ಸಾರಾಂಶ
ಆನಂದಪುರ ಸಮೀಪದ ಲಕ್ಕವಳ್ಳಿ ಅಂಗನವಾಡಿ ಕೇಂದ್ರಕ್ಕೆ ಆಯ್ಕೆ ಮಾಡಿದ ಕಳಪೆ ಬೆಲ್ಲವನ್ನು ಪಾಲಕರು ಪರಿಶೀಲಿಸಿ ಅಂಗನವಾಡಿ ಕೇಂದ್ರದ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಆನಂದಪುರ
ಇಲ್ಲಿಗೆ ಸಮೀಪದ ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕವಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾ ಗುತ್ತಿದೆ ಎಂದು ಅಂಗನವಾಡಿ ಕೇಂದ್ರದ ಪಾಲಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.ರಾಜ್ಯ ಸರ್ಕಾರದಿಂದ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಆಹಾರದಿಂದ ಮಕ್ಕಳಿಗೆ ಯಾವುದೇ ಪೌಷ್ಟಿಕಾಂಶವು ದೊರೆಯುತ್ತಿಲ್ಲ. ಅಂಗನವಾಡಿ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರವನ್ನು ಪೂರೈಕೆ ಮಾಡಬೇಕೇ ಹೊರತು ಕಳೆಪೆ ಗುಣಮಟ್ಟದ ಆಹಾರ ನೀಡಬಾರದು. ಕಳಪೆ ಆಹಾರವನ್ನು ಮಕ್ಕಳು ಸೇವನೆ ಮಾಡುವುದರಿಂದ ಆರೋಗ್ಯದಲ್ಲಿ ಏರುಪೇರು ಸಂಭವಿಸುತ್ತದೆ ಎಂದು ಸ್ಥಳೀಯರು ದೂರಿದರಲ್ಲದೆ, ಬೆಳೆಯುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರವನ್ನು ನೀಡಲಾಗದಿದ್ದರೆ ಅಂಗನವಾಡಿಗಳಲ್ಲಿ ಬಂದ್ ಮಾಡಿ ಎಂದು ಪಾಲಕರು ಒತ್ತಾಯಿಸಿದರು.ಈ ಅಂಗನವಾಡಿ ಕೇಂದ್ರದಲ್ಲಿ 30 ಮಕ್ಕಳಿಗೆ ಆಹಾರ ಪೂರೈಕೆ ಮಾಡುತ್ತಿದ್ದು, ಇದರಲ್ಲಿ ಬೆಲ್ಲ, ರವೆ ಸಂಪೂರ್ಣ ಕಳಪೆಯಾಗಿದೆ. ಇವನ್ನು ತಿಂದಂತಹ ಮಕ್ಕಳು ಮನೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಬಡವರ ಮಕ್ಕಳ ಬಗ್ಗೆ ಇಂತಹ ನಿಲಕ್ಷ್ಯ ಸರಿಯಲ್ಲ, ಶಿಶುಅಭಿವೃದ್ಧಿ ಯೋಜನೆಯ ಇಲಾಖೆಯಿಂದ ಇಂತಹ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದು ಸರಿಯಲ್ಲ. ಉತ್ತಮ ಗುಣಮಟ್ಟದ ಆಹಾರವನ್ನು ನೀಡದೇ ಇದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಪಾಲಕರಾದ ದೀಪು ಲಕ್ಕವಳ್ಳಿ, ಶರತ್, ದರ್ಶನ್, ಪ್ರಶಾಂತ್, ಭರತ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಶಿಶುಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ ಗಂಗಾಬಾಯಿ ಮಾತನಾಡಿ, ಕಳಪೆ ಮಟ್ಟದ ಆಹಾರ ನೀಡುತ್ತಿರುವ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಕೂಡಲೇ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ತಪ್ಪಾಗದಂತೆ ಕ್ರಮ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.