ಸಾರಾಂಶ
ಆಹಾರ ಪದಾರ್ಥಗಳನ್ನು ರಸ್ತೆಯಲ್ಲಿಟ್ಟು ಇಂತಹ ಆಹಾರ ತಿನ್ನಲು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದರು
ಕೊಪ್ಪಳ: ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ, ತಿನ್ನಲು ಆಗುತ್ತಿಲ್ಲ ಎಂದು ಉಪಹಾರವನ್ನು ರಸ್ತೆಗಿಟ್ಟು ನಾಗರಿಕರು ಪ್ರತಿಭಟನೆ ನಡೆಸಿದರು.ಕಳೆದ ಒಂದು ವರ್ಷದಿಂದ ಈ ಕುರಿತು ಹೇಳಿದರೂ ಸರಿಯಾಗಿ ನೀಡುತ್ತಿಲ್ಲ. ಇಂದು ನೀಡಿರುವ ಇಡ್ಲಿ ಹುಳಿಯಾಗಿದೆ. ಆಲೂಬಾತ್ ನಲ್ಲಿ ಆಲೂ ಇಲ್ಲ ಎಂದು ಕಿಡಿಕಾರಿದರು.
ಆಹಾರ ಪದಾರ್ಥಗಳನ್ನು ರಸ್ತೆಯಲ್ಲಿಟ್ಟು ಇಂತಹ ಆಹಾರ ತಿನ್ನಲು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ಉತ್ತಮ ಆಹಾರ ನೀಡುತ್ತಿದ್ದರು. ಈಗ ಮಾತ್ರ ಕಳಪೆ ಆಹಾರ ನೀಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ನಮ್ಮನ್ನೇ ಹೆದರಿಸುತ್ತಾರೆ. ನಾವು ಇಂಥದ್ದನ್ನೇ ಕೊಡುವುದು, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ದಬಾಯಿಸುತ್ತಾರೆ ಎಂದು ಆರೋಪಿಸಿದರು.ಇಂದಿರಾ ಕ್ಯಾಂಟೀನ್ ಗೆ ಬಂದವರೆಲ್ಲರೂ ಸೇರಿ ಪ್ರತಿಭಟನೆ ನಡೆಸಿದರು. ಇಂಥ ಆಹಾರ ಕೊಡುವುದಾದರೇ ಬಂದ್ ಮಾಡಿ ಎಂದು ಆಗ್ರಹಿಸಿದರು.ಪ್ರತಿ ನಿತ್ಯವೂ ಬೇರೆ ಬೇರೇ ಆಹಾರ ತಯಾರು ಮಾಡಬೇಕು ಎನ್ನುವ ನಿಯಮ ಇದೆ. ಬೆಳಗ್ಗೆ ಉಪಹಾರ ಬೇರೆ, ಮಧ್ಯಾಹ್ನ ಊಟಕ್ಕೆ ಬೇರೆ ಎನ್ನುವ ನಿಯಮ ಇದೆ. ಆದರೆ, ಬೆಳಗ್ಗೆಯಿಂದ ರಾತ್ರಿಯವರೆಗೂ ಇಡ್ಲಿ, ಫಲಾವ್ ಮಾಡುತ್ತಾರೆ. ಅದ್ಯಾವುದು ಸಹ ತಿನ್ನಲು ಯೋಗ್ಯವಿರುವುದಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಪ್ರತಿಭಟನೆ ಕೈಬಿಡುವಂತೆ ಮಾಡಿದರು.