ಸಾರಾಂಶ
ಬೆಳಗಾವಿ ನಗರದ ಗಣೇಶಪುರದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಬಿವಿಪಿ ನಿಲಯದ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಗಣೇಶಪುರದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ವಸತಿ ನಿಲಯದ ಎದುರು ಪ್ರತಿಭಟನೆ ನಡೆಸಿ ಬಿಸಿಎಂ ತಾಲೂಕು ಅಧಿಕಾರಿಗೆ ಮನವಿ ಸಲ್ಲಿಸಿದರು. ಮೂಲ ಸೌಕರ್ಯ ಕೊರತೆಯ ಕುರಿತು ತಡರಾತ್ರಿ ಎಬಿವಿಪಿಗೆ ಕರೆ ಬಂದ ಹಿನ್ನೆಲೆ ತಕ್ಷಣ ಕಾರ್ಯಕರ್ತರು ವಸತಿ ನಿಲಯಕ್ಕೆ ತೆರಳಿ ವೀಕ್ಷಣೆ ಮಾಡಿದಾಗ ಸಂದರ್ಭದಲ್ಲಿ ಅನ್ನದಲ್ಲಿ ಹುಳುಗಳು, ಸ್ವಾದವಿಲ್ಲದ ಆಹಾರ ನೀಡುತ್ತಿರುವುದು. ವಿದ್ಯಾರ್ಥಿಗಳಿಗೆ ನೀಡಬೇಕಾದ ದಿನಬಳಕೆಯ (ಕಿಟ್) ವಸ್ತುಗಳನ್ನು ವಿದ್ಯಾರ್ಥಿಗಳಿಗೆ ನೀಡದೆ ಈ ವಸ್ತುಗಳನ್ನು ಮೂಲ ಪ್ಯಾಕೆಜ್‌ನಿಂದ ತೆಗೆದು ಬೇರೆ ಕಡೆ ಸಾಗಿಸಲು ಬೇರೆ ಚೀಲಗಳಲ್ಲಿ ತುಂಬಿ ಸಾಗಿಸಲು ತಯಾರಿ ಮಾಡಿಕೊಂಡಿರುವುದು ಮತ್ತು ವಿದ್ಯಾರ್ಥಿಗಳು ತಮಗೆ ಬರಬೇಕಾದ ಸೌಲಭ್ಯಗಳ ಕುರಿತು ವಿಚಾರಿಸಿದಾಗ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಕಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಬಿಸಿಎಂ ತಾಲೂಕು ಅಧಿಕಾರಿ ಕೆ.ಬಿ. ದೇವಪ್ಪಗೋಳ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ವಸತಿ ನಿಲಯದಲ್ಲಿನ ಅವ್ಯವಹಾರದ ಕುರಿತು ಇಂಚಿಂಚು ಮಾಹಿತಿ ನೀಡಿದರು. ಬಳಿಕ ಅವ್ಯವಹಾರವನ್ನು ಅವರ ಸಮ್ಮುಖದಲ್ಲೇ ಬಯಲಿಗೆ ತರಲಾಯಿತು. ಸಕಾರಾತ್ಮಕವಾಗಿ ಸ್ಪಂದಿಸಿದ ತಾಲೂಕು ಅಧಿಕಾರಿಗಳು ತಕ್ಷಣವೇ ಈ ಅವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಂತರ ಈ ಪ್ರಕರಣ ಕುರಿತಂತೆ ಸೂಕ್ತ ತನಿಖೆ ನಡೆಸಿ ಇದಕ್ಕೆ ಸಂಬಂಧಪಟ್ಟ ತಪ್ಪಿತಸ್ತರನ್ನು ಕೆಲಸದಿಂದ ವಜಾಗೊಳಿಸಿ ಅವರ ವಿರುದ್ದ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ತಕ್ಷಣವೆ ಬೇಕಾದ ಮೂಲ ಸೌಕರ್ಯ ಒದಗಿಸಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ರೋಹಿತ್ ಉಮನಾಬಾದಿಮಠ, ಸಚಿನ ಹಿರೇಮಠ, ಸುರೇಶ ಜಂಗೋನಿ, ಪ್ರೀತಮ್ ಉಪ್ಪರಿ, ಪನಿರಾಘವೇಂದ್ರ ದೇಸಾಯಿ, ಯಲ್ಲಪ್ಪ ಬೊಮ್ಮನಳ್ಳಿ ಹಾಗೂ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.