ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಇತ್ತೀಚೆಗೆ ಜಮ್ಮು ಕಾಶ್ಮೀರದ ಪೂಂಛ್‌ನಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮದ ಸೈನಿಕ ಪಳಂಗೋಟಿ ದಿವಿನ್ (28) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ನಿಧನರಾಗಿದ್ದಾರೆ.ಮಾಲಂಬಿ ಗ್ರಾಮದ ಪಳಂಗೋಟು ಪ್ರಕಾಶ್ ಮತ್ತು ಜಯ ದಂಪತಿಯ ಏಕೈಕ ಪುತ್ರನಾದ ದಿವಿನ್, 10 ವರ್ಷಗಳ ಹಿಂದೆ ಭಾರತೀಯ ಭೂ ಸೇನೆಗೆ ಸೇರಿದ್ದರು. ದಿವಿನ್ ಮರಾಠ ರೆಜಿಮೆಂಟ್‍ನಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು. ಕಳೆದ ಬುಧವಾರ ಬೆಳಗ್ಗಿನ ಜಾವ ಸೇನೆಯ ಮರಾಠ ರೆಜಿಮೆಂಟಿಗೆ ಸೇರಿದ ವಾಹನದಲ್ಲಿ ಯೋಧ ದಿವಿನ್ ಸೇರಿದಂತೆ 10 ಮಂದಿ ಯೋಧರು ಎಂದಿನಂತೆ ಪೆಟ್ರೊಲಿಂಗ್‍ಗೆ ತೆರಳುತ್ತಿದ್ದಾಗ ವಾಹನ ಜಮ್ಮು ಕಾಶ್ಮೀರದ ಪೂಂಚ್ ಬಳಿ ಪ್ರಪಾತಕ್ಕೆ ಉರುಳಿತ್ತು. ಈ ದುರಂತದಲ್ಲಿ ಈ ಹಿಂದೆ ಕರ್ನಾಟಕದ ಮೂವರು ಯೋಧರು ಸೇರಿದಂತೆ ಐವರು ಮೃತಪಟ್ಟಿದ್ದರು. ದಿವಿನ್ ಸೇರಿದಂತೆ 5 ಮಂದಿ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಉದಮಪುರದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.
ದಿವಿನ್ ತಾಯಿ ಜಯ ವಿಷಯ ತಿಳಿದು ಆಸ್ಪತ್ರೆ ತಲುಪಿದ್ದರು. ಅಮ್ಮನ ಕರೆಗೆ ದಿವಿನ್ ಹುಬ್ಬು ಹಾರಿಸಿ ಸ್ಪಂದಿಸಿದ್ದರು. ಆದರೆ ಶ್ವಾಸಕೋಶಕ್ಕೆ ತೀವ್ರ ಹಾನಿ ಆದ ಹಿನ್ನಲೆ ಧಿವಿನ್ ಕೊನೆಯುಸಿರು ಎಳೆದಿದ್ದಾರೆ.ತಂದೆ ತಾಯಿಗೆ ಏಕೈಕ ಮಗನಾಗಿದ್ದ ದಿವಿನ್ 10 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಇತ್ತೀಚೆಗೆ ಇವರ ವಿವಾಹ ನಿಶ್ಚಿತಾರ್ಥ ಕೂಡ ನೆರವೇರಿದ್ದು ಇದೇ ಫೆಬ್ರವರಿಯಲ್ಲಿ ದಿವಿನ್ ವಿವಾಹವಾಗಬೇಕಿತ್ತು. ಆದರೆ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಅದರಲ್ಲಿ ಇದ್ದ ನಾಲ್ವರು ಸೈನಿಕರು ಸ್ಥಳದಲ್ಲಿ ಸಾವನ್ನಪ್ಪಿದ್ದರು.
ಚಿಂತಾಜನಕ ಸ್ಥಿತಿಯಲ್ಲಿದ್ದ ದಿವಿನ್ ಚಿಕಿತ್ಸೆಗೆ ಸ್ಪಂದಿಸದೆ ಇದೀಗ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಅಪಘಾತದಲ್ಲಿ ಮೃತ ಕನ್ನಡಿಗರ ಸಂಖ್ಯೆ ನಾಲ್ಕಕ್ಕೆ ಏರಿದೆ.ಸಂತಾಪ: ದಿವಿನ್ ಚಿಕಿತ್ಸೆ ಸಂಬಂಧಿತ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೂಡ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ಶಿವಮೊಗ್ಗ ಮೂಲದ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದರು. ದಿವಿನ್ ನಿದಾನಕ್ಕೆ ಶಾಸಕ ಮಂತರ್ ಗೌಡ ಕಂಬನಿ ಮಿಡಿದಿದ್ದಾರೆ.