ಕೆ.ಆರ್.ಪೇಟೆ ತಾಲೂಕಿನಲ್ಲಿ 99 ನ್ಯಾಯಬೆಲೆ ಅಂಗಡಿಗಳಿದ್ದು ಇವುಗಳ ಮೂಲಕ ತಾಲೂಕಿನ ಲಕ್ಷಾಂತರ ಪಡಿತರ ಗ್ರಾಹಕರಿಗೆ ತಿನ್ನಲು ಯೋಗ್ಯವಲ್ಲದ ಸಾವಿರಾರು ಕ್ವಿಂಟಾಲ್ ರಾಗಿ ವಿತರಿಸಲಾಗಿದೆ ಪೂರೈಕೆಯಾಗಿರುವ ರಾಗಿಯಲ್ಲಿ ಕಲ್ಲು,ಮಣ್ಣು ಮತ್ತು ಧೂಳು ತುಂಬಿದ್ದು ಜಾನುವಾರುಗಳು ತಿನ್ನಲೂ ಅದು ಯೋಗ್ಯವಾಗಿಲ್ಲ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನಲ್ಲಿ ಗ್ರಾಹಕರಿಗೆ ಕಳಪೆ ಗುಣಮಟ್ಟದ ಪಡಿತರ ರಾಗಿ ವಿತರಿಸುತ್ತಿರುವುದರ ವಿರುದ್ಧ ತಾಲೂಕು ರೈತಸಂಘದ ನೂರಾರು ಕಾರ್ಯಕರ್ತರು ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿರುವ ಆಹಾರ ಇಲಾಖೆಯ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಿದರು.ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮತ್ತು ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ಆಹಾರ ಇಲಾಖೆಯ ಕಾರ್ಯಾಲಯಕ್ಕೆ ಆಗಮಿಸಿದ ರೈತರು ಇಲಾಖೆಯ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರಲ್ಲದೆ ಕಳಪೆ ರಾಗಿಯನ್ನು ಪ್ರದರ್ಶಿಸಿ ಕಳಪೆ ಆಹಾರ ಧಾನ್ಯ ಪೂರೈಕೆಯಾಗಲು ಕಾರಣಕರ್ತರಾದ ಅಧಿಕಾರಿಗಳು ಮತ್ತು ಪೂರೈಕೆ ಏಜೆನ್ಸಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಕಳಪೆ ರಾಗಿ ಪ್ರದರ್ಶಿಸಿ ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ತಾಲೂಕಿನಲ್ಲಿ 99 ನ್ಯಾಯಬೆಲೆ ಅಂಗಡಿಗಳಿದ್ದು ಇವುಗಳ ಮೂಲಕ ತಾಲೂಕಿನ ಲಕ್ಷಾಂತರ ಪಡಿತರ ಗ್ರಾಹಕರಿಗೆ ತಿನ್ನಲು ಯೋಗ್ಯವಲ್ಲದ ಸಾವಿರಾರು ಕ್ವಿಂಟಾಲ್ ರಾಗಿ ವಿತರಿಸಲಾಗಿದೆ ಪೂರೈಕೆಯಾಗಿರುವ ರಾಗಿಯಲ್ಲಿ ಕಲ್ಲು,ಮಣ್ಣು ಮತ್ತು ಧೂಳು ತುಂಬಿದ್ದು ಜಾನುವಾರುಗಳು ತಿನ್ನಲೂ ಅದು ಯೋಗ್ಯವಾಗಿಲ್ಲ ಎಂದು ದೂರಿದರು.ಜನ ಬಳಕೆಗೆ ಯೋಗ್ಯವಲ್ಲದ ರಾಗಿಯನ್ನು ಆಹಾರ ಇಲಾಖೆ ಖರೀದಿಸಿದ್ದಾದರೂ ಏಕೆ?, ಕಳಪೆ ರಾಗಿ ಏಜೆನ್ಸಿಯಿಂದ ಪೂರೈಕೆಯಾಗಿದೆಯಾ?, ಆಥವಾ ಇಲಾಖೆಗೆ ಹಸ್ತಾಂತರವಾದ ಅನಂತರ ಅದಕ್ಕೆ ಕಲ್ಲು ಮಣ್ಣು ಬೆರಸಲಾಗಿದೆಯಾ? ಎನ್ನುವುದರ ತನಿಖೆಯಾಗಬೇಕು. ಕಳಪೆ ರಾಗಿ ವಿತರಣೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕಳಪೆ ರಾಗಿ ಪೂರೈಕೆಯ ಹಿನ್ನೆಲೆಯಲ್ಲಿ ಇಂದು ರೈತರೊಂದಿಗೆ ಚರ್ಚಿಸುವುದಾಗಿ ಆಹಾರ ಇಲಾಖೆಯ ಅಧಿಕಾರಿಗಳು ಕಳೆದ ಶುಕ್ರವಾರ ರೈತಸಂಘಕ್ಕೆ ತಿಳಿಸಿದ್ದರು. ಆದರೆ ಇಂದು ಇಲಾಖೆಯ ಯಾವುದೇ ಅಧಿಕಾರಿ ಕಚೇರಿಗೆ ಬಂದು ಕಳಪೆ ರಾಗಿ ಪೂರೈಕೆಯ ಬಗ್ಗೆ ರೈತರ ದೂರು ಸ್ವೀಕರಿಸಿ ಪರಿಶೀಲನೆಗೆ ಮುಂದೆ ಬಂದಿಲ್ಲ. ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದು ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ನೀಡುವವರೆಗೆ ಸ್ಥಳದಿಂದ ಕದುಲುವುದಿಲ್ಲ ಎಂದು ಹೇಳಿ ಕಚೇರಿಯ ಒಳಗಿದ್ದ ಸಿಬ್ಬಂದಿಗೆ ದಿಗ್ಬಂಧನ ಹಾಕಿ ಧರಣಿ ಆರಂಭಿಸಿದರು.ಸ್ಥಳದಲ್ಲಿದ್ದ ಆಹಾರ ಇಲಾಖೆಯ ನಿರೀಕ್ಷಕ ಎಂ.ನಟರಾಜು ಮಾತನಾಡಿ, ಇದುವರೆಗೂ ಯಾವುದೇ ರೀತಿಯ ದೂರು ಬರದಂತೆ ಇಲಾಖೆ ಗುಣಮಟ್ಟದ ಪಡಿತರ ವಿತರಣೆ ಮಾಡಿದೆ. ಡಿಸಂಬರ್ ತಿಂಗಳಿನಲ್ಲಿ ಹಾಸನದ ಜಾವಗಲ್ ಗೋದಾಮಿನಿಂದ ನಮಗೆ ಪೂರೈಕೆಯಾಗಿರುವ ರಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ ಎನ್ನುವುದು ನಮ್ಮ ಅರಿವಿಗೆ ಬಂದಿದೆ. ಜನವರಿ 19ರ ಸೋಮುವಾರ ಇಲಾಖೆಯ ಉನ್ನತ ಅಧಿಕಾರಿಗಳು ಪಟ್ಟಣಕ್ಕೆ ಆಗಮಿಸಿ ರೈತರ ದೂರು ಪರಿಶೀಲನೆ ಮಾಡಿ ಮುಂದಿನ ಕ್ರಮ ವಹಿಸಲಿದ್ದಾರೆ. ಅಲ್ಲಿಯವರೆಗೆ ರೈತರು ತಮ್ಮ ಪ್ರತಿಭಟನೆ ಕೈಬಿಟ್ಟು ಸಹಕರಿಸುವಂತೆ ಕೋರಿದರು. ಪಟ್ಟಣ ಪೊಲೀಸ್ ನಿರೀಕ್ಷಕಿ ಸುಮಾರಾಣಿ ನೇತೃತ್ವದಲ್ಲಿ ಸಂಧಾನ ಸಭೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜನವರಿ 19ರ ಗಡುವು ನೀಡಿ ತಮ್ಮ ಪ್ರತಿಭಟನೆ ಹಿಂಪಡೆದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಮುದ್ದುಕುಮಾರ್, ಮಡುವಿನಕೋಡಿ ಪ್ರಕಾಶ್, ಕರೋಟಿ ತಮ್ಮಯ್ಯ, ಮರಡಹಳ್ಳಿ ರಾಮೇಗೌಡ, ನೀತಿಮಂಗಲ ಮಹೇಶ್, ಚೇತನ್ ಸೇರಿದಂತೆ ಹಲವರಿದ್ದರು.