ಅಂಗನವಾಡಿ ಮಕ್ಕಳಿಗೆ ಕಳಪೆ ಆಹಾರ ಪೂರೈಕೆ: ಶಾಸಕ ಸುರೇಶಗೌಡ

| Published : Sep 12 2024, 01:55 AM IST

ಅಂಗನವಾಡಿ ಮಕ್ಕಳಿಗೆ ಕಳಪೆ ಆಹಾರ ಪೂರೈಕೆ: ಶಾಸಕ ಸುರೇಶಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಅಂಗನವಾಡಿ ಮಕ್ಕಳಿಗೆ ಪೂರೈಸುತ್ತಿರುವ ಆಹಾರವು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶಗೌಡ ಆರೋಪಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ರಾಜ್ಯದ ಅಂಗನವಾಡಿ ಮಕ್ಕಳಿಗೆ ಪೂರೈಸುತ್ತಿರುವ ಆಹಾರವು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶಗೌಡ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅಂಗನವಾಡಿ ಮಕ್ಕಳಿಗೆ ಪೂರೈಸುತ್ತಿರುವ ಆಹಾರ ಅಪೌಷ್ಟಿಕತೆಯಿಂದ ಕೂಡಿದ್ದು, ಇದನ್ನು ಸಿಬಿಐ ತನಿಖೆಗೆ ನೀಡಬೇಕು. ಈ ಆಹಾರ ಪೂರೈಕೆಯಲ್ಲಿ ದೊಡ್ಡಮಟ್ಟದ ಹಣಕಾಸಿನ ಅವ್ಯವಹಾರ ನಡೆಯುತ್ತಿದೆ. ಸದ್ಯ ಪೂರೈಸುತ್ತಿರುವ ಆಹಾರವು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ ಇದನ್ನು ತಿನ್ನುತ್ತಿರುವ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದು, ಸಿಬಿಐ ಮೂಲಕ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಹಿಂದುಳಿದ ಮತ್ತು ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂದು ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ. ಇಂಥ ಮಕ್ಕಳಿಗೆ ಮನೆಯಲ್ಲಿ ಸಮರ್ಪಕವಾದ ಪೌಷ್ಟಿಕ ಆಹಾರ ಸಿಗುವುದಿಲ್ಲ ಎಂದು ಸರ್ಕಾರವೇ ಎಲ್ಲ ಪೌಷ್ಟಿಕ ಅಂಶಗಳು ಇರುವಂಥ ಆಹಾರವನ್ನು ತಯಾರು ಮಾಡಿ ಅವರಿಗೆ ಉಣ ಬಡಿಸಬೇಕು ಎಂಬ ಉದ್ದೇಶದಿಂದ ಮಹಿಳೆಯರು ಮತ್ತು ಮಕ್ಕಳಿಗೆ ಪೋಷಕಾಂಶ ಪೂರೈಸುವ ಯೋಜನೆಯನ್ನು ರೂಪಿಸಲಾಗಿತ್ತು ಎಂದರು.

ಮೊದಲು ಶಾಸಕರ ನೇತೃತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿತ್ತು. ಏಕೆಂದರೆ ಶಾಸಕರು ನಿತ್ಯವೂ ಜನರ ಜೊತೆಗೆ ಒಡನಾಟ ಇರುವುದರಿಂದ ಅವರಿಗೆ ಎಲ್ಲಿ ಸಮಸ್ಯೆಯಿದೆ, ಅದನ್ನು ಹೇಗೆ ಪರಿಹರಿಸಬೇಕು ಎನ್ನುವುದು ತಿಳಿದಿರುತ್ತದೆ. ಅವರು ಜನರಿಗೆ ಉತ್ತರದಾಯಿಗಳೂ ಹೌದು. ಆ ವ್ಯವಸ್ಥೆಯಿದ್ದಾಗ ಈ ಯೋಜನೆ ಅತ್ಯಂತ ಸಮರ್ಪಕವಾಗಿ ನಡೆಯುತ್ತಿತ್ತು. ಯಾವುದೇ ದೂರು ಇರಲಿಲ್ಲ ಎಂದರು.

ಈಗ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಾಸಕರ ನೇತೃತ್ವದ ಸಮಿತಿಯ ಹೊಣೆಯನ್ನು ಕಿತ್ತು ಹಾಕಿ ಕ್ರಿಸ್ಟಿ ಎಂಬ ಸಂಸ್ಥೆಗೆ ಈ ಯೋಜನೆಯನ್ನು ವಹಿಸಿಕೊಟ್ಟಿದೆ. ಅವರೇ ಎಲ್ಲ ವಸ್ತುಗಳನ್ನು ತರುತ್ತಾರೆ. ಅದನ್ನು ಎಂಎಸ್‌ಪಿಸಿಗೆ ಕೊಡುತ್ತಾರೆ. ಆ ಸಂಸ್ಥೆ ಕೇವಲ ಪೊಟ್ಟಣ ಕಟ್ಟಿಕೊಡುವ ಮಟ್ಟಕ್ಕೆ ಇಳಿದಿದೆ. ಇದು ತಿಂಗಳಿಗೆ ಒಂದು ತಾಲೂಕಿಗೆ 30 ಲಕ್ಷ ರು. ವಹಿವಾಟು ಇದೆ ಎಂದರು.

ಈಗ ಏನು ಸಮಸ್ಯೆಯಾಗಿದೆಯೋ ತಿಳಿಯದು. ಅಂಗನವಾಡಿ ಮಕ್ಕಳಿಗೆ ಆಹಾರ ಪೂರೈಕೆ ಆಗುತ್ತಿಲ್ಲ. ನನ್ನ ಹತ್ತಿರ ಈ ಯೋಜನೆಯ ಅನುಷ್ಠಾನದ ಅಧಿಕಾರಿಗಳು ಬರೆದ ಪತ್ರದ ದಾಖಲೆಯಿದೆ. ಅದನ್ನು ಇಟ್ಟುಕೊಂಡೇ ನಾನು ಮಾತನಾಡುತ್ತಿರುವೆ.ಈ ಅವ್ಯವಸ್ಥೆಇಂದ ಇಡೀ ಯೋಜನೆ ಹಳ್ಳ ಹಿಡಿದಿದೆ ಎಂಬುದನ್ನು ತೋರಿಸುತ್ತದೆ ಎಂದರು.ಇಲ್ಲಿ ಒಬ್ಬ ಮುಖ್ಯಮಂತ್ರಿ ಇದ್ದಾರೆ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಇನ್ನೂ ತೀರ್ಪು ಬಂದಿಲ್ಲ. ನಾವು ವಿರೋಧ ಪಕ್ಷದವರು ಮರ್ಯಾದೆಯಿಂದ ತೀರ್ಪು ಏನು ಬರುತ್ತದೆ ಎಂದು ಕಾಯುತ್ತಿದ್ದೇವೆ. ಆದರೆ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸುತ್ತಲೂ ಇರುವವರೇ ಟವಲ್ ಕೊಡವಿಕೊಂಡು ಸೀಟಿಗಾಗಿ ಟವಲ್ ಹಾಕಲು ಕಾಯುತ್ತಿದ್ದಾರೆ ಎಂದರು.

ಸಂಗೊಳ್ಳಿ ರಾಯಣ್ಣರನ್ನು ಅವರ ಪಕ್ಕದಲ್ಲಿ ಇದ್ದವರೇ ಹಿಡಿದುಕೊಟ್ಟರು ಎಂದು ಮುಖ್ಯಮಂತ್ರಿ ಹೇಳಿದ ನಂತರವೂ ಪ್ರತಿದಿನ ಒಬ್ಬ ಶಾಸಕ ನಾನೂ ಮುಖ್ಯಮಂತ್ರಿಯಾಗಲು ತಯಾರು ಎಂದು ಹೇಳುತ್ತಿದ್ದಾರೆ ಎಂದರೆ ಇದಕ್ಕಿಂತ ಹಾಸ್ಯಾಸ್ಪದ ಮತ್ತೊಂದಿಲ್ಲ ಎಂದರು.ರಾಜಕೀಯ ಎಷ್ಟು ಕೆಟ್ಟು ಹೋಗಿದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇರಲು ಸಾಧ್ಯವಿಲ್ಲ. ಇದು ಅವರ ಸರ್ಕಾರದ ಸಮಸ್ಯೆ ನನಗೆ ಏನೂ ಸಂಬಂಧವಿಲ್ಲ. ನಾನು ಇಲ್ಲಿ ರಾಜಕೀಯ ಮಾತನಾಡಲೂ ಬಂದಿಲ್ಲ. ರಾಜ್ಯದಲ್ಲಿ ಸರ್ಕಾರವನ್ನು ಬೀಳಿಸಲು ನಾವು ಯಾರೂ ಬೇಡ. ಅವರೇ ಬಿದ್ದು ಹೋಗುತ್ತಾರೆ. ನಾನು ಏಕೆ ಈ ವಿಚಾರ ಪ್ರಸ್ತಾಪ ಮಾಡಿದೆ ಎಂದರೆ ಸರ್ಕಾರದಲ್ಲಿ ಅಸ್ಥಿರತೆ ಇದ್ದರೆ ಅಧಿಕಾರ ಶಾಹಿ ಕೆಲಸ ಮಾಡುವುದಿಲ್ಲ. ನಮ್ಮ ಅಂಗನವಾಡಿ ಸಮಸ್ಯೆಗೂ ಸರ್ಕಾರದ ಅಸ್ಥಿರತೆಗೂ ನೇರವಾದ ಸಂಬಂಧವಿದೆ ಎಂದರು.

ಕಾಂಗ್ರೆಸ್‌ ಪಕ್ಷಕ್ಕೆ ಇಷ್ಟು ದೊಡ್ಡ ಬಹುಮತ ಕೊಟ್ಟ ಜನರು ಈಗ ಪಶ್ಚಾತ್ತಾಪ ಪಡುವಂತಾಗಿದೆ. ಇದು ಸರ್ಕಾರ ನಡೆಸುವ ರೀತಿಯೇ? ನನಗಂತೂ ಅರ್ಥವಾಗುತ್ತಿಲ್ಲ. ಇಷ್ಟು ಭ್ರಷ್ಟಾಚಾರ, ಇಷ್ಟು ಅದಕ್ಷತೆ, ಇಷ್ಟು ಬೇಜವಾಬ್ದಾರಿತನವನ್ನು ನಾನು ಎಂದೂ ನೋಡಿರಲಿಲ್ಲ. ಕೊನೆಯ ಪಕ್ಷ ಮಕ್ಕಳಿಗೆ ಸಕಾಲದಲ್ಲಿ ಆಹಾರ ಪೂರೈಸುವ ಯೋಗ್ಯತೆಯನ್ನೂ ಈ ಸರ್ಕಾರ ಉಳಿಸಿಕೊಂಡಿಲ್ಲ ಎಂದರು.ಟೆಂಡರ್ ಪಡೆದ ಸಂಸ್ಥೆ ಕಳೆದ ಆರು ತಿಂಗಳಿಂದ ಪೊಟ್ಟಣ ಕಟ್ಟಿದ ಎಂಎಸ್‌ಪಿಸಿ ಸಿಬ್ಬಂದಿಗೆ ಸಂಬಳ ಪಾವತಿ ಮಾಡಿಲ್ಲ. ಹೀಗಾಗಿ ಅವರೂ ಆ ಕೆಲಸ ಮಾಡುವುದನ್ನು ನಿಲ್ಲಿಸಿದ್ದಾರೆ. ಜತೆಗೆ ಹೆಸರುಕಾಳು, ತೊಗರಿ ಬೇಳೆ ಮುಂತಾದ ಪೌಷ್ಟಿಕ ಧಾನ್ಯಗಳನ್ನು, ಮಸಾಲೆ ಉಪ್ಪಿಟ್ಟಿನ ಮಿಶ್ರಣವನ್ನು ಪೂರೈಕೆ ಮಾಡಿಲ್ಲ. ಪೂರೈಸುವ ಆಹಾರದಲ್ಲಿ ಗುಣಮಟ್ಟವೂ ಇಲ್ಲ, ಪೋಷಕಾಂಶಗಳೂ ಇಲ್ಲ ಎಂದು ಅಧಿಕಾರಿಗಳು ದೂರುತ್ತಿದ್ದಾರೆ. ಇದು ಕೇವಲ. ತುಮಕೂರು ಜಿಲ್ಲೆಯ ಸಮಸ್ಯೆ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಇದೇ ಸ್ಥಿತಿಯಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಈ ಕಡೆ ಗಮನ ಹರಿಸಿ ವ್ಯವಸ್ಥೆಯಲ್ಲಿ ಆಗಿರುವ ಲೋಪವನ್ನು ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಇದು ಒಂದು ಬಹುಕೋಟಿ ಹಗರಣ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸರ್ಕಾರಕ್ಕೆ ಇಂಥ ಹಗರಣಗಳ ಕುರಿತು ವಿಚಾರಣೆ ಮಾಡಲು ಮನಸ್ಸು ಇಲ್ಲ. ಅವರು ಸೇಡಿನ ರಾಜಕಾರಣದಲ್ಲಿ ತೊಡಗಿದ್ದಾರೆ. ಅದಕ್ಕಾಗಿಯೇ ಇದನ್ನು ಲೋಕಾಯುಕ್ತರು ತನಿಖೆ ಮಾಡಿ ಈ ರಾಜ್ಯದ ಮಕ್ಕಳಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.

ಯಾವುದೇ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಹೀಗೆಯೇ ಅಗುತ್ತದೆ. ಅದನ್ನು ವಿಕೇಂದ್ರೀಕರಣ ಮಾಡಬೇಕು. ಮೊದಲಿನ ಹಾಗೆ ಶಾಸಕರ ನೇತೃತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಅದು ಸಮರ್ಪಕವಾಗಿ ಜಾರಿಯಾಗುತ್ತದೆ ಮಾತ್ರವಲ್ಲ. ಅದಕ್ಕೆ ಉತ್ತರದಾಯಿತ್ವವೂ ಬರುತ್ತದೆ ಎಂದರು.

ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಶಂಕರ್, ತಾಲೂಕು ಬಿಜೆಪಿ ಘಟಕದ ಉಪಾಧ್ಯಕ್ಷ ರಾಜಶೇಖರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಿದ್ದೇಗೌಡ ರಾಜ್ಯ ಕಾರ‍್ಯಕಾರಿಣಿ ಸದಸ್ಯ ಪ್ರಭಾಕರ ಉಪಸ್ಥಿತರಿದ್ದರು.

ಸಣ್ಣ ನಾಯಕರಿಗೆ ಸಿಎಂ ಆಗುವ ಕನಸು: ಈ ಸರ್ಕಾರದಲ್ಲಿ ಹೇಳುವವರೂ ಇಲ್ಲ ಕೇಳುವವರೂ ಇಲ್ಲ ಎನ್ನುವಂತಾಗಿದೆ. ಅಧಿಕಾರಕ್ಕಾಗಿ ಅವರು ಕಚ್ಚಾಡುತ್ತಿದ್ದಾರೆ. ಕಾಂಗ್ರೆಸ್‌ನ ಸಣ್ಣ ಪುಟ್ಟ ನಾಯಕರು ಕೂಡ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ನಿತ್ಯವೂ ಒಬ್ಬೊಬ್ಬರು ನವದೆಹಲಿಗೆ ಹೋಗಿ ಟವೆಲ್‌ ಹಾಕಿ ಬರುತ್ತಿದ್ದಾರೆ. ನಾನು ನನ್ನ ರಾಜಕೀಯ ಜೀವನದಲ್ಲಿ ಇಂಥ ತಮಾಷೆಯ ರಾಜಕೀಯ ಸನ್ನಿವೇಶವನ್ನು ಎಂದೂ ನೋಡಿರಲಿಲ್ಲ ಎಂದು ಶಾಸಕ ಸುರೇಶಗೌಡ ಹೇಳಿದರು.

ಮಕ್ಕಳಿಗೆ ಆಹಾರ ಕೊಡದ ಸ್ಥಿತಿ: ಸರ್ಕಾರದಲ್ಲಿ ಯಾವುದಕ್ಕೂ ದುಡ್ಡಿಲ್ಲ ಬರೀ ಗ್ಯಾರಂಟಿ ಯೋಜನೆಗಳು ಎಂದು ಬಾಯಿ ಬಡಿದುಕೊಂಡವರು. ಈಗ ಮಕ್ಕಳಿಗೂ ಆಹಾರ ಕೊಡದ ಸ್ಥಿತಿಗೆ ತಂದು ಈ ರಾಜ್ಯವನ್ನು ನಿಲ್ಲಿಸಿದ್ದಾರೆ. ಇದು ಪಾಪದ ಕೆಲಸ. ಗ್ರಾಮೀಣ ಪ್ರದೇಶದಲ್ಲಿ ಅನೇಕ ಮಕ್ಕಳಿಗೆ ಒಂದು ಹೊತ್ತಿನ ಊಟವೂ ಇರುವುದಿಲ್ಲ. ಅದಕ್ಕಾಗಿ ಇಂಥ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರಕ್ಕೆ ಬಹಳ ದೊಡ್ಡ ಆದ್ಯತೆ ಇರಬೇಕು. ಅದರಲ್ಲಿ ಕಿಂಚಿತ್ತೂ ಲೋಪವಾಗದಂತೆ ಎಲ್ಲ ಮಟ್ಟದ ಅಧಿಕಾರಿಗಳು ಗಮನ ಹರಿಸಬೇಕು. ತುಮಕೂರು ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದಾರೆ ನನಗಂತೂ ತಿಳಿಯದು. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್‌ಗಂತೂ ಏನೂ ಕಾಣುತ್ತಿಲ್ಲ, ಏನೂ ಕೇಳುತ್ತಿಲ್ಲ ನಮ್ಮ ಹಣೆಬರಹ ಎಂದು ಶಾಸಕ ಸುರೇಶಗೌಡ ಹೇಳಿದರು.