ಕರಸೇವೆ ಸಂದರ್ಭ ಲಾಠಿಯೇಟನ್ನು ಅನುಭವಿಸಿದ್ದೆ...

| Published : Jan 19 2024, 01:46 AM IST

ಸಾರಾಂಶ

ಅಂದು ಬೀಳುತ್ತಿದ್ದ ಒಂದೊಂದು ಏಟೂ ಮೈಗೆ ನೋವು ಮೂಡಿಸುತ್ತಿದ್ದರೆ, ಇಂದು ಆ ಏಟು ಪುಷ್ಪ ವೃಷ್ಟಿಯಂತೆ ಭಾಸವಾಗುತ್ತಿದೆ ಎಂದು ಹಿರಿಯ ಸಾಮಾಜಿಕ ಮುಂದಾಳು ಕೊಕ್ಕಡದ ಪೂವಾಜೆ ಕುಶಾಲಪ್ಪ ಗೌಡ ತನ್ನ ಅಯೋಧ್ಯಾ ಕರಸೇವಾ ಅನುಭವನ್ನು ಹಂಚಿಕೊಂಡಿದ್ದಾರೆ.

ಉಪ್ಪಿನಂಗಡಿ: ಶ್ರೀ ರಾಮ ಮಂದಿರದ ಪುನರ್ ನಿರ್ಮಾಣಕ್ಕಾಗಿ ಅದೆಷ್ಟೋ ಮಂದಿ ಪ್ರಾಣ ತ್ಯಾಗ ಮಾಡಿದ್ದರು. ನಾನು ಕರಸೇವೆಯಲ್ಲಿ ಭಾಗವಹಿಸಲು ಹೋಗಿ ಹಿಂಸೆಗೆ ಸಿಲುಕಿ ಸಂಕಷ್ಟ ಎದುರಾಗಿತ್ತು. ಅಂದು ಬೀಳುತ್ತಿದ್ದ ಒಂದೊಂದು ಏಟೂ ಮೈಗೆ ನೋವು ಮೂಡಿಸುತ್ತಿದ್ದರೆ, ಇಂದು ಆ ಏಟು ಪುಷ್ಪ ವೃಷ್ಟಿಯಂತೆ ಭಾಸವಾಗುತ್ತಿದೆ ಎಂದು ಹಿರಿಯ ಸಾಮಾಜಿಕ ಮುಂದಾಳು ಕೊಕ್ಕಡದ ಪೂವಾಜೆ ಕುಶಾಲಪ್ಪ ಗೌಡ ತನ್ನ ಅಯೋಧ್ಯಾ ಕರಸೇವಾ ಅನುಭವನ್ನು ಹಂಚಿಕೊಂಡಿದ್ದಾರೆ.

ಅದು ಅಯೋಧ್ಯಾ ಚಳುವಳಿಯ ಕೊನೆಯ ಕರಸೇವೆ. ೨೦೦೨ರ ಅವಧಿ. ಪ್ರಾಯಶಃ ನಾವು ಹಿಂತಿರುಗಿದ ಬಳಿಕ ಗೋದ್ರಾ ಘಟನೆ ಸಂಭವಿಸಿರಬೇಕು. ಮಂಗಳೂರಿನಿಂದ ಪ್ರತಾಪಸಿಂಹ ನಾಯಕ್ ನೇತೃತ್ವದ ೨೫೦ ಮಂದಿ ಕರಸೇವಕರ ತಂಡದಲ್ಲಿ ನಾನೂ ಓರ್ವನಾಗಿದ್ದೆ. ನಮ್ಮ ತಂಡ ರೈಲಿನಲ್ಲಿ ಲಕ್ನೋ ತಲುಪಿತ್ತು. ಯಾವುದೋ ಸ್ಥಳೀಯ ಘಟನೆಯನ್ನಾಧರಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಇದು ಮಹಾರಾಷ್ಟ್ರದಿಂದ ಆಗಮಿಸಿದ್ದ ಕರಸೇವಕರನ್ನು ಕೆರಳಿಸಿತ್ತು. ಅವರು ದಾಂಧಲೆ ನಿರತರಾಗಿ ಕಲ್ಲು ತೂರಾಟ ನಡೆಸಿದರು. ಅಲ್ಲಿನ ಸಂಸದರಿಗೂ ಕಲ್ಲೇಟು ತಗುಲಿತ್ತು. ಈ ವೇಳೆ ಅಷ್ಟ ದಿಕ್ಕುಗಳಿಂದಲೂ ಬಂದ ಪೊಲೀಸ್ ಹಾಗೂ ಅರೆ ಸೇನಾಪಡೆ ಉದ್ರಿಕ್ತರನ್ನು ಚದುರಿಸಲು ಕಾರ್ಯಾಚರಣೆಗೆ ಇಳಿದಿತ್ತು. ನಮ್ಮ ತಂಡ ಶಾಂತಿಯುತವಾಗಿತ್ತಾದರೂ ಆಗಮಿಸಿದ ಪೊಲೀಸರಿಗೆ ನಮ್ಮ ನಿರಪರಾಧಿತನ ತಿಳಿದಿರಲಿಲ್ಲ. ಅವರ ಲಾಠಿಯೇಟಿಗೆ ನಾನು ಮೈಯೊಡ್ಡಿದ್ದೆ. ಶ್ರೀ ರಾಮ ನಾಮ ಸ್ಮರಣೆಯೊಂದಿಗೆ ಲಾಠಿಯೇಟನ್ನು ಅನುಭವಿಸಿದ್ದೆ. ೭ ದಿನಗಳ ಕಾಲ ನಮ್ಮನ್ನು ಎಪಿಎಂಸಿ ಯಾರ್ಡ್‌ವೊಂದರಲ್ಲಿ ಬಂಧಿಸಿಟ್ಟ ಅಲ್ಲಿನ ಸರ್ಕಾರ ಬಳಿಕ ಬಿಡುಗಡೆ ಮಾಡಿತ್ತು. ಶತಮಾನಗಳ ಹೋರಾಟದ ಬಳಿಕ ಇಂದು ಅಯೋಧ್ಯಾ ನಗರಿಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣಗೊಂಡು ಜನವರಿ ೨೨ರಂದು ಶ್ರೀ ರಾಮನ ಪ್ರಾಣಪ್ರತಿಷ್ಠಾ ಕಾರ್ಯ ನೆರವೇರಲಿರುವುದರಿಂದ ಅಂದಿನ ಘಟನೆಯನ್ನು ನೆನೆದಾಗ ಮನಸ್ಸು ಪುಳಕಿತಗೊಳ್ಳುತ್ತಿದೆ. ಶ್ರೀ ರಾಮನಿಗಾಗಿ ಸಂಕಷ್ಟಕ್ಕೆ ತುತ್ತಾಗುವ ಸೌಭಾಗ್ಯ ನನಗೂ ಒದಗಿಸಿದ್ದನಲ್ಲಾ ಎಂಬ ಧನ್ಯತಾ ಭಾವ ಮೂಡುತ್ತಿದೆ.

ಅಂದು ಲಾಠಿಯೇಟಿಗೆ ಸಿಲುಕಿದ ದೃಶ್ಯವನ್ನು ಅಲ್ಲಿನ ಪತ್ರಕರ್ತರೊಬ್ಬರು ಸೆರೆ ಹಿಡಿದು ಅಲ್ಲಿನ ಹಿಂದಿ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಈ ಪತ್ರಿಕೆಯು ನನ್ನ ರೈಲು ಪ್ರಯಾಣದ ವೇಳೆ ನಮ್ಮ ತಂಡದ ಸದಸ್ಯರಿಗೆ ದೊರಕಿದ್ದರಿಂದ ನಾನು ಪೊಲೀಸರಿಂದ ಲಾಠಿಯೇಟಿಗೆ ಸಿಲುಕುತ್ತಿರುವ ದೃಶ್ಯದ ನೆನಪನ್ನು ಇಂದಿಗೂ ಜೀವಂತವಿರಿಸಲು ಸಾಧ್ಯವಾಗಿದೆ ಎಂದು ಕುಶಾಲಪ್ಪ ಗೌಡಅನುಭ ಹಂಚಿಕೊಂಡಿದ್ದಾರೆ.