಜಲಾಶಯಕ್ಕೆ ವಿಶೇಷ ಪೂಜೆ । ಬಾಗಿನ ಸಮರ್ಪಣೆ
------ಕನ್ನಡಪ್ರಭ ವಾರ್ತೆ ಯಾದಗಿರಿ, ಕೊಡೇಕಲ್
ಈ ಬಾರಿ ಮುಂಗಾರು ಉತ್ತಮವಾಗಿದ್ದು, ಗಂಗೆ ನಮ್ಮೆಲ್ಲರ ಮೇಲೆ ದಯೆ ತೋರಿದ್ದರಿಂದ ರೈತರಲ್ಲಿ ಮತ್ತು ಜನರಲ್ಲಿದ್ದ ಆತಂಕ ದೂರ ಮಾಡಿದ್ದಾಳೆ. ಕುಡಿವ ನೀರಿಗಾಗಿ, ರೈತರ ಜಮೀನುಗಳಿಗೆ, ಹಾಗೂ ನೀರಾವರಿಗಾಗಿ ನೀರನ್ನು ಕಾಲುವೆಗಳ ಮೂಲಕ ಹರಿಸಲಾಗುತ್ತಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ಕೊಡೇಕಲ್ ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾದ ಹಿನ್ನೆಲೆ ಜಿಲ್ಲೆಯ ಉಸ್ತುವಾರಿ ಸಚಿವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಮುಂಗಾರು ಆರಂಭದಿಂದ ಇಲ್ಲಿಯವರೆಗೆ ಉತ್ತಮ ಮಳೆಯಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಜಲಾಶಯ ಭರ್ತಿಯಾಗಿದ್ದು, ಇನ್ನಷ್ಟು ಮಳೆಯಾದಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ನೀರು ಒದಗಿಸಬಹುದಾಗಿದೆ, ಜೊತೆಗೆ ಜಲಾಶಯಕ್ಕೆ ಸತತ ಒಳಹರಿವು ಬರುತ್ತಿರುವುದರಿಂದ ಕಾಲುವೆಗಳ ಮುಖಾಂತರ ನೀರು ಹರಿಸುವುದನ್ನು ಸಹ ಆರಂಭಿಸಲಾಗಿದೆ ಎಂದರು.
----------ಬಾಕ್ಸ್---------ರಾಜ್ಯೋತ್ಸವಕ್ಕೆ ಬೂದಿಹಾಳ-ಪೀರಾಪುರ ಯೋಜನೆ ಲೋಕಾರ್ಪಣೆ
ಬೂದಿಹಾಳ-ಪೀರಾಪುರ ಏತ ನೀರಾವರಿ ಕಾಮಗಾರಿಯು ಕೊನೆಯ ಹಂತದಲ್ಲಿದ್ದು, ಬರುವ ರಾಜ್ಯೋತ್ಸವಕ್ಕೆ ಲೋಕಾರ್ಪಣೆಗೊಂಡು ರೈತರ ಜಮೀನುಗಳಿಗೆ ನೀರು ತಲುಪಲಿದೆ ಎಂದು ಸಚಿವ ದರ್ಶನಾಪುರ ಹೇಳಿದರು.ಕಾಮಗಾರಿಯು ಗುಣಮಟ್ಟದಿಂದ ನಡೆಯುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಿಳಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ನೀರು ಪೋಲಾಗುವಿಕೆಯನ್ನು ತಡೆಗಟ್ಟಲು ಯೋಜನೆ ರೂಪಿಸಲಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ಇದರಿಂದ 20 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗಲಿದ್ದು, ಜಿಲ್ಲೆಯ ಸುರಪುರ ತಾಲೂಕಿನ ಬರಪೀಡಿತ ಹಳ್ಳಿಗಳು ಹಾಗೂ 17 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ಸಹಾಯಕವಾಗಲಿದೆ ಎಂದರು. ಈ ಯೋಜನೆ ಎರಡು ಹಂತದಲ್ಲಿದ್ದು, ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಈಗಾಗಲೇ ನಾರಾಯಣಪುರದ ಜಲಾಶಯದಿಂದ ನೀರನ್ನು ಹರಿಬಿಟ್ಟು ಪರೀಕ್ಷಿಸಲಾಗಿದ್ದು ಸಫಲತೆ ಕಂಡಿದೆ ಎಂದರು.
ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ಮುದ್ದೇಬಿಹಾಳ ಶಾಸಕ ಸಿ.ಎಸ್ ನಾಡಗೌಡ, ಶರಣಗೌಡ ಬಯ್ಯಾಪುರ, ಜಿಲ್ಲಾಧಿಕಾರಿ ಡಾ.ಸುಶೀಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಕೆ.ಬಿ.ಜೆ.ಎನ್.ಎಲ್ ಮುಖ್ಯ ಅಭಿಯಂತರರಾದ ಆರ್. ಮಂಜುನಾಥ, ಅಧೀಕ್ಷಕ ಅಭಿಯಂತರ ರಮೇಶ ಜಿ. ರಾಠೋಡ್, ಕಾರ್ಯನಿರ್ವಾಹಕ ಅಭಿಯಂತರರಾದ ಸುರೇಂದ್ರ ರೆಡ್ಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿದ್ಯಾಧರ, ವಿಜಯ್‌ಕುಮಾರ ಅರಳಿ ಸೇರಿದಂತೆ, ನಿಗಮದ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.-----
ಫೋಟೋ: 20ವೈಡಿಆರ್8 :ಕೊಡೇಕಲ್ ಸಮೀಪದ ಬಸವಸಾಗರ ಜಲಾಶಯ ಭರ್ತಿ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.