ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಕುಸಿದು ಬಿದ್ದ ಗೋಡೆಗಳು, ನೆರಿಕೆಯೊಳಗೆ ಹಸುಗೂಸು ತಬ್ಬಿ ಮಲಗಿದ್ದ ಬಾಣಂತಿ, ಮೋಟು ಗೋಡೆ ಮೇಲೆ ಅನಾಥರಂತೆ ನೇತಾಡುತ್ತಿದ್ದ ದೇವರ ಫೋಟೋಗಳು, ಮನೆಯೊಳಗಿನ ಕೆಸರಲ್ಲಿ ಚಿತ್ತಾರ ಮೂಡಿಸಿದ್ದ ಹೆಜ್ಜೆಗಳು, ಜಮೀನಿನ ಮಣ್ಣು ಸೇರಬೇಕಾಗಿದ್ದ ಯೂರಿಯಾ ರಸಗೊಬ್ಬರ ಗುಡಿಸಲಲ್ಲಿ ಕರಗಿರುವುದು, ಮುರಿದ ಹೆಂಚುಗಳೇ ಚಿಮಣಿಗಳಾಗಿ ಹೊಗೆ ಉಗುಳುತ್ತಿದ್ದುದು, ಮೂಗಿಗೆ ರಾಜುತ್ತಿದ್ದ ಕೊಳೆತ ವಸ್ತುಗಳು, ಕಂಬಗಳಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕೊಕ್ಕೆಗಳು..
ಸಂಸದ ಗೋವಿಂದ ಕಾರಜೋಳ ಶನಿವಾರ ಚಿತ್ರದುರ್ಗ ತಾಲೂಕಿನ ಓಬಣ್ಣನಹಳ್ಳಿಗೆ ಭೇಟಿ ನೀಡಿದಾಗ ಕಂಡು ಬಂದ ದೃಶ್ಯಗಳಿವು. ಒಂದರ್ಥದಲ್ಲಿ ಮುಳುಗಿದ ಊರಲ್ಲಿ ಪರಿಶಿಷ್ಟರ ಬದುಕು ತೇಲಿದ್ದ ದೃಶ್ಯವದು. ನಮ್ಮವರ ಬದುಕು ಇಷ್ಟೊಂದು ನಿಕೃಷ್ಟವಾಗಿದೇಯೇ ಎಂದು ಮಮ್ಮಲ ಮರುಗಿದ ಅವರು ಜೊತೆಗಿದ್ದ ಅಧಿಕಾರಿಗಳ ಮನದಲ್ಲಿ ಮಾನವೀಯ ನೆಲೆಗಳ ಹುಡುಕಾಡಿದರು.ಜೋಗಿಮಟ್ಟಿ ಗಿರಿಧಾಮದ ತಪ್ಪಲಿನಲ್ಲಿ ಪುಟ್ಟದಾಗಿ ಅರಳಿರುವ ಕಾಡು ಹೂ ಓಬಣ್ಣನಹಳ್ಳಿ. ಪರಿಶಿಷ್ಟರೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬಹುತೇಕರು ಕೃಷಿ ಕೂಲಿ ಕಾರ್ಮಿಕರಾಗಿದ್ದರೆ ಮತ್ತೊಂದಿಷ್ಟು ಮಂದಿ ಭೂಮಿ ನಚ್ಚಿ ಕೃಷಿ ಮಾಡುತ್ತಿದ್ದಾರೆ. ವಾರದ ಹಿಂದೆ ಸುರಿದ ಮಳೆಗೆ ಜೋಗಿಮಟ್ಟಿ ಗಿರಿಧಾಮದಿಂದ ಹಳ್ಳದ ಮೂಲಕ ಹರಿದು ಬಂದ ನೀರು ಊರಿಗೆ ನುಗ್ಗಿ ಅನಾಹುತ ಮಾಡಿತ್ತು. ಪ್ರತಿ ಮನೆಯಲ್ಲಿಯೂ ಮೊಳಕಾಲುದ್ದ ನೀರು ನಿಂತಿತ್ತು. ದವಸ-ಧಾನ್ಯ, ಮಕ್ಕಳು ಓದುವ ಪುಸ್ತಕ, ದಿನಸಿ ನೀರಿನಲ್ಲಿ ತೇಲಿ ಹೋಗಿತ್ತು. ಜೀವ ಉಳಿಸಿಕೊಳ್ಳಲು ಅಲ್ಲಿದ್ದ ಶಾಲೆಯನ್ನು ಮಹಿಳೆಯರು, ಮಕ್ಕಳು ಆಶ್ರಯಿಸಿದ್ದರು.
ಒಂದೇ ರಾತ್ರಿ ಹಳ್ಳಿಗೆ ನುಗ್ಗಿದ ನೀರು ಅವಾಂತರ ಸೃಷ್ಟಿಸಿತ್ತು. ತಮಗಿಷ್ಟ ಬಂದಂತೆ ಬದುಕು ಕಟ್ಟಿಕೊಂಡಿದ್ದ ಓಬಣ್ಣನ ಹಳ್ಳಿ ಮಂದಿ ಇದೀಗ ಹೊಸ ಜೀವನ ಕಟ್ಟಿ ಕೊಡುವಂತೆ ಸರ್ಕಾರದ ಕಡೆ ದೃಷ್ಠಿ ನೆಟ್ಟಿದ್ದಾರೆ.ಮೋದಿ ಪಕ್ಕ ಉನ್ನವಾರು ವಚ್ಚಾರು:
ಓಬಣ್ಣನಹಳ್ಳಿಯಲ್ಲಿ ಒಟ್ಟು 168 ಕುಟುಂಬಗಳಿದ್ದು ಅದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮಾಜದ 143, ಮಾದಿಗ ಸಮುದಾಯದ 18, ಐದು ಯಾದವ ಕುಟುಂಬ ಹಾಗೂ ಎರಡು ನಾಯಕ ಸಮುದಾಯಕ್ಕೆ ಸೇರಿದ ಮನೆಗಳಿವೆ. ಭೋವಿ ಸಮಾಜದ ಮಂದಿ ಸಹಜವಾಗಿಯೇ ತೆಲುಗು ಮಾತನಾಡುತ್ತಾರೆ. ಹಾಗಾಗಿ ಗೋವಿಂದ ಕಾರಜೋಳರನ್ನು ಕಂಡ ತಕ್ಷಣವೇ ತೆಲುಗಿನಲ್ಲಿ ಮೋದಿ ಪಕ್ಕಲೋ ಉನ್ನವಾರು ವಚ್ಚಾರು (ಮೋದಿ ಪಕ್ಕ ಇರೋರು ಬಂದಿದ್ದಾರೆ) ಎನ್ನುತ್ತಲೇ ಅವರನ್ನು ಸುತ್ತುವರಿದರು. ತೇಲಿದ ಬದುಕನ್ನು ತೋರಿಸಿದರು. ಮಹಿಳೆಯರು ಮುಗಿ ಬಿದ್ದು ತಮ್ಮ ಬದುಕಿನ ಹಿನಾಯ ಪರಿಸ್ಥಿತಿಗಳ ಹರವಿದರು.ನಂತರ ಗ್ರಾಮದ ಶಾಲೆಯ ಬಳಿ ಸಂತ್ರಸ್ತ ಕುಟುಂಬಗಳೊಂದಿಗೆ ಮಾತನಾಡಿದ ಅವರು, ಗ್ರಾಮ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಕ್ಷಣವೇ ಇಡೀ ಗ್ರಾಮವ ಸರ್ವೆ ಕೆಲಸ ಮಾಡಬೇಕು. ಎಷ್ಟು ಕುಟುಂಬಗಳು ವಾಸವಾಗಿವೆ ಎಂಬ ಖಚಿತ ಮಾಹಿತಿ ದಾಖಲಿಸಬೇಕು. ಗ್ರಾಮ ಠಾಣಾದಲ್ಲಿ ಎಲ್ಲಿಯಾದರೂ ಸರ್ಕಾರಿ ಭೂಮಿಯಿದ್ದರೆ ತಿಳಿಸುವಂತೆ ತಾಕೀತು ಮಾಡಿದರು.
ಪರಿಶಿಷ್ಟರಿಗೆ ಮನೆ ನಿರ್ಮಿಸಿಕೊಡಲು ಸಾಕಷ್ಟು ಅನುದಾನ ಲಭ್ಯವಿದ್ದು ಈ ನಿಟ್ಟಿನಲ್ಲಿ ಇದುವರೆಗೂ ಗಂಭೀರ ಪ್ರಯತ್ನಗಳ ಮಾಡದೇ ಇರುವುದರ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ತಹಸೀಲ್ದಾರ್ ಅವರ ತರಾಟೆಗೆ ತೆಗೆದುಕೊಂಡ ಅವರು ವಾರದೊಳಗೆ ಸಮೀಕ್ಷಾ ಕಾರ್ಯ ಮುಗಿಸಿ ವರದಿ ನೀಡಬೇಕು. ದಲಿತರ ಊರುಗಳು ಇಷ್ಟೊಂದು ಕೆಟ್ಟದಾಗಿ ಇರುವುದು ನೋವಿನ ಸಂಗತಿ. ಅಧಿಕಾರಿಗಳು ತಮ್ಮ ಮನದಲ್ಲಿ ಮನುಷ್ಯತ್ವ ಇದೆಯಾ ಎಂಬುದ ನೋಡಿಕೊಳ್ಳಿ ಎಂದು ಚುಚ್ಚಿದರು.ತಹಸೀಲ್ದಾರ್ ಡಾ.ನಾಗವೇಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ವಿಶೇಷ ಪ್ಯಾಕೇಜ್‌ಗೆ ಪ್ರಸ್ತಾವನೆ:ಸಂತ್ರಸ್ತರ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ತೀವ್ರ ಮಳೆಯಿಂದಾಗಿ ಓಬಣ್ಣನಹಳ್ಳಿ ಗ್ರಾಮದಲ್ಲಿ ಏನೂ ಉಳಿದಿಲ್ಲ. ಶೇ.90ರಷ್ಟು ಕುಟುಂಬಗಳು ಎಲ್ಲ ಕಳೆದುಕೊಂಡಿವೆ. ಸರ್ಕಾರ ನೀಡುವ ಐದು ಸಾವಿರ ರು. ತಾತ್ಕಾಲಿಕ ಪರಿಹಾರದಿಂದ ಏನೂ ಆಗದು. ಅವರ ಬದುಕನ್ನು ಕಟ್ಟಿ ಕೊಡುವ ನಿಟ್ಟಿನ ಪ್ರಯತ್ನಗಳಾಗಬೇಕು. ಈ ಸಂಬಂಧ ವಿಶೇಷ ಪ್ಯಾಕೇಜ್ ನೀಡುವಂತೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅನುದಾನದಲ್ಲಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕೂಡಲೇ ಸಲ್ಲಿಸಲಾಗುವುದು ಎಂದರು.
ಓಬಣ್ಣನಹಳ್ಳಿ ಗ್ರಾಮದ ಕೆಲವರಿಗೆ ನಿವೇಶನದ ಸಮಸ್ಯೆ ಜತೆಗೆ ಹಳ್ಳ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿದ್ದಾರೆ. ಅವುಗಳನ್ನು ತೆರವುಗೊಳಿಸಲು ತಿಳಿಸಿದ್ದೇನೆ. ಗ್ರಾಮದಲ್ಲಿ 3 ಎಕೆರೆ ಗ್ರಾಮಠಾಣಾ ಲಭ್ಯವಿದ್ದು, ಇದನ್ನು ಲೇ ಔಟ್ ಮಾಡಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನು ಪ್ರಕಾರ ಹಕ್ಕುಪತ್ರಗಳನ್ನು ನೀಡಿ, ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಗೋವಿಂದ ಕಾರಜೋಳ ಹೇಳಿದರು.